ಕುದುರೆಮುಖ-ಮಂಗಳೂರು ಹೆದ್ದಾರಿಯಲ್ಲಿ ಭೂ ಕುಸಿತ : ವಾಹನ ಸಂಚಾರ ಸ್ಥಗಿತ

Spread the love

ಕುದುರೆಮುಖ-ಮಂಗಳೂರು ಹೆದ್ದಾರಿಯಲ್ಲಿ ಭೂ ಕುಸಿತ : ವಾಹನ ಸಂಚಾರ ಸ್ಥಗಿತ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಚಿಕ್ಕಮಗಳೂರು-ಕಳಸ-ಕುದುರೆಮುಖ-ಮಂಗಳೂರು ಸಂಪರ್ಕದ ಹೆದ್ದಾರಿಯಲ್ಲಿ ನಾಲ್ಕು ಕಡೆಗಳಲ್ಲಿ ಭೂ ಕಸಿತ ಉಂಟಾಗಿ ರಸ್ತೆಯ ಮೇಲೆ ಮಣ್ಣು ಬಿದ್ದ ಪರಿಣಾಮ ರವಿವಾರ ಬೆಳಗಿನಿಂದ ಸಂಜೆಯವರೆಗೂ ವಾಹನ ಸಂಚಾರ ಸ್ಥಗಿತಗೊಂಡಿದ್ದ ಘಟನೆ ನಡೆದಿದೆ.

ಮೂಡಿಗೆರೆ ತಾಲೂಕು ವ್ಯಾಪ್ತಿಯ ಕಳಸ ಹೋಬಳಿ ವ್ಯಾಪ್ತಿಯ ಕಳಸ, ಕುದುರೆಮುಖ, ಸಂಸೆ, ಜಾಂಬಳೆ ಸುತ್ತಮುತ್ತು ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಕುದುರೆಮುಖ ಸಮೀಪದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಮೇಲೆಯೇ ಮಣ್ಣು ಬಿದ್ದಿದೆ. ಇದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಸಂಚಾರ ಸ್ಥಗಿತಗೊಂಡಿದ್ದ ಪರಿಣಾಮ ಚಿಕ್ಕಮಗಳೂರು, ಶೃಂಗೇರಿ, ಹೊರನಾಡಿನಿಂದ ಕಳಸ ಕುದುರೆಮುಖ ಹೆದ್ದಾರಿ ಮೂಲಕ ಮಂಗಳೂರು, ಧರ್ಮಸ್ಥಳಕ್ಕೆ ತೆರಳುತ್ತಿದ್ದ ಲಘು ವಾಹನ ಹಾಗೂ ಭಾರೀ ವಾಹನಗಳು ಬೆಳಗಿನಿಂದ ಸಂಜೆವರೆಗೂ ರಸ್ತೆ ಬದಿಯಲ್ಲಿ ಸಾಲು ಗಟ್ಟಿ ನಿಂತಿದ್ದವು. ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ವಾಹನಗಳು ಹಿಂದೆ ಹೋಗಲಾರದೇ, ಮುಂದೆಯೂ ಹೋಗಲಾರದೇ ರಸ್ತೆ ಮಧ್ಯೆಯೇ ಸಿಕ್ಕಿಕೊಂಡಿದ್ದವು. ಅಲ್ಲದೇ ಚಾರ್ಮಾಡಿ ಘಾಟ್‍ನಲ್ಲಿ ಭಾರೀ ವಾಹನಗಳ ಸಂಚಾರವನ್ನು ಶನಿವಾರ ಜಿಲ್ಲಾಧಿಕಾರಿ ನಿಷೇದಿಸಿದ್ದ ಹಿನ್ನೆಲೆಯಲ್ಲಿ ಹಾಸನ, ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ವಾಹನಗಳು ಕೊಟ್ಟಿಗೆಹಾರ ಕಳಸ ಮಾರ್ಗವಾಗಿ ಕುದುರೆಮುಖ ಮೂಲಕ ಮಂಗಳೂರಿಗೆ ಇದೇ ಹೆದ್ದಾರಿಯಲ್ಲಿ ಆಗಮಿಸಿದ್ದರಿಂದ ವಾಹನದಟ್ಟಣೆ ಹೆಚ್ಚಾಗಿತ್ತು.

ಭೂ ಕುಸಿತದಿಂದ ರಸ್ತೆ ಮೇಲೆ ಸುರಿದಿದ್ದ ಭಾರೀ ಮಣ್ಣನ್ನು ತೆರವುಗೊಳಿಸಲು ಕುದುರೆಮುಖ ವಿಭಾಗದ ಅರಣ್ಯ ಇಲಾಖೆ, ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಸಾರ್ವಜನಿಕರು ಜೆಸಿಬಿ ಮೂಲಕ ಮಣ್ಣು ತೆರವಿಗೆ ಮುಂದಾಗಿದ್ದರು. ಆದರೆ ಭಾರೀ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೆ ತೊಂದರೆಯಾಗಿತ್ತು. ಮಣ್ಣು ತೆರವು ಕಾರ್ಯಾಚರಣೆ ವೇಳೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ತೆರವು ಕಾರ್ಯಾಚರಣೆಗೆ ಅಗತ್ಯವಿದ್ದ ಕ್ರಮ ವಹಿಸಿದ್ದರು. ಸಂಜೆ ವೇಳೆಗೆ ಮಣ್ಣನ್ನು ತೆರವುಗೊಳಿಸಲಾಯಿತು. ಇದರಿಂದಾಗಿ ವಾಹನಗಳು ಎರಡೂ ಬದಿಯಲ್ಲೂ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂದವು. ಸಂಜೆ ವೇಳೆ ಮಣ್ಣು ತೆರವುಗೊಳಿಸಿದ್ದರಿಂದ ಎರಡೂ ಬದಿಯಿಂದ ಒಂದೊಂದೇ ವಾಹನಗಳನ್ನು ಬಿಡುವ ಮೂಲಕ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ಕ್ರಮ ವಹಿಸಿದ್ದರು.


Spread the love