ಕೆಂಪು ಕಲ್ಲು ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ ನೀತಿ ಕಾರಣ ಅಲ್ಲ. ಚುನಾಯಿತ ಜನಪ್ರತಿನಿಧಿಗಳು ಸಮಸ್ಯೆ ಸರಿಪಡಿಸಲಿ ; ರಮಾನಾಥ ರೈ
ಮಂಗಳೂರು: ಜಿಲ್ಲೆಯಲ್ಲಿ ಮರಳು, ಕೆಂಪು ಕಲ್ಲು ಅಭಾವದಿಂದ ಜನರಿಗೆ, ಕಾರ್ಮಿಕರಿಗೆ ತೊಂದರೆಯಾಗಿದೆ. ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಹಾಗಂತ, ಕಾಂಗ್ರೆಸ್ ಸರ್ಕಾರದ ನೀತಿಯಿಂದ ಈ ಸಮಸ್ಯೆ ಆಗಿದ್ದಲ್ಲ, ಬಿಜೆಪಿ ಸರ್ಕಾರ ಇದ್ದಾಗಲೇ ಈ ಸಮಸ್ಯೆ ಇತ್ತು. ಈಗ ಸಮಸ್ಯೆ ನಿವಾರಿಸಲು ಚುನಾಯಿತ ಜನಪ್ರತಿನಿಧಿಗಳು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಬೇಕೇ ವಿನಾ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುವುದಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ಕೆಂಪು ಕಲ್ಲು ಮೇಲಿನ ರಾಯಲ್ಟಿ ಹೆಚ್ಚಿರುವುದನ್ನು ಕಡಿಮೆ ಮಾಡುವಂತೆ ಉಸ್ತುವಾರಿ ಸಚಿವರು ಮತ್ತು ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಮಾತಾಡಿದ್ದೇನೆ. ಕೇರಳದಲ್ಲಿ 32 ರೂ., ರಾಜ್ಯದಲ್ಲಿ 280 ರೂ. ರಾಯಲ್ಟಿ ಇದೆ ಎನ್ನುವುದನ್ನು ಕೆಂಪು ಕಲ್ಲಿನ ವ್ಯಾಪಾರಸ್ಥರು ಒಪ್ಪುವುದಿಲ್ಲ. ಇದರ ಬಗ್ಗೆ ಕಾರ್ಮಿಕರಲ್ಲಿ ವ್ಯಾಪಾರಸ್ಥರಲ್ಲಿ ನೋವು ಇದೆ. ಹಾಗಂತ ಬಿಜೆಪಿಗರು ರಾಜಕೀಯ ಮಾಡೋದಲ್ಲ. ಸರ್ಕಾರದ ಮೇಲೆ ಗೂಬೆ ಕೂರಿಸುವುದಲ್ಲ. ಇದಕ್ಕೆ ಕಾಂಗ್ರೆಸ್ ಸರ್ಕಾರದ ನೀತಿ ಕಾರಣ ಅಲ್ಲ. ಬೀದಿಯಲ್ಲಿ ನಿಂತು ಮಾತಾಡಿದರೆ ಸಮಸ್ಯೆ ಪರಿಹಾರ ಆಗಲ್ಲ.
ಚುನಾಯಿತ ಜನಪ್ರತಿನಿಧಿಗಳಿಗೆ ಜವಾಬ್ದಾರಿ ಬೇಡವೇ, ತಮ್ಮ ಕೆಲಸ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಮಾತುಕತೆ ಮಾಡಿ ಜನರ ಸಮಸ್ಯೆ ಬಗೆಹರಿಸೋದನ್ನು ಮಾಡಬೇಕು. ಸರ್ಕಾರ ಯಾವುದೇ ಹೊಸ ನೀತಿ ಜಾರಿಗೊಳಿಸಿಲ್ಲ, ಕಾಂಗ್ರೆಸ್ ಸರ್ಕಾರವನ್ನು ದೂರುವುದು ಯಾಕೆಂದು ಪ್ರಶ್ನಿಸಿದ ರಮಾನಾಥ ರೈ, ಹಿಂದೆ ನಮ್ಮ ಸರ್ಕಾರ ಇದ್ದಾಗ ನಾನ್ ಸಿಆರ್ ಝಡ್ ಮರಳು ತೆಗೆಸಿಕೊಡಲು ಬಹಳಷ್ಟು ಪ್ರಯತ್ನ ಪಟ್ಟಿದ್ದು ನಾನು. ಬೆಂಗಳೂರಿನಲ್ಲಿ 50-60 ಮೀಟಿಂಗ್ ಮಾಡಿ ನಾನ್ ಸಿಆರ್ ಝಡ್ ಮರಳಿನ ಲೈಸನ್ಸ್ ತೆಗೆಸಿಕೊಟ್ಟಿದ್ದೆ. ಇದರ ವಿಚಾರ ನಮ್ಮ ಮರಳು ವ್ಯಾಪಾರಿಗಳಿಗೂ ತಿಳಿದಿದೆ.
ಆದರೆ ಈಗ ಮರಳು ಬ್ಲಾಕ್ ಗಳನ್ನು ಟೆಂಡರ್ ಮಾಡದೆ ಬ್ಲಾಕ್ ಮಾಡಿದ್ದಾರೆ. ಇದರಿಂದ ಸಮಸ್ಯೆ ಆಗಿದೆ, ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಪೊಲೀಸರು ಕ್ರಮ ತೆಗೆದುಕೊಂಡದ್ದು ಸರಿ ಇದೆ. ಅಧಿಕಾರಿಗಳು, ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು ಕುಳಿತು ಚರ್ಚಿಸಿ ಸಮಸ್ಯೆ ಸರಿಪಡಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೂ ಮಾತಾಡಿದ್ದು ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ ಎಂದು ರೈ ಹೇಳಿದರು.