ಕೃಷ್ಣಮಠದ ಗರ್ಭಗುಡಿಗೆ ಸುವರ್ಣಗೋಪುರ ಸಮರ್ಪಣೆ ಪ್ರಯುಕ್ತ ವೈಭವದ ಶೋಭಾಯಾತ್ರೆ

Spread the love

ಕೃಷ್ಣಮಠದ ಗರ್ಭಗುಡಿಗೆ ಸುವರ್ಣಗೋಪುರ ಸಮರ್ಪಣೆ ಪ್ರಯುಕ್ತ ವೈಭವದ ಶೋಭಾಯಾತ್ರೆ

ಉಡುಪಿ: ಕೃಷ್ಣಮಠದ ಗರ್ಭಗುಡಿಗೆ ಸುವರ್ಣಗೋಪುರ ಸಮರ್ಪಿಸುವ ಹಿನ್ನೆಲೆಯಲ್ಲಿ ನಗರದ ಜೋಡುಕಟ್ಟೆ ಯಿಂದ ಕೃಷ್ಣಮಠದವರೆಗೆ ಶನಿವಾರ ವೈಭವದ ಶೋಭಾಯಾತ್ರೆ ನಡೆಯಿತು.

ಜಿಲ್ಲೆಯ ವಿವಿಧ ಭಜನಾ ಮಂಡಳಿಯ ತಂಡಗಳು, ಜಾನಪದ ತಂಡಗಳು, ಸಾಂಸ್ಕೃತಿಕ ಕಲಾ ತಂಡಗಳು, ಟ್ಯಾಬ್ಲೊ ಮೆರವಣಿಗೆಗೆ ಮತ್ತಷ್ಟು ರಂಗು ತುಂಬಿದವು. ಚಂಡೆ, ಡೋಲು ವಾದನ ಹಾಗೂ ಸ್ಥಳೀಯ ಸಾಂಸ್ಕೃತಿಕ ತಂಡಗಳ ಜಾನಪದ ನೃತ್ಯ ಗಮನ ಸೆಳೆಯಿತು. ಶ್ರೀಕೃಷ್ಣ ಮಠದ ಸೇವಾರ್ಥಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ 1,008 ರಜತಕಲಶಗಳನ್ನು ಆಕರ್ಷಕವಾಗಿ ಜೋಡಿಸಿಟ್ಟು, ಮೆರವಣಿಗೆಯಲ್ಲಿ ತರಲಾಯಿತು.

ಜೋಡುಕಟ್ಟೆಯಲ್ಲಿ ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ’ಭಗವಂತನಿಗೆ ಚಿನ್ನ, ಆಭರಣಗಳಿಗಿಂತ ಭಕ್ತಿ ಮುಖ್ಯ. ಆತ ನಾವು ಮಾಡುವ ಭಕ್ತಿಯಿಂದಲೇ ಸಂತೃಪ್ತಿಗೊಳ್ಳುತ್ತಾನೆ. ಲೋಕ ಕಲ್ಯಾಣಕ್ಕಾಗಿ ಚಿನ್ನದ ಗೋಪುರ ನಿರ್ಮಾಣ ಐತಿಹಾಸಿಕ ಕಾರ್ಯವಾಗಿದ್ದು, ಇಡೀ ದೇಶವೇ ಸುವರ್ಣ ಯುಗವನ್ನು ಕಾಣುವಂತಾಗಲಿ’ ಎಂದು ಹಾರೈಸಿದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮುಖಂಡರಾದ ಉದಯಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಜಿ. ಶಂಕರ್, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಉದ್ಯಮಿಗಳಾದ ಮನೋಹರ್ ಶೆಟ್ಟಿ, ಭುವನೇಂದ್ರ ಕಿದಿಯೂರು, ಪ್ರಸಾದ್ರಾಜ್ ಕಾಂಚನ್, ಜೆರ್ರಿ ವಿನ್ಸೆಂಟ್ ಡಯಾಸ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಗಮನಸೆಳೆದ ಕಲಾತಂಡಗಳು: ಸುವರ್ಣ ಗೋಪುರದ ಟ್ಯಾಬ್ಲೊ ಮೆರವಣಿಗೆಗೆ ಮತ್ತಷ್ಟು ವೈಭವ ನೀಡಿತು. ಆಂಜನೇಯ, ಶಿವ, ಯಕ್ಷಗಾನ, ಭೀಮನ ರಥ, ರಾಧೆಕೃಷ್ಣ, ಟ್ಯಾಬ್ಲೊಗಳು ವಿಶೇಷ ಆಕರ್ಷಣಿಯವಾಗಿದ್ದವು.

ಮಾರ್ಪಳ್ಳಿ ಚೆಂಡೆ, ಪಂಚವಾದ್ಯ, ಕೇರಳ ಚೆಂಡೆ, ಕೃಷ್ಣಾರ್ಜುನ ಗೀತೋಪದೇಶ ರಥ, ಸ್ಯಾಕ್ಸೋಫೊನ್ ಡಾಲಕಿ, ನಾಗಸ್ವರ, ಬ್ರಹ್ಮರಥ ರಜತ ಕಲಶ, ಬಿರುದು ಬಾವಲಿ, ತಟ್ಟಿರಾಯ, ಇಸ್ಕಾನ್ ಸಂಸ್ಥೆಯ ಭಜನಾ ತಂಡ, ಘಟೋತ್ಕಚ, ಬೆದ್ರಚೆಂಡೆ, ಗಣಪತಿ ಸ್ತಬ್ಧಚಿತ್ರ ಶೋಭಾಯಾತ್ರೆಯ ಕಲೆಯನ್ನು ಹೆಚ್ಚಿಸಿದವು. ಉಡುಪಿ ಜಿಲ್ಲಾ ಭಜನಾ ಒಕ್ಕೂಟ, ಕರಂಬಳ್ಳಿ ಚೆಂಡೆ ಬಳಗ, ಕಪ್ಪೆಟ್ಟು ತಂಡ ವೇಷಧಾರಿ, ಕಕ್ಕುಂಜೆ ಬ್ಯಾಂಡ್ಸೆಟ್, ಕಿದಿಯೂರಿನ ಪೂರ್ಣ ಕುಂಭ ಮಹಿಳೆಯರು, ಶ್ರೀಸಾಯಿ ಚೆಂಡೆ ಕಪ್ಪೆಟ್ಟು ಮೆರುಗು ನೀಡಿದವು.


Spread the love