ಕುಂದಾಪುರದಲ್ಲಿ ಸಂಭ್ರಮದ 71ನೇ ಗಣರಾಜ್ಯೋತ್ಸವ

????????????????????????????????????
Spread the love

ಕುಂದಾಪುರದಲ್ಲಿ ಸಂಭ್ರಮದ 71ನೇ ಗಣರಾಜ್ಯೋತ್ಸವ

ಕುಂದಾಪುರ: ಕುಂದಾಪುರ ತಾಲೂಕು ಆಡಳಿತ, ಪುರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ 71ನೇ ಗಣರಾಜ್ಯೋತ್ಸವ ಸಂಭ್ರಮ ವಿಜೃಂಭಣೆಯಿಂದ ಜರುಗಿತು.

ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಧ್ವಜಾರೋಹಣ ನೆರವೇರಿಸಿ  ರಾಜ್ಯಗಳ ಒಕ್ಕೂಟಗಳನ್ನೊಳಗೊಂಡ ಪ್ರಬಲ ಕೇಂದ್ರವನ್ನು ಹೊಂದಿರುವ ರಾಷ್ಟ್ರ ನಮ್ಮದು. ನಮ್ಮ ದೇಶದಲ್ಲಿ ಮೂರುವರೆ ಸಾವಿರ ಜಾತಿಗಳಿದ್ದರೂ ಎಲ್ಲಾ ಜಾತಿ-ಧರ್ಮಗಳ ಜನರು ಸಮಾನವಾಗಿ ಬದುಕುವ ಹಕ್ಕನ್ನು ಈ ದೇಶದ ಸಂವಿಧಾನ ನೀಡಿದ್ದು, ಭಾರತ ವಿವಿಧತೆಯಲ್ಲಿ ಏಕತೆ ಸಾರಿದ ದೇಶ. ಇಲ್ಲಿ ಪ್ರಜೆಗಳೇ ಪ್ರಭುಗಳು. ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳು ನಮ್ಮೊಳಗೆ ಐಕ್ಯತೆ, ಒಗ್ಗಟ್ಟನ್ನು ಬೆಳೆಸಬೇಕು. ನಾವೆಲ್ಲರೂ ತಾಯಿ ಭಾರತಾಂಬೆಯ ಮಕ್ಕಳೆಂಬ ಹೆಮ್ಮೆ ಹೆಚ್ಚಿಸಬೇಕು ಎಂದು   ಹೇಳಿದರು.

 ಅಂಬೇಡ್ಕರ್ ನೀಡಿದ ಸಂವಿಧಾನದಿಂದಲೇ ಇಂದು ನಾವೆಲ್ಲರೂ ಗಟ್ಟಿಯಾಗಿ ನಿಂತು ಮಾತನಾಡಲು, ಬದುಕಲು ಸಾಧ್ಯವಾಗಿದ್ದು. ಇಂತಹ ಸಂವಿಧಾನವನ್ನು ಜಾರಿಗೆ ತಂದ ಸುದಿನ ಇಂದು. ಈ ಸಂವಿಧಾನವನ್ನು ಜನರಿಗೆ ಅನುಕೂಲವಾಗುವ ಹಾಗೆ ಮತ್ತು ಜನರನ್ನು ಕೇಂದ್ರೀಕರಿಸಿಕೊಂಡು ಉಳಿಸಿಕೊಂಡು ಹೋಗಬೇಕಾಗುತ್ತದೆ ಎಂದರು.

ದೀಪದ ಬುಡದಲ್ಲಿ ಕತ್ತಲೆ ಎನ್ನುವ ಹಾಗೆ ಪ್ರಜಾಪ್ರಭುತ್ವದ ಮುಂದಾಳಾದ ನಮ್ಮ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಾಜಕೀಯ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಂತಹ ಗಂಭೀರ ಸಮಸ್ಯೆಗಳು ದೇಶದ ಜನರನ್ನು ಕಾಡುತ್ತಿದೆ. ಈ ವ್ಯವಸ್ಥೆಯಲ್ಲಿ ನ್ಯೂನ್ಯತೆಗಳಿವೆ. ಭ್ರಷ್ಠಚಾರದಂತಹ ಸಮಸ್ಯೆಗಳನ್ನು ನಾವೇ ಕಡಿಮೆ ಮಾಡಿಕೊಳ್ಳಬೇಕು. ಇದಕ್ಕೆ ಇಚ್ಛಾಶಕ್ತಿಯೂ ಬೇಕು. ಇದನ್ನು ಈ ದೇಶದ ಪ್ರತಿಯೊಬ್ಬರು ಬೆಳೆಸಿಕೊಳ್ಳುವಂತಾಗಲಿ ಎಂದರು.

ಬೇರೆ ದೇಶಗಳಿಗೆ ಪೈಪೋಟಿ ಕೊಟ್ಟು ಆರ್ಥಿಕ ರಾಜಕೀಯ, ಕೆಳವರ್ಗ, ವಿಜಾÐನ-ತಂತ್ರಜಾÐನ, ಬಾಹ್ಯಾಕಾಶ ನಾವು ಮುಂದಿದ್ದೇವೆ. ಇದನ್ನು ಕಂಡು ಬೇರೆ ದೇಶಗಳು ಮೂಗು ಮೇಲೆ ಬೆರಳಿಡುವ ಹಾಗೆ ಆಗಿದೆ. ಅಲ್ಲದೇ ನಮ್ಮ ವಿದೇಶಾಂಗ ನೀತಿ ಮತ್ತು ವಿಶ್ವಸಂಸ್ಥೆ ಮಟ್ಟದಲ್ಲಿ ನಮ್ಮ ದೇಶದ ಹೆಸರು ರಾರಾಜಿಸುತ್ತಿದೆ ಎಂದು ಅವರು ಹೇಳಿದರು.

ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಶ್ರೀಧರ್ ಶೇರುಗಾರ್, ಪ್ರಭಾಕರ ವಿ, ತಹಸೀಲ್ದಾರ್ ತಿಪ್ಪೇಸ್ವಾಮಿ, ಎಎಸ್ಪಿ ಹರಿರಾಮ್ ಶಂಕರ್, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ರಾಜ್ ಕುಮಾರ್ ಯುವಜನ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮಾಜಿ ನಾಮನಿರ್ದೇಶಿತ ಸದಸ್ಯ ಕೇಶವ್ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಇದ್ದರು.

ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ, ಪಿಎಸ್‍ಐ ಹರೀಶ್ ಆರ್.ನಾಯ್ಕ್ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಎನ್‍ಸಿಸಿ, ನೆವಿ, ಸ್ಕೌಟ್, ಗೈಡ್ಸ್, ಸೇವಾದಳದಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕುಂದಾಪುರ ಸಂತ ಜೋಸೇಫರ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಪಥಸಂಚಲನದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು.

ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ(ಬೋರ್ಡ್ ಹೈಸ್ಕೂಲ್)ದ ಎಲ್ಲಾ 357 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಸಮೂಹ ನೃತ್ಯ ಪ್ರದರ್ಶನ ಆಕರ್ಷಣೀಯವಾಗಿ ಮೂಡಿಬಂದಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮ ಜರುಗಿದವು.

ತಾಲೂಕು ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಸ್ವಾಗತಿಸಿದರು. ಸೈಂಟ್ ಮೇರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ವಂದಿಸಿದರು.


Spread the love