ಕುಂದಾಪುರ: ದಲಿತರಿಗೆ ಹಕ್ಕುಪತ್ರ ಸಿಕ್ಕರೂ ಭೂಮಿ ವಿಂಗಡಿಸದ ಆಡಳಿತ

Spread the love

ಕುಂದಾಪುರ: ದಲಿತರಿಗೆ ಹಕ್ಕುಪತ್ರ ಸಿಕ್ಕರೂ ಭೂಮಿ ವಿಂಗಡಿಸದ ಆಡಳಿತ

ಕುಂದಾಪುರ: ಕಳೆದ ಐದು ವರ್ಷಗಳ ಹಿಂದೆ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ಹೋರಾಟ ನಡೆಸಿ ಕೊನೆಗೂ ಭೂಮಿಯನ್ನು ಹೋರಾಟದ ಮೂಲಕ ದಕ್ಕಿಸಿಕೊಂಡ ಇಲ್ಲಿನ ಮೊವಾಡಿ ದಲಿತರು ಇದೀಗ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮಪಂಚಾಯತ್ ವ್ಯಾಪ್ತಿಯ ಮೋವಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೋರಾಟದ ಮೂಲಕ ಸರ್ವೇನಂಬರ್ 121ಎ ಪಿ1ರಲ್ಲಿ ಆರು ಎಕರೆ ಭೂಮಿಯನ್ನು ಪಡೆದುಕೊಂಡಿದ್ದರು. ಮೊದಲು 50 ಕುಟುಂಬಕ್ಕೆ ಭೂಮಿ ನೀಡುವ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದಿದ್ದು, ಬಳಿಕ 50 ಜನರಲ್ಲಿ 28 ಜನರಿಗೆ ಸೈಟ್ ಮಂಜೂರುಗೊಳಿಸಿದೆ. 28 ಜನರ ಪೈಕಿ 14 ಕುಟುಂಬಕ್ಕೆ ಈಗಾಗಲೇ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಮನೆ ನಿರ್ಮಿಸಿಕೊಳ್ಳಲು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಣವೂ ಬಂದಿದೆ. ಆದರೆ ತಾಲೂಕು ಆಡಳಿತ ಮಾತ್ರ ಸಂತ್ರಸ್ತ ಕುಟುಂಬಗಳಿಗೆ ನಿವೇಶನ ವಿಂಗಡಿಸಿ ಕೊಡಲು ಮೀನಾಮೇಷ ಎಣಿಸುತ್ತಿದೆ. ಮನೆ ನಿರ್ಮಿಸಿಕೊಳ್ಳಲು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಣ ಬಂದರೂ ಸೈಟ್ ವಿಂಗಡಿಸದೇ ಇರುವುದರಿಂದ ದಲಿತ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿಂದೆ ವಾಸಿಸಲು ಜಾಗವಿಲ್ಲದೆ ದಲಿತರು ಮೊವಾಡಿ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿ ವಾಸ್ತವ್ಯ ಹೂಡಿದ್ದರು.

ಅಂದಿನ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ. ವಿಶಾಲ್ ದಲಿತರು ಕೂತಿದ್ದ ಆರು ಎಕರೆ ಜಾಗವನ್ನು ದಲಿತರಿಗೆ ಮಂಜೂರುಗೊಳಿಸಿದ್ದರು. ಆ ಬಳಿಕ ತ್ರಾಸಿ ಪಂಚಾಯತ್ ದಲಿತ ನಿವಾಸಿಗಳ ಸಹಕಾರದಿಂದ ಮರಗಳನ್ನು ತೆರವುಗೊಳಿಸಿ ಭೂಮಿಯನ್ನು ಸಮತಟ್ಟುಗೊಳಿಸಿತು. ಬಳಿಕ ಜಿಲ್ಲಾಧಿಕಾರಿಯಾಗಿ ಬಂದ ಪ್ರಿಯಾಂಕ ಮೇರಿ ಪ್ರಾನ್ಸಿಸ್ ತಾಂತ್ರಿಕ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ ದಲಿತ ಮುಖಂಡರ ಒತ್ತಾಯದ ಬಳಿಕ ಪ್ರತಿಯೊಬ್ಬರಿಗೂ 2.75 ಸೆಂಟ್ಸ್ ಇದ್ದುದನ್ನು 4.75 ಸಂಟ್ಸ್ಗೆ ಏರಿಸಿದ್ದರು. ಪ್ರತೀ ಮನೆಗೆ 3.80 ಲಕ್ಷ ಅನುದಾನ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಆರು ತಿಂಗಳ ಹಿಂದೆ ಬಂದಿದೆ. ಆದರೆ ಸೈಟ್ ವಿಂಗಡಿಸದೆ ಇರುವುದರಿಂದ ಮನೆ ನಿರ್ಮಾಣ ಕಾರ್ಯಕ್ಕೆ ತೊಡಕುಂಟಾಗಿದೆ ಎಂದು ದಲಿತ ಕುಟುಂಬಗಳು ಆರೋಪಿಸಿವೆ.

ಅಧಿಕಾರಿಗಳು ಯಾರ್ಯಾರಿಗೆ ಎಲ್ಲೆಲ್ಲಿ ಎಂದು ಭೂಮಿಯನ್ನು ವಿಂಗಡಿಸಿ ಕೊಟ್ಟರೆ ಶೀಘ್ರವೇ ಮನೆ ನಿರ್ಮಿಸಿಕೊಳ್ಳಬಹುದು. ಈಗಾಗಲೇ ದಲಿತರು ಬಾಡಿಗೆ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ನಮಗೆ ಸುಸಜ್ಜಿತ ಮನೆ ನಿರ್ಮಿಸಿಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಾಲ್ಕೈದು ದಲಿತ ಕುಟುಂಬಗಳು ಈಗಾಗಲೇ ಮಂಜೂರಾದ ಜಾಗದಲ್ಲೇ ಗುಡಿಸಲುಗಳನ್ನು ನಿರ್ಮಿಸಿಕೊಂಡು ಹೋರಾಟಕ್ಕಿಳಿದಿದೆ. ಗುಡಿಸಲಲ್ಲಿ “ಮಹಾನಾಯಕ ಅಂಬೇಡ್ಕರ್” ಅವರ ಭಾವಚಿತ್ರವನ್ನು ತೂಗು ಹಾಕಿ ಪ್ರತಿಭಟನೆಗೆ ಮುಂದಾಗಿರುವ ದಲಿತರು ವಾರದೊಳಗೆ ಸ್ಥಳ ವಿಂಗಡಿಸಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡದಿದ್ದರೆ 28 ದಲಿತ ಕುಟುಂಬಗಳು ಇದೇ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಇಲ್ಲೇ ವಾಸ್ತವ್ಯ ಹೂಡಲಿದ್ದೇವೆ ಎಂದು ಎಚ್ಚರಿಸಿವೆ.

ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ ಹಕ್ಕುಪತ್ರ ವಿತರಿಸಿ ಕೈಕಟ್ಟಿ ಕುಳಿತಿದ್ದಾರೆ. ಕೆಲ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿದೆ ಬಿಟ್ಟರೆ ಇದುವರೆಗೂ ಯಾವುದೇ ಕಾರ್ಯಗಳು ನಡೆದಿಲ್ಲ. ಹೀಗಾಗಿ ನಮಗೆ ಮೀಸಿಲಿಟ್ಟ ಜಾಗದಲ್ಲಿ ನಮ್ಮದೇ ಹಣದಲ್ಲಿ ನಾವು ಗುಡಿಸಲನ್ನು ನಿರ್ಮಿಸಿಕೊಳ್ಳುತ್ತೇವೆ ಎಂಬ ಮಾಹಿತಿಯನ್ನು ಒಂದು ವಾರದ ಹಿಂದೆಯೇ ಗ್ರಾ.ಪಂ, ತಾ.ಪಂ, ಜಿ.ಪಂ, ಸ್ಥಳೀಯ ಪೊಲೀಸ್ ಠಾಣೆ, ತಹಸೀಲ್ದಾರ್, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯವರಿಗೆ ಕೊಟ್ಟಿದ್ದೇವೆ. ಆದರೂ ನಮಗೆ ಯಾವುದೇ ರೀತಿಯಾಗಿ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಗುಡಿಸಲು ನಿರ್ಮಿಸಿಕೊಂಡು ಪ್ರತಿಭಟನೆ ಆರಂಭಿಸಿದ್ದೇವೆ ಎಂದು ದಲಿತ ಕುಟುಂಬಗಳು ಹೇಳಿಕೊಂಡಿವೆ.

ಒಟ್ಟಿನಲ್ಲಿ ಹೋರಾಟದ ಮೂಲಕ ಭೂಮಿ ದಕ್ಕಿಸಿಕೊಂಡ ದಲಿತರು ಇದೀಗ ಮನೆ ನಿರ್ಮಿಸಿಕೊಳ್ಳಲು ಸಾಕಷ್ಟು ಹರಸಾಸಪಡುತ್ತಿದ್ದಾರೆ. ಭೂಮಿ ದಕ್ಕಿಸಿಕೊಂಡ ಹಾಗೆ ಅದೇ ರೀತಿಯ ಹೋರಾಟವನ್ನು ಪ್ರಾರಂಭಿಸಿರುವ ದಲಿತರಿಗೆ ನ್ಯಾಯ ಸಿಗುತ್ತದೆ ಎಂಬ ಅಚಲ ನಂಬಿಕೆ ಇದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮನೆ ನಿರ್ಮಾಣ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಕೊಡಲಿ ಎನ್ನವುದು ನಮ್ಮ ಆಶಯ.


Spread the love