“ಕಾಸ್ಮೋಸ್” ಅಂತರ್ ಕಾಲೇಜು ಫೆಸ್ಟ್

Spread the love

“ಕಾಸ್ಮೋಸ್” ಅಂತರ್ ಕಾಲೇಜು ಫೆಸ್ಟ್

ವಿದ್ಯಾಗಿರಿ: ಭೂಮಿ ಎಲ್ಲಾ ಗ್ರಹಗಳಿಗಿಂತ ವಿಭಿನ್ನ ಗ್ರಹವಾಗಿದ್ದು, ಕೇವಲ ಇದರಲ್ಲಿ ಮಾತ್ರ ಜೀವಿಗಳು ಬದುಕಲು ಸಾಧ್ಯ. ಭೂಮಿಯ ಮೇಲೆ ಬೀರುವ ಸೂರ್ಯನ ಪ್ರಖರ ಕಿರಣಗಳನ್ನು ಓಜೋನ್ ಪದರವು ತಡೆಗಟ್ಟುತ್ತದೆ. ಆದ್ದರಿಂದ ಓಜೋನ್ ಪದರವನ್ನು ರಕ್ಷಿಸುವುದು ನಮ್ಮೆಲರ ಆದ್ಯ ಕರ್ತವ್ಯ ಎಂದು ಇಸ್ರೋ ಅರ್ತ್ ಅಬ್ಸೋರ್ವೇಶನ್ಸ್ ಅಪ್ಲಿಕೇಶನ್ಸ್ ಆಂಡ್ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಪ್ರೋಗ್ರಾಮ್ ಆಫೀಸ್‍ನ ನಿರ್ದೇಶಕ ಡಾ. ಪಿ. ಜಿ ದಿವಾಕರ್ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಾನವಿಕ ವಿಭಾಗದ ವತಿಯಿಂದ ನಡೆದ “ಕಾಸ್ಮೋಸ್” ಅಂತರ್ ಕಾಲೇಜು ಫೆಸ್ಟ್‍ನ್ನು ಉದ್ಘಾಟಿಸಿ ಮಾತನಾಡಿದರು.

ಬಾಹ್ಯಾಕಾಶದ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದ್ದು, ಇದರಿಂದ ಸೂಕ್ತ ಜ್ಞಾನ ಸಂಪಾದನೆ ಮಾಡಬಹುದು. ನಾವು ನಮ್ಮ ಗ್ರಹದ ಬಗ್ಗೆ ಹಾಗೂ ಅದರ ಚಲನ ವಲನದ ಕುರಿತು ಸಂಪೂರ್ಣ ಜ್ಞಾನವನ್ನು ಪಡೆದುಕೊಂಡಿರಬೇಕು. ಯುವಕರು ನಾವು ನಮ್ಮ ಸಾಮಥ್ರ್ಯವನ್ನು ಅರಿತು ನೂತನ ಆವಿಷ್ಕಾರಗಳನ್ನು ಮಾಡುವುದು ಅಗತ್ಯ. ಇದಕ್ಕಾಗಿ ನಾವು ಯುವಕರಿರುವಾಗಲೇ ತಮ್ಮದೇ ಆದ ಟೆಲಿಸ್ಕೋಪ್‍ನ್ನು ನಿರ್ಮಿಸಿ ಅದರಲ್ಲಿ ಬಾಹ್ಯಾಕಾಶವನ್ನು ಗಮನಿಸುವುದರಿಂದ ಬಾಹ್ಯಕಾಶದ ಬಗೆಗಿನ ಜ್ಞಾನವನ್ನು ಇಮ್ಮಡಿಗೊಳಿಸಬಹುದು. ಯಾವುದೇ ಯೋಜನೆಗಳನ್ನು ಮಾಡುವಾಗ ನಿಖರವಾದ ಮಾಹಿತಿಯನ್ನು ಕಲೆ ಹಾಕುವುದು ಅಗತ್ಯ. ಯುವಕರ ಕ್ರೀಯಾಶೀಲ ಪ್ರಯೋಗಗಳಿಂದ ಬ್ರಹ್ಮಾಂಡದ ಅನ್ವೇಷಣೆ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಯಾವುದೇ ವಿಭಾಗದವರು ತಮ್ಮ ಚೌಕಟ್ಟಿಗೆ ಸೀಮತವಾಗಿರದೇ ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ಜ್ಞಾನ ಅತ್ಯಗತ್ಯ. ನಮ್ಮ ದೇಶವು ಬಾಹ್ಯಾಕಾಶಗಳ ಸಂಶೋಧನೆಯಲ್ಲಿ ಉನ್ನತ ಮಟ್ಟದಲ್ಲಿರುವುದು ಸಂತಸದ ಸಂಗತಿ. ಆದ್ದರಿಂದ ಸಂಶೋಧನೆಯಲ್ಲಿ ನಮ್ಮ ದೇಶದ ಉನ್ನತೀಕರಣಕ್ಕೆ ಯವಕರ ಪಾತ್ರ ಪ್ರಮುಖವಾದುದು. ಇದರಿಂದ ನಮ್ಮ ದೇಶದ ಘನತೆ ಹೆಚ್ಚಾಗುತ್ತದೆ ಎಂದರು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಬ್ರಹ್ಮಾಂಡದಲ್ಲಿ ಮನುಷ್ಯರು ಒಂದು ಸಣ್ಣ ಭಾಗ. ಬಾಹ್ಯಾಕಾಶಗಳ ಕುರಿತು ನಾವು ನಮ್ಮ ಜ್ಞಾನ ವೃದ್ಧಿಸಿಕೊಳ್ಳುವುದು ಅಗತ್ಯ. ಸದ್ಯದಲ್ಲಿಯೇ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ದೇಶವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂದರು

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ನವದೆಹಲಿಯಲ್ಲಿ ತುಳು ವಿಕಿಪಿಡಿಯಾದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಪೇಪರ್ ಪ್ರಸೆಂಟೇಶನ್, ಬಜೆಟ್ ಮಂಡನೆ, ಚಿತ್ರಕಲೆ, ವರದಿಗಾರಿಕೆ, ಫೋಟೊಗ್ರಾಫಿ, ಮಾಕ್ ಪ್ರೆಸ್ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಕಲಾ ವಿಭಾಗದ ಡೀನ್ ಸಂಧ್ಯಾ ಕೆ, ಎಸ್, ಆಳ್ವಾಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜುನಾಥ್ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಅಭಿನಂದನ್ ಮತ್ತು ರಾಹುಲ್ ಉಪಸ್ಥಿತರಿದ್ದರು. ಪ್ರಣವ್ ಸ್ವಾಗತಿಸಿ, ಅಮೃತ್ ವಂದಿಸಿ, ಸೋನಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love