ಕೆರಾಡಿ: ಮಕ್ಕಳ ಹಬ್ಬದಲ್ಲಿ ಗ್ರಾಮದ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಬಿಚ್ಚಿಟ್ಟ ಮಕ್ಕಳು

Spread the love

ಕೆರಾಡಿ: ಮಕ್ಕಳ ಹಬ್ಬದಲ್ಲಿ ಗ್ರಾಮದ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಬಿಚ್ಚಿಟ್ಟ ಮಕ್ಕಳು

ಕುಂದಾಪುರ: ವಿಶೇಷ ಗ್ರಾಮಸಭೆಯ ಮೂಲಕ ಮಕ್ಕಳು ಮಹತ್ವದ ವಿಷಯಗಳ ಕುರಿತು ಗಮನ ಹರಿಸಿದ್ದಾರೆ. ನಾವೆಲ್ಲ ಮಾತಿನಲ್ಲಿ ಭವಿಷ್ಯದ ಮಕ್ಕಳು ಎನ್ನುತ್ತೇವೆ. ಆದರೆ ಅದು ಸುಳ್ಳು. ಮಕ್ಕಳು ಭವಿಷ್ಯದ ಮಕ್ಕಳಲ್ಲ. ಅವರು ಇಂದಿನ ಮಕ್ಕಳು, ಇಂದಿನ ಪ್ರಜೆಗಳು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾ.ಪಂ ಕೆರಾಡಿ ಇದರ ಸಹಯೋಗದೊಂದಿಗೆ ಕೆರಾಡಿ ಗ್ರಾಮಪಂಚಾಯತ್ ಆವರಣದಲ್ಲಿ ಬುಧವಾರ ಜರುಗಿದ ಮಕ್ಕಳ ಹಬ್ಬ-2024 ಮಕ್ಕಳ ವಿಶೇಷ ಗ್ರಾಮಸಭೆಯನ್ನು ಬಲೂನ್ ಹಾರಿಸಿ ಬಿಡುವುದುರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಗು ಹುಟ್ಟಿದಾಕ್ಷಣವೇ ಭಾರತೀಯ ಪ್ರಜೆಯಾಗುತ್ತದೆ. ಮಕ್ಕಳಿಗೆ ಸರಿಯಾದ ವಾತಾವಣ, ಪರಿಸರವನ್ನು ಕಲ್ಪಿಸಿದಾಗ ಅವರು ಜವಾಬ್ದಾರಿಯುತ ನಾಗರಿಕರಾಗುತ್ತಾರೆ. ನಮ್ಮ ಸುತ್ತಮುತ್ತ ಸಾಕಷ್ಟು ಸಮಸ್ಯೆಗಳಿವೆ. ನಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನೇ ಪಟ್ಟಿ ಮಾಡಿ ವಿಶೇಷ ಗ್ರಾಮಸಭೆಯ ಮೂಲಕ ವಿಭಿನ್ನ ರೀತಿಯಲ್ಲಿ ನಮ್ಮ ಮುಂದೆ ತಂದಿದ್ದಾರೆ. ಸೃಜನಶೀಲವಾಗಿ ಸಮಸ್ಯೆಗಳನ್ನು ಹೇಳಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.

ನಾವು ಓದುತ್ತಿದ್ದ ಕಾಲವನ್ನು ಈಗ ಹೋಲಿಕೆ ಮಾಡಿಕೊಂಡರೆ ಇಂದು ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಆದರೆ ಇನ್ನೂ ಬಗೆಹರಿಸಬಹುದಾದ ಸಾಕಷ್ಟು ಸಮಸ್ಯೆಗಳಿವೆ. ನಾನು ಬಾಲ್ಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ನಾಲ್ಕು ಕಿ.ಮೀ ಹಾಗೂ ಪ್ರೌಢ ಶಿಕ್ಷಣಕ್ಕೆ ಆರುವರೆ ಕಿ.ಮೀ ನಡೆಯುತ್ತಿದ್ದೆ. ಶಾಲೆಯಲ್ಲಿ ಶಿಕ್ಷಕರ ಅಲಭ್ಯತೆ ಆಗಲೂ ಇತ್ತು. ಈಗ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ನಮ್ಮ ಸುತ್ತ ಸಮಸ್ಯೆಗಳಿವೆ. ಆದರೆ ಆ ಸಮಸ್ಯೆಗಳನ್ನು ಮೆಟ್ಟಿ ನಿಂತು ನಾವು ಹೇಗೆ ಮುಂದೆ ಬರಬೇಕು, ನಮ್ಮ ಪ್ರಯತ್ನ ಏನು ಎನ್ನುವುದರ ಬಗ್ಗೆ ನಾವು ಯೋಚನೆ ಮಾಡಬೇಕು. ಸಮಸ್ಯೆ ಇದೆ ಎಂದು ಅದನ್ನೇ ನೆಪವಾಗಿಟ್ಟುಕೊಂಡು ನಮ್ಮ ಬಾಲ್ಯವನ್ನು ಹಾಳು ಮಾಡಿಕೊಳ್ಳುವುದಲ್ಲ. ಮಕ್ಕಳು ಬಾಲ್ಯದಲ್ಲಿ ಶಿಕ್ಷಣಕ್ಕೆ ತೆರೆದುಕೊಳ್ಳಬೇಕು. ಇಡೀ ನಾಗರಿಕ ಸಮಾಜ ಮಕ್ಕಳು ಮಕ್ಕಳಾಗಿ ಬೆಳೆಯುವುದಕ್ಕೆ ಅವಕಾಶ ಮಾಡಿಕೊಡಬೇಕು. ಅವರನ್ನು ದುಡಿಮೆ, ಅಪಾಯಕಾರಿ ಕೆಲಸಗಳಿಗೆ ಕಳುಹಿಸುವುದು ತಪ್ಪು. ಮಕ್ಕಳಿಗೆ ಅವರದ್ದೇ ಆದ ಹಕ್ಕುಗಳಿವೆ. ಮಗುವಿನ ಭಾವನೆಗಳನ್ನು ಗೌರವಿಸುವುದು ನಾವು ದೊಡ್ಡವರು ಕಲಿಯಬೇಕು ಎಂದರು.

ಇಂದು ಮಳೆ ಬರಬೇಕಾದ ಸಮಯದಲ್ಲಿ ಮಳೆ ಬರುತ್ತಿಲ್ಲ. ಬಿಸಿಲಿನ ಉಷ್ಣತೆ ಏರುತ್ತಿದೆ. ವಾತಾವರಣದ ವೈಪರಿತ್ಯದಿಂದ ಇವೆಲ್ಲವೂ ಆಗುತ್ತಿದೆ. ಪ್ರಕೃತಿಯನ್ನು ಪ್ರಕೃತಿಯಾಗಿ ನಾವು ಬಿಡಬೇಕು. ಅದರ ಮೇಲೆ ದೌರ್ಜನ್ಯ ಮಾಡಬಾರದು. ಪ್ರಕೃತಿಯನ್ನು ಗೌರವದಿಂದ, ಪೂಜನೀಯ ಭಾವದಿಂದ ನಮ್ಮ ಹಿರಿಯರು ನೋಡಿದ್ದಾರೆ. ಅದನ್ನೇ ನಾವು ಮುಂದಿವರೆಸಿದರೆ ಪ್ರಕೃತಿ ನಮಗೂ ವರವಾಗಿ ಬರುತ್ತದೆ. ಅದನ್ನು ಬಿಟ್ಟು ಪ್ರಕೃತಿಯ ಮೇಲೆ ದೌರ್ಜನ್ಯ ಮಾಡಿದರೆ ಅದು ನಮ್ಮ ವಿರುದ್ದ ಸೇಡು ತೀರಿಸಿಕೊಳ್ಳುತ್ತದೆ. ಮಕ್ಕಳು ಅದ್ಭುತವಾಗಿ ನೆಲ, ಜಲ, ನೀರನ್ನು ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಅದ್ಭುತವಾಗಿ ಗಮನ ಸೆಳೆದಿದ್ದಾರೆ. ಸೃಜನಶೀಲವಾಗಿ ತಮ್ಮ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ. ಕಾಲು ಸಂಕ ಸಣ್ಣಪುಟ್ಟ ಸಮಸ್ಯೆಗಳನ್ನು 15ನೇ ಹಣಕಾಸು ಅಥವಾ ರಾಜ್ಯ ಹಣಕಾಸು ಆಯೋಗದ ನಿಧಿಯನ್ನು ಬಳಸಿಕೊಂಡು ಮಕ್ಕಳ ಸಣ್ಣಪುಟ್ಟ ಬೇಡಿಕೆಗಳನ್ನು ಪೂರೈಸಬಹುದು. ಗ್ರಾ.ಪಂಗಳಿಗೆ ಅಂಗನವಾಡಿ, ಶಾಲೆಗಳಿಗೆ ಪೂರಕವಾಗುವಂತಹ ಯಾವುದೇ ಕೆಲಸಗಳನ್ನು ಮಾಡಲು ಅವಕಾಶಗಳಿವೆ. ತಮ್ಮ ಆದಾಯದ ಒಂದು ಭಾಗವನ್ನು ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಗ್ರಾ.ಪಂ ಉಪಯೋಗಿಸಿಕೊಳ್ಳಬೇಕು ಎಂದರು.

ಕೆರಾಡಿ ಗ್ರಾ.ಪಂ 2002 ರಲ್ಲಿ ಇದೇ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ ರಾಜ್ಯದಲ್ಲೇ ಗಮನಸೆಳೆದಿದೆ. ಮಕ್ಕಳ ಗ್ರಾಮಸಭೆ ರಾಜ್ಯ ಸರ್ಕಾರದ ಆದೇಶವಾಗಿ ಬದಲಾಗಿದೆ. ರಾಜ್ಯ ಸರ್ಕಾರ ಎಲ್ಲಾ ಗ್ರಾ.ಪಂ ಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಿ ಮಕ್ಕಳ ಅಹವಾಲನ್ನು ಕೇಳಬೇಕು ಎನ್ನುವ ನಿಟ್ಟಿನಲ್ಲಿ ಆದೇಶ ಮಾಡಿದೆ. ಕೆರಾಡಿ ಗ್ರಾ.ಪಂ 2002ರಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ ಮುನ್ನಡಿ ಬರೆದಿದ್ದು, ಅದು ಇಂದು ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ಆಗುತ್ತಿದೆ. ಮಕ್ಕಳು ಸಮಸ್ಯೆಗಳನ್ನು ಗಮನಕ್ಕೆ ತರುತ್ತಿದ್ದಾರೆ. ಮಕ್ಕಳ ಸಮಸ್ಯೆಗಳನ್ನು ಈಡೇರಿಸುವುದು ಅಧಿಕಾರಿಗಳ ಜವಾಬ್ದಾರಿ. ಮಕ್ಕಳ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸುವ ಕೆಲಸವನ್ನು ನಾವೆಲ್ಲರೂ ಜೊತೆಯಾಗಿ ಮಾಡೋಣ ಎಂದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿ ಮಕ್ಕಳು ಅದ್ಭುತವಾಗಿ ತಮ್ಮ ಸಮಸ್ಯೆಗಳನ್ನು ತೆರದಿಟ್ಟಿದ್ದಾರೆ. ರಾತ್ರಿ ಹೊತ್ತು ಶಾಲಾ ಆವರಣದಲ್ಲಿ ಮಧ್ಯಪಾನ ಮಾಡುತ್ತಾರೆ ಎನ್ನುವ ದೂರು ಬಂದಿದೆ. ಗ್ರಾಮೀಣ ಭಾಗದ ಶಾಲೆಗಳಿಗೆ ರಾತ್ರಿ ಹೊತ್ತು ಪೊಲೀಸ್ ಗಸ್ತು ವ್ಯವಸ್ಥೆ ಆರಂಭಿಸಲಾಗುವುದು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಇದೇ ರೀತಿ ಆಯಾ ಪಂಚಾಯತ್ಗಳಲ್ಲಿ ಗ್ರಾಮಸ್ಥರ ಗ್ರಾಮಸಭೆ ನಡೆಯುತ್ತದೆ. ಆದರೆ ಅಲ್ಲೆಲ್ಲಾ ಇಷ್ಟು ಶಾಂತವಾಗಿ ಗ್ರಾಮಸಭೆಗಳು ನಡೆಯುವುದಿಲ್ಲ. ಆ ಗ್ರಾಮಸಭೆಗಳಲ್ಲಿಯೂ ಜನರು ಸಮಸ್ಯೆಗಳನ್ನು ಹೇಳುತ್ತಾರೆ. ಆದರೆ ಇಂದು ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಶಾಂತ ರೀತಿಯಲ್ಲಿ ವಿಷಯಗಳನ್ನು ಮಂಡಿಸಿದ್ದಾರೆ. ಈ ರೀತಿಯಲ್ಲೂ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಕೆರಾಡಿಯ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಬಹುತೇಕ ದೊಡ್ಡವರಿಗೆ ತಾವು ಎತ್ತರವಿರುವ ಕಾರಣಕ್ಕೆ ಸಮಸ್ಯೆಗಳು ಬಹಳ ದೂರದ್ದು ಮಾತ್ರ ಕಾಣುತ್ತದೆ. ಮಕ್ಕಳು ಚಿಕ್ಕವರಿದ್ದರಿಂದ ಹತ್ತಿರದ ಸಮಸ್ಯೆಗಳು ಇನ್ನೂ ಸೂಕ್ಷ್ಮವಾಗಿ ಕಾಣುತ್ತಿದೆ. 30-35 ಶೇಕಡಾದಷ್ಟು ಮಕ್ಕಳು ಈ ಗ್ರಾಮದಲ್ಲಿದ್ದಾರೆ. ಆ ಮಕ್ಕಳ ಮಾತಿಗೂ ಗ್ರಾ.ಪಂ ದ್ವನಿಯಾಗಬೇಕು. ಅದಕ್ಕಾಗಿಯೇ ಸರ್ಕಾರ ಮಕ್ಕಳ ಗ್ರಾಮಸಭೆ ಆಯೋಜಿಸಿ ಅವರ ಧ್ವನಿಗೆ ಕಿವಿಯಾಗಬೇಕು ಎನ್ನುವ ನಿರ್ದೇಶನ ನೀಡಿದೆ. ಮಕ್ಕಳು ಗಮನಕ್ಕೆ ತಂದ ಸಮಸ್ಯೆಗಳನ್ನು ದಾಖಲಿಸಿಕೊಂಡಿದ್ದೇನೆ. ಜಿ.ಪಂ ವತಿಯಿಂದ ಸಾಧ್ಯವಾಗುವ ಸಮಸ್ಯೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸುವೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಗ್ರಾ.ಪಂ ಅಧ್ಯಕ್ಷ ಬಿ.ಆರ್ ಸುದರ್ಶನ್ ಶೆಟ್ಟಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ನೋಡೆಲ್ ಅಧಿಕಾರಿ ಪರಶುರಾಮ್, ಶಿಕ್ಷಣ ಫೌಂಡೇಶನ್ನ ರೀಣಾ ಹೆಗ್ಡೆ, ತಾ.ಪಂ ಮಾಜಿ ಸದಸ್ಯ ನಾಗಪ್ಪ ಕೊಠಾರಿ, ನಮ್ಮ ಭೂಮಿ ಸಂಸ್ಥೆಯ ಸಂಯೋಜಕ ಶ್ರೀನಿವಾಸ ಗಾಣಿಗ, ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಮ್, ಪಂಚಾಯತ್ರಾಜ್ ಒಕ್ಕೂಟದ ಅಧಕ್ಷರಾದ ಉದಯ್ ಕುಮಾರ್ ಶೆಟ್ಟಿ, ಮಕ್ಕಳ ವಿತ್ರ ಭಾಸ್ಕರ ಬೆಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.

ಕಳೆದ ಬಾರಿಯ ಮಕ್ಕಳ ಗ್ರಾಮಸಭೆಯ ಅನುಪಾಲನಾ ವರದಿಯನ್ನು ಗ್ರಾ.ಪಂ ಪಿಡಿಓ ನಾರಾಯಣ ಬನಶಂಕರಿ ವಾಚಿಸಿದರು. ಗ್ರಾ.ಪಂ ಸದಸ್ಯ ರಾಘವೇಂದ್ರ ಕೊಠಾರಿ ಸ್ವಾಗತಿಸಿದರು. ಉಪಾಧ್ಯಕ್ಷೆ ಕುಸುಮಾ ಧನ್ಯವಾದವಿತ್ತರು. ನಾರಾಯಣ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು.


Spread the love