ಕಿನ್ನಿಗೋಳಿ: ಚಪ್ಪಲಿ ಅಂಗಡಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಅಂಗಡಿ ಮಾಲಕನಿಗೆ 3 ವರ್ಷ ಜೈಲು ಶಿಕ್ಷೆ
ಕಿನ್ನಿಗೋಳಿ: ಚಪ್ಪಲಿ ಖರೀದಿಸಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಶೂ ಫ್ಯಾಶನ್ ಅಂಗಡಿ ಮಾಲಕನಿಗೆ ಮಾನ್ಯ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ₹10,500 ದಂಡ ವಿಧಿಸಿದೆ.
ದಿನಾಂಕ 12-12-2021 ರಂದು ಕಿನ್ನಿಗೋಳಿಯ ಶೂ ಫ್ಯಾಶನ್ ಅಂಗಡಿಗೆ ಚಪ್ಪಲಿ ಖರೀದಿಸಲು ಬಂದ ಮಹಿಳೆಯನ್ನು, ಅಂಗಡಿ ಮಾಲಕ ಸಂಶುದ್ದೀನ್ ಎಂಬಾತನು ಚಪ್ಪಲಿ ತೋರಿಸುವ ನೆಪದಲ್ಲಿ ಅಂಗಡಿಯೊಳಗಿನ ಕಂಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ, ಮಹಿಳೆಯ ಭುಜ ಮುಟ್ಟಿ, ಎದೆಗೆ ಕೈ ಹಾಕಿ ಮಾನಭಂಗಪಡಿಸಿದ್ದಲ್ಲದೇ, ಬಟ್ಟೆ ತೆಗೆಯುವಂತೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ನೊಂದ ಮಹಿಳೆ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 136/2021 ಕಲಂ 342, 354(ಎ), 354(ಬಿ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಕೆ. ಕುಸುಮಾಧರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ವಿನಾಯಕ ತೊರಗಲ್ ಅವರು ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ಮೂಡಬಿದ್ರೆ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದಿದ್ದು, ಮಾನ್ಯ ನ್ಯಾಯಾಧೀಶರಾದ ಶ್ರೀ ಮಧುಕರ ಪಿ. ಬಾಗವತ್ ಅವರು ದಿನಾಂಕ 06-01-2026 ರಂದು ತೀರ್ಪು ಪ್ರಕಟಿಸಿ, ಆರೋಪಿಯಾದ ಸಂಶುದ್ದೀನ್ (ತಂದೆ: ಲೇಟ್ ಮೊಹಮ್ಮದ್), ಜೋಡುಬೈಲು ಗೋಳಿಜಾರ ರಸ್ತೆ, ತಾಳಿಪಾಡಿ ಗ್ರಾಮ, ಕಿನ್ನಿಗೋಳಿ ನಿವಾಸಿ ಎಂಬಾತನನ್ನು ದೋಷಿ ಎಂದು ಘೋಷಿಸಿದರು. ನ್ಯಾಯಾಲಯವು ಆರೋಪಿಗೆ 3 ವರ್ಷಗಳ ಸಜೀವ ಜೈಲು ಶಿಕ್ಷೆ ಹಾಗೂ ₹10,500 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದ ತನಿಖೆಯಲ್ಲಿ ಪಿಎಸ್ಐ ವಿನಾಯಕ ತೊರಗಲ್ ಅವರು ಪ್ರಮುಖ ಪಾತ್ರ ವಹಿಸಿದ್ದು, ಎಎಸ್ಐ ಸಂಜೀವ ಎ.ಪಿ ಅವರು ಸಹಕರಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ನೇತ್ರಾವತಿ ಕೋಟ್ಯಾನ್ ಅವರು ಸಮರ್ಥವಾಗಿ ವಾದ ಮಂಡಿಸಿ ಆರೋಪಿಗೆ ಶಿಕ್ಷೆ ಆಗಲು ಮಹತ್ವದ ಪಾತ್ರ ವಹಿಸಿದ್ದಾರೆ.













