ಕೈಂಡ್ ಹಾರ್ಟ್ ಟ್ರಸ್ಟ್ ಬಾಳ್ಕುದ್ರು – ಹಂಗಾರಕಟ್ಟೆ ವತಿಯಿಂದ ಪ್ರತಿಭಾ ಪುರಸ್ಕಾರ
ಉಡುಪಿ: ದೂರದೃಷ್ಠಿಯೊಂದಿಗೆ ಗುರಿ ಮತ್ತು ಉದ್ದೇಶವನ್ನು ಹೊಂದಿರುವ ಸಂಸ್ಥೆ ಧೀರ್ಘ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದು ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ|ಸುನೀಲ್ ಡಿಸಿಲ್ವಾ ಹೇಳಿದರು.
ಅವರು ಬುಧವಾರ ಸಂಜೆ ಕೈಂಡ್ ಹಾರ್ಟ್ ಟ್ರಸ್ಟ್ ಬಾಳ್ಕುದ್ರು ಹಂಗಾರಕಟ್ಟೆ ಹಾಗೂ ರೋಟರಿ ಕ್ಲಬ್ ಬ್ರಹ್ಮಾವರ ಇವರ ಆಶ್ರಯದಲ್ಲಿ ನಡೆದ ಪ್ರತಿಭಾವಂತ ವಿಧ್ಯಾರ್ಥಿಗಳಿಗಾಗಿ ರೋಟರಿ ಭವನ ಬ್ರಹ್ಮಾವರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ನೀಡುವ ಸೇವೆ ಇನ್ನೊಬ್ಬರ ಹೃದಯವನ್ನು ಮುಟ್ಟುವಂತದ್ದಾಗಿರಬೇಕು. ನಿರಂತರ ಉತ್ತಮ ಕಾರ್ಯಗಳ ಮೂಲಕ ನಾವು ಸಮಾಜದಲ್ಲಿ ಶಾಶ್ವತವಾದ ಹೆಸರು ಮಾಡಬೇಕು. ಇನ್ನೊಬ್ಬರಿಗೆ ಮುಕ್ತ ಹೃದಯದಿಂದ ಮಾಡಿದ ಸೇವೆಗೆ ಭಗವಂತನ ಪ್ರತಿಫಲ ಸದಾ ಇದೆ. ಹಸಿದವನಿಗೆ ಕೊಟ್ಟ ರೊಟ್ಟಿಯ ಸಹಾಯ ದೇವರಿಗೆ ಸದಾ ಪ್ರೀಯವಾದುದು. ಆದ್ದರಿಂದ ನಮ್ಮ ಸೇವೆಯನ್ನು ಪ್ರೀತಿಯಿಂದ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ|ಮಥಾಯಸ್ ಡಾಯಸ್ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಕೇವಲ ಹೆತ್ತವರಿಗೆ, ಮಾತ್ರವಲ್ಲದೆ ಸಮಾಜಕ್ಕೂ ಗೌರವ ತಂದು ಕೊಡುತ್ತದೆ. ವಿದ್ಯಾರ್ಥಿಗಳ ಪರಿಶ್ರಮದಲ್ಲಿ ಹೆತ್ತವರ ಪಾತ್ರ ಮಹತ್ತರವಾದುದಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಮೊಟಕುಗೊಳಿಸದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ತೋರುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 10 ಪ್ರೌಢ ಶಾಲೆಗಳ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಗೌರವಿಸಲಾಯಿತು.
ಕೈಂಡ್ ಹಾರ್ಟ್ ಟ್ರಸ್ಟ್ ಅಧ್ಯಕ್ಷರಾದ ಹೆನ್ರಿ ಲೂವಿಸ್ ಪ್ರಾಸ್ತಾವಿಕ ಸಂದೇಶದಲ್ಲಿ ಟ್ರಸ್ಟ್ ಮೂಲಕ ಸಮಾಜದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಮುಂದಿನ ದಿನಗಳಗಲ್ಲಿ ವೃದ್ದರಿಗಾಗಿ ವೃದ್ಧಾಶ್ರಮವನ್ನು ನಿರ್ಮಿಸುವ ಚಿಂತನೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬ್ರಹ್ಮಾವರ ರೋ. ಸತೀಶ್ ಶೆಟ್ಟಿ ವಹಿಸಿದ್ದರು.
ರೋ. ಪಿಹೆಚ್ ಎಫ್ ವಾಲ್ಟರ್ ಸಿರಿಲ್ ಪಿಂಟೊ, ರೋ. ಜಗದೀಶ್ ಕೆಮ್ಮಣ್ಣು, ರೋ. ಶ್ರೀಧರ್ ಶೆಟ್ಟಿ, ರೋ. ಹರೀಶ್ ಕುಂದರ್, ರೋ. ರೆಕ್ಸನ್ ಮೋನಿಸ್, ಚೇತನಾ ಪ್ರೌಢ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ ಹಾಗೂ ಇತರರು ಉಪಸ್ಥಿತರಿದ್ದರು.
ಡೆನಿಸ್ ರೊಡ್ರಿಗಸ್ ವಿದ್ಯಾರ್ಥಿಗಳನ್ನು ಪರಿಚಯಿಸಿದರು, ಪ್ರಶಾಂತ್ ಶೆಟ್ಟಿ ಪ್ರಾರ್ಥನೆ ನೆರವೇರಿಸಿ, ರೂಬಿನಾ ರೊಡ್ರಿಗಸ್ ಸ್ವಾಗತಿಸಿ, ಸುಜಾತಾ ಅಂದ್ರಾದೆ ವಂದಿಸಿದರು.