ಕೇರಳ ಪ್ರಾಕೃತಿಕ ವಿಕೋಪ ಪರಿಹಾರ ಸಿಪಿಐ(ಎಂ)ನಿಂದ ನಿಧಿ ಸಂಗ್ರಹ ಅಭಿಯಾನ

Spread the love

ಕೇರಳ ಪ್ರಾಕೃತಿಕ ವಿಕೋಪ ಪರಿಹಾರ ಸಿಪಿಐ(ಎಂ)ನಿಂದ ನಿಧಿ ಸಂಗ್ರಹ ಅಭಿಯಾನ

ಕಳೆದ ಕೆಲವು ದಿನಗಳಲ್ಲಿ ಕೇರಳದಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದಲೂ ಇನ್ನೂರಕ್ಕೂ ಮೀರಿ ಜನ ಮರಣ ಹೊಂದಿದ್ದಾರೆ. ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ. ಮಾನವೀಯ ನೆಲೆಯಲ್ಲಿ ನೆರೆರಾಜ್ಯದ ಜನಗಳಾದ ನಾವು ಆ ರಾಜ್ಯದ ಜನರಿಗೆ ನೆರವು ನೀಡಬೇಕಾಗಿದೆ. ನಮ್ಮ ರಾಜ್ಯದ ಕೊಡಗಿನಲ್ಲಿಯೂ ಅದೇ ತೀವ್ರತೆಯ ಸಾವು, ನೋವು, ನಿರ್ಗತಿಕತೆ ಉಂಟಾಗಿದೆ. ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷವು ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸುವ ಅಭಿಯಾನ ಹಮ್ಮಿಕೊಂಡಿದ್ದು, ಅದಕ್ಕೆ ಜಿಲ್ಲೆಯ ಜನತೆ ಸ್ಪಂದಿಸಿ, ಉದಾರ ದೇಣಿಗೆ-ಹಣದ ರೂಪದಲ್ಲಾಗಲೀ ವಸ್ತು ರೂಪದಲ್ಲಾಗಲೀ ನೀಡಬೇಕು ಎಂಬುದಾಗಿ ಸಿಪಿಐ(ಎಂ)ನ ಹಿರಿಯ ಮುಖಂಡ ಕೆ.ಆರ್. ಶ್ರೀಯಾನ್ ಕರೆಕೊಟ್ಟರು.

ಅವರು ಆಗಸ್ಟ್ 20ರ ಸೋಮವಾರ ಬೆಳಿಗ್ಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಏರ್ಪಡಿಸಿದ್ದ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಸಂತ್ರಸ್ತರಿಗೆ ನೆರವು ನೀಡುವಲ್ಲಿಯೂ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ವಿರೋಧಿ ಪಕ್ಷದ ರಾಜ್ಯಾಡಳಿತ ಇದೆಯೆಂಬ ಕಾರಣಕ್ಕೆ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ, ಕೇರಳ ರಾಜ್ಯಕ್ಕೆ ಅಲ್ಪಪ್ರಮಾಣದ ತುರ್ತು ಪರಿಹಾರವನ್ನು ನೀಡಿದೆ. ಇದು ಖೇದಕರ. ಎಲ್ಲ ರಾಜ್ಯಗಳೂ ಭಾರತ ಜನನಿಯ ತನುಜಾತೆಯರೇ, ಈ ವಿಶಾಲ ದೃಷ್ಟಿಯಿಂದ ಮಾನವೀಯ ನೆಲೆಯಲ್ಲಿ ಭಾರತದ ಜನತೆ ಕೇರಳದ ಜನತೆಯ ನೋವಿಗೆ ಸ್ಪಂದಿಸಬೇಕಾಗಿದೆ ಎಂಬುದಾಗಿ ಜನತೆಗೆ ಅವರು ವಿನಂತಿ ಮಾಡಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್‍ಕುಮಾರ್ ಬಜಾಲ್ ಸ್ವಾಗತಿಸಿದರು. ಈ ಸಂದರ್ಭ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ವಾಸುದೇವ ಉಚ್ಚಿಲ, ಜಿಲ್ಲಾ ಸಮಿತಿ ಸದಸ್ಯರಾದ ಜಯಂತಿ ಬಿ. ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್ ಅಲ್ಲದೆ ಮಂಗಳೂರಿನ ಕಾರ್ಮಿಕ, ಯುವಜನ, ವಿದ್ಯಾರ್ಥಿ ಸಂಘಟನೆಗಳ ನಾಯಕರೂ ಉಪಸ್ಥಿತರಿದ್ದು, ಬೀದಿಯುದ್ದಕ್ಕೂ ನಡೆದ ನಿಧಿ ಸಂಗ್ರಹದಲ್ಲಿ ಭಾಗವಹಿಸಿದರು.

ಇದೇ ದಿನ ಸಿಪಿಐ(ಎಂ) ಪಕ್ಷದ ಕರೆಯ ಮೇರೆಗೆ ಬೆಳ್ತಂಗಡಿಯಲ್ಲೂ ಸಿಪಿಐ(ಎಂ) ತಾಲೂಕು ಸಮಿತಿ  ನೇತೃತ್ವದಲ್ಲಿ ಕೇರಳ ಪ್ರವಹ ಸಂತ್ರಸ್ತರಿಗಾಗಿ ನಿಧಿ ಸಂಗ್ರಹ ನಡೆದಿದೆ. ನಾಳೆಯಿಂದ ಇತರ ತಾಲೂಕು, ಪಟ್ಟಣಗಳಲ್ಲೂ ಸಿಪಿಐ(ಎಂ) ನೇತೃತ್ವದಲ್ಲಿ ನಿಧಿ ಸಂಗ್ರಹ ನಡೆಯಲಿದೆ.

ವಸಂತ ಆಚಾರಿ, ಕಾರ್ಯದರ್ಶಿ


Spread the love