ಕುವೈಟ್ ನಲ್ಲಿ ತೊಂದರೆಗೆ ಸಿಲುಕಿರುವ ಮಂಗಳೂರಿನ ಯುವಕರ ರಕ್ಷಣೆಗೆ ಸೂಕ್ತ ಕ್ರಮ- ಶಾಸಕ ಕಾಮತ್

Spread the love

ಕುವೈಟ್ ನಲ್ಲಿ ತೊಂದರೆಗೆ ಸಿಲುಕಿರುವ ಮಂಗಳೂರಿನ ಯುವಕರ ರಕ್ಷಣೆಗೆ ಸೂಕ್ತ ಕ್ರಮ- ಶಾಸಕ ಕಾಮತ್

ಮಂಗಳೂರು: ಕುವೈಟ್ ಗೆ ಉದ್ಯೋಗಕ್ಕೆಂದು ತೆರಳಿದ ಮಂಗಳೂರು ಮೂಲದ 35 ಯುವಕರು ಉದ್ಯೋಗವೂ ಇಲ್ಲದೆ, ಆಹಾರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ದಿನ ದೂಡುತ್ತಿರುವುದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಗಮನಕ್ಕೆ ಬಂದ ತಕ್ಷಣ ಅವರು ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಶಾಸಕ ಕಾಮತ್ ಅವರು ತೊಂದರೆಗೆ ಸಿಲುಕಿರುವ ಯುವಕರ ಹೆಸರು ಮತ್ತು ದಾಖಲೆಗಳನ್ನು ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆ, ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಆ ಬಗ್ಗೆ ಫಾಲೋ ಅಪ್ ಕೂಡ ನಡೆಸುತ್ತಿದ್ದಾರೆ. ಅದರೊಂದಿಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಕೇಂದ್ರ ಸಚಿವರಾಗಿದ್ದ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ಮೂಲಕವೂ ವಿದೇಶಾಂಗ ಇಲಾಖೆಗೆ ಅತಂತ್ರ ಸ್ಥಿತಿಯಲ್ಲಿರುವ ಯುವಕರ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಡಿವಿ ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಅವರು ಕೂಡ ಆ ಬಗ್ಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಪ್ರಸ್ತುತ ಕುವೈಟ್ ನಲ್ಲಿ ಸಂಕಷ್ಟವನ್ನು ಅನುಭವಿಸುತ್ತಿರುವ ಆ ಯುವಕರಿಗೆ ಕುವೈಟ್ ನಲ್ಲಿಯೇ ಉದ್ಯೋಗ ಮಾಡುವ ಯಾವುದೇ ಆಸಕ್ತಿ ಇಲ್ಲ. ಅವರೆಲ್ಲರೂ ತಾಯ್ನಾಡಾಗಿರುವ ಭಾರತಕ್ಕೆ ಬರುವ ಅಭಿಲಾಷೆಯನ್ನು ವಿಡಿಯೋಕಾಲ್ ಮೂಲಕ ಶಾಸಕ ಕಾಮತ್ ಅವರಲ್ಲಿ ವ್ಯಕ್ತಪಡಿಸಿದ್ದಾರೆ. ಆ ಯುವಕರಿಗೆ ವೀಸಾವನ್ನು “ಎಸ್ಪೆಕ್ಟ್ ಪೆಟ್ರೋಲಿಯಂ ಸರ್ವಿಸ್, ಕುವೈಟ್ ಸ್ಟಾಫ್ಟಿಂಗ್ ಅಂಡ್ ರಿಕ್ರ್ಯೂಟಿಂಗ್, ಆಲಿ ಸಭಾ ಆಲ್ ಸಲೀಂ, ಬ್ಲಾಕ್-9, ಆಲ್ ಅಹಮದಿ 17 ಫಾಲೋವರ್ಸ್” ಎನ್ನುವ ಸಂಸ್ಥೆ ನೀಡಿದೆ. ಇನ್ನು ಈ ಯುವಕರ ಪಾಸ್ ಪೋರ್ಟ್ ಮೂಲಪ್ರತಿ (ಒರಿಜಿನಲ್ ಕಾಪಿ) ಯನ್ನು ” ಎನ್ಯಾಸ್ಕೊ ಜೆನೆರಲ್ ಟ್ರೆಡಿಂಗ್ ಅಂಡ್ ಕಾಂಟ್ರಾಕ್ಟಿಂಗ್ ಕಂಪೆನಿ, ವಿಳಾಸ- 21ನೇ ಮಹಡಿ, ಆಲ್-ಜೋನ್ ಸೆಂಟರ್ ಫಹಾದ್ ಆಲ್ ಸಲೀಂ ಸ್ಟ್ರೀಟ್, ಬ್ಲಾಕ್ 12, ಕೀಬ್ಲಾ, ಕುವೈಟ್ ಸಿಟಿ” ಈ ಸಂಸ್ಥೆ ಇಟ್ಟುಕೊಂಡಿದೆ ಎನ್ನುವ ಮಾಹಿತಿಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ವಿದೇಶಾಂಗ ಇಲಾಖೆಗೆ ರವಾನಿಸಿದ್ದಾರೆ. ಹಾಗೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಡಿವಿ ಸದಾನಂದ ಗೌಡ ಅವರಿಗೂ ಈ ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ. ಇನ್ನು ಕುವೈಟ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ನಮ್ಮ ಯುವಕರ ಪಾಸ್ ಪೋರ್ಟ್ ಮತ್ತು ಇತರ ದಾಖಲೆಗಳನ್ನು ಯುವಕರಿಗೆ ಹಸ್ತಾಂತರಿಸಿ ಅವರೆಲ್ಲರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿಕೊಡುವ ತನಕ ಇದರ ಸಂಪೂರ್ಣ ಫಾಲೋ ಅಪ್ ಮಾಡಲಾಗುವುದು. ಸದ್ಯ ಭಾರತದಲ್ಲಿ ಹೊಸ ಸರಕಾರ ರಚನೆಯಾಗುವ ಪ್ರಕ್ರಿಯೆಗಳು ನಡೆಯುತ್ತಿದ್ದು, ನೂತನ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಕೆಲವೇ ದಿನಗಳೊಳಗೆ ಯುವಕರನ್ನು ನಮ್ಮ ರಾಷ್ಟ್ರಕ್ಕೆ ಕರೆತರುವ ಕೆಲಸಕಾರ್ಯಗಳಿಗೆ ವೇಗ ಸಿಗಲಿದೆ. ಯುವಕರು ಭಾರತಕ್ಕೆ ಹೊರಡುವ ತನಕ ಅಲ್ಲಿಯವರೆಗೆ ಅವರ ಸಂಪೂರ್ಣ ಊಟ, ತಿಂಡಿ, ವಸತಿ ವ್ಯವಸ್ಥೆಯನ್ನು ಮಂಗಳೂರು ಮೂಲದ ಅನಿವಾಸಿ ಭಾರತೀಯ, ಶಾಸಕ ಕಾಮತ್ ಅವರ ಮಿತ್ರರೂ ಆಗಿರುವ ರಾಜ್ ಭಂಡಾರಿ ಹಾಗೂ ಭಾರತೀಯ ಪ್ರವಾಸಿ ಪರಿಷತ್ ನೋಡಿಕೊಳ್ಳುತ್ತದೆ ಎಂದು ಶಾಸಕ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love