ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ರಚನೆಗೆ ಉಡುಪಿ ಜಿಲ್ಲಾ ಎನ್ ಎಸ್ ಯು ಐ ಸ್ವಾಗತ
ಉಡುಪಿ: ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಣಕ್ಕಾಗಿ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಮತ್ತು ಜಾಗೃತಿ ಕಮಿಟಿಗಳನ್ನು ರಚಿಸುವ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ಕಾರ್ಯಕ್ರಮ ಅಭಿನಂದನೀಯ ಎಂದು ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಸೌರಭ್ ಬಲ್ಲಾಳ್ ಹೇಳಿದ್ದಾರೆ.
ಉಡುಪಿ ಜಿಲ್ಲೆಗೆ ದೇಶ ವಿದೇಶದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದು ವಿವಿಧ ರೀತಿಯ ಒತ್ತಡ, ಆಸೆ ಆಮಿಷಗಳಿಗೆ ಒಳಗಾಗಿ ಡ್ರಗ್ಸ್ ಜಾಲದಲ್ಲಿ ಸಿಲುಕುತ್ತಿದ್ದಾರೆ. ಡ್ರಗ್ಸ್ ವಿರುದ್ದ ಎನ್ ಎಸ್ ಯು ಐ ವಿದ್ಯಾರ್ಥಿಗಳಲ್ಲಿ ಆಗಾಗ ಜಾಗೃತಿ ನೀಡುತ್ತಾ ಬಂದಿರುತ್ತದೆ. ಮಾದಕ ದ್ರವ್ಯಗಳ ಚಟಕ್ಕೆ ಬಲಿಯಾದ ವಿದ್ಯಾರ್ಥಿಗಳಿಗೆ ಸೂಕ್ತ ಸಮಾಲೋಚನೆ ಮತ್ತು ಚಿಕತ್ಸೆ ನೀಡಿ ಅದರಿಂದ ಹೊರಬರುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ಉಡುಪಿ, ಮಣಿಪಾಲದಂತ ಶೈಕ್ಷಣಿಕ ನಗರದಲ್ಲಿ ಬೇರೆ ಬೇರೆ ದೇಶಗಳಿಂದ ಡ್ರಗ್ಸ್ ಪೊರೈಕೆಯಾಗುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಮತ್ತು ಜಾಗೃತಿ ಕಮಿಟಿ ರಚನೆ, ಜಾಗೃತಿ ಕಾರ್ಯಕ್ರಮ ಆಯೋಜನೆ, ವಿದ್ಯಾರ್ಥಿಗಳಿಗೆ ರಕ್ತಪರೀಕ್ಷೆ ಮಾಡುವ ಮೂಲಕ ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ನೂತನ ಪೊಲೀಸ್ ವರಿಷ್ಠಾಧಿಕಾರಿಗಳು ಉತ್ತಮ ಹೆಜ್ಜೆ ಇಟ್ಟಿದ್ದಾರೆ. ಅವರ ಈ ಕಾರ್ಯಕ್ಕೆ ಉಡುಪಿ ಜಿಲ್ಲಾ ಎನ್ ಎಸ್ ಯು ಐ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಸೌರಭ್ ಬಲ್ಲಾಳ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.