ಮಂಗಳೂರು: ಚಿನ್ನಾಭರಣ ಕಳವು ಪ್ರಕರಣ; ಮೂರು ಮಂದಿ ಸೆರೆ

Spread the love

ಮಂಗಳೂರು: ಚಿನ್ನಾಭರಣ ಕಳವು ಪ್ರಕರಣ; ಮೂರು ಮಂದಿ ಸೆರೆ
 

ಮಂಗಳೂರು: ನಗರದ ರಥಬೀದಿಯ ಜಿಎಚ್‌ಎಸ್ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜುವೆಲ್ಲರ್ಸ್‌ನಿಂದ ಚಿನ್ನಾಭರಣ ಕಳವು ಮಾಡಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಜನಾಡಿ ಗ್ರಾಮದ ಉರುಮಣೆಯ ಸಿನಾನ್ (25), ನಾಟೆಕಲ್ ಸೈಟ್ ಮನೆಯ ಹೈದರ್ ಆಲಿ ಆಸಿಲ್ (20), ತನ್ವೀರ್ (34) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 6 ಲಕ್ಷ ರೂ. ಮೌಲ್ಯದ 97.11 ಗ್ರಾಂ ತೂಕದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಹಾಗೂ 25 ಸಾವಿರ ರೂ. ಮೌಲ್ಯದ 2 ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 7.15 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

ಆರೋಪಿಗಳ ಪೈಕಿ ತನ್ವೀರ್ ವಿರುದ್ಧ ದರೋಡೆ ಹಾಗೂ ಹೈದರ್ ಆಲಿ ಆಸಿಲ್ ವಿರುದ್ಧ ಎರಡು ಹಲ್ಲೆ ಪ್ರಕರಣಗಳು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಆರೋಪಿಗಳು ಗ್ರಾಹಕರ ಸೋಗಿನಲ್ಲಿ ಪ್ರಗತಿ ಜುವೆಲ್ಲರ್ಸ್‌ ಗೆ ತೆರಳಿ ಸೇಲ್ಸ್‌ಮ್ಯಾನ್‌ಗಳ ಗಮನ ಬೇರೆಡೆ ಸೆಳೆದು 6 ಲಕ್ಷ ರೂ. ಮೌಲ್ಯದ 97.11 ಗ್ರಾಂ ತೂಕದ ಚಿನ್ನಾಭರಣ ವಂಚಿಸಿ ಪರಾರಿಯಾಗಿದ್ದರು. ಈ ಬಗ್ಗೆ ಜುವೆಲ್ಲರ್ಸ್‌ನ ಮಾಲಕ ವಿನೋದ್ ಶೇಟ್ ನೀಡಿದ ದೂರಿನಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಉಪಾಯುಕ್ತರಾದ ಸಿದ್ದಾರ್ಥ ಗೋಯಲ್ ಮತ್ತು ದಿನೇಶ್ ಕುಮಾರ್ ಹಾಗೂ ಸಹಾಯಕ ಆಯುಕ್ತ ಮಹೇಶ್ ಕುಮಾರ್‌ರ ನಿರ್ದೇಶನದಂತೆ ಬಂದರ್ ಠಾಣೆಯ ಇನ್‌ಸ್ಪೆಕ್ಟರ್ ಅಜ್ಮತ್ ಅಲಿ ಜಿ. ನೇತೃತ್ವದ ತಂಡದಲ್ಲಿ ಎಸ್ಸೈಗಳಾದ ಪ್ರದೀಪ್ ಟಿ.ಆರ್, ಶಿವಪ್ಪಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Spread the love