ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಶವಸಂಸ್ಕಾರ ಬೋಳೂರಿನ ವಿದ್ಯುತ್ ಚಿತಾಗಾರದಲ್ಲೇ ನಡೆಯಲಿದೆ :- ಶಾಸಕ ವೇದವ್ಯಾಸ ಕಾಮತ್ 

Spread the love

ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಶವಸಂಸ್ಕಾರ ಬೋಳೂರಿನ ವಿದ್ಯುತ್ ಚಿತಾಗಾರದಲ್ಲೇ ನಡೆಯಲಿದೆ :- ಶಾಸಕ ವೇದವ್ಯಾಸ ಕಾಮತ್ 

ಮಂಗಳೂರು: ಬೋಳೂರು ಗ್ರಾಮದ ಹಿಂದೂ ರುದ್ರಭೂಮಿ ವಿದ್ಯುತ್ ಚಿತಾಗಾರವಾಗಿದ್ದು ಕೊರೊನಾ ಪ್ರಕರಣಗಳಲ್ಲಿ ಮೃತ್ಯು ಸಂಭವಿಸಿದಾಗ ಆರೋಗ್ಯ ಇಲಾಖೆ ನಿಯಮಾವಳಿಗಳಿಂದ ಶವಸಂಸ್ಕಾರವನ್ನು ಮಾಡಲು ಯಾವುದೇ ರೀತಿಯ ಅಡಚಣೆ ಉಂಟಾಗದಿರಲು ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚೆಗೆ ಕೊರೊನಾ ಪ್ರಕರಣದಲ್ಲಿ ಮ್ರತಪಟ್ಟ ಮಹಿಳೆಯ ಶವಸಂಸ್ಕಾರ ಸಂಧರ್ಭದಲ್ಲಿ ಕೆಲವು ತಪ್ಪು ಕಲ್ಪನೆಯಿಂದ ಗೊಂದಲ ಉಂಟಾಗಿತ್ತು.ಆದರೆ ಸರಕಾರದ ವತಿಯಿಂದ ನಿರ್ಮಾಣವಾಗಿರುವ ಬೋಳೂರು ವಿದ್ಯುತ್ ಚಿತಾಗಾರವು ಮಂಗಳೂರು ಮಹಾನಗರ ಪಾಲಿಕೆಯಲ್ಲಿದ್ದು ಸರಕಾರದ ಎಲ್ಲಾ ಆದೇಶಗಳಿಗೆ ಬದ್ಧವಾಗಿರಬೇಕು.ಈ ಭಾಗದ ನಿವಾಸಿಗಳ ಮತ್ತು ಜನಪ್ರತಿನಿಧಿಗಳ ಸಮಕ್ಷಮ ಶಾಸಕ ವೇದವ್ಯಾಸ ಕಾಮತ್ ಅವರು ಜನರಿಗೆ ಪೂರ್ಣ ತಿಳುವಳಿಕೆ ನೀಡಿದ್ದಾರೆ.

ಕೆಲವರು ತಪ್ಪು ಕಲ್ಪನೆಯಿಂದ ಸಾಮಾಜಿಕ ಜಾಲತಾಣದ ತಪ್ಪು ಸಂದೇಶದ ಆಧಾರದಲ್ಲಿ ಭಯಭೀತರಾಗಿದ್ದು ಇದೆಲ್ಲ ಸುಳ್ಳು ಎಂಬುವುದನ್ನು ವೈಜ್ಞಾನಿಕವಾಗಿ ಎಲ್ಲ ನಿವಾಸಿಗಳಿಗೆ ಮನವರಿಕೆ ಮಾಡಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ. ಮತ್ತು ಜಿಲ್ಲಾಢಳಿತವು ಇನ್ನು ಮುಂದೆ ಕೊರೊನಾದಿಂದ ದುರದೃಷ್ಟವಶಾತ್ ಯಾವುದಾದರೂ ಸಾವು ಸಂಭವಿಸಿದ್ದಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಬೋಳೂರು ವಿದ್ಯುತ್ ಚಿತಾಗಾರದಲ್ಲಿ ಶವಸಂಸ್ಕಾರ ಮಾಡಬೇಕೆಂದು ಶಾಸಕರಾದ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ ಹಾಗೂ ಈ ಭಾಗದ ಮನಪಾ ಸದಸ್ಯ ಜಗದೀಶ ಶೆಟ್ಟಿ ಬೋಳೂರು, ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತರಾದ ಮದನ ಮೋಹನ್ ಹಾಗೂ ತಹಶಿಲ್ದಾರರಾದ ಗುರುಪ್ರಸಾದ್ ಸಮಕ್ಷಮ ನಡೆದ ಅನೌಪಚಾರಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶಾಸಕ ಕಾಮತ್ ಅವರು ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ತಿಳಿಸಿದ್ದು ಜಿಲ್ಲಾಢಳಿತವು ಪ್ರತ್ಯೇಕ ನೊಟಿಫಿಕೇಶನ್ ಹೊರಡಿಸುತ್ತದೆ/ಹೊರಡಿಸಬಹುದು.ಹಾಗೂ ಸಮಾಜದ ಎಲ್ಲ ಹಿರಿಯರು ಹಾಗೂ ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ಕೊರೊನಾ ಶವಸಂಸ್ಕಾರದ ಬಗ್ಗೆ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಸಾಮಾಜಿಕ ಜಾಲತಾಣದ ಮೂಲಕ, ಟಿ.ವಿ ಮಾಧ್ಯಮದ ಮೂಲಕ ಮತ್ತು ದಿನಪತ್ರಿಕೆಗಳ ಮೂಲಕ ಹೆಚ್ಚಿನ ಜಾಗ್ರತಿ ವಹಿಸಿ ಕ್ರಮ ಕೈಗೊಳ್ಳಲು ಈ ಮೂಲಕ ಶಾಸಕ ವೇದವ್ಯಾಸ ಕಾಮತ್ ಅವರು ವಿನಂತಿಸಿದ್ದಾರೆ.ಈ ಬಗ್ಗೆ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಸರಕಾರದ ಎಲ್ಲ ಕ್ರಮಗಳಿಗೆ ನಾವು ಒಟ್ಟಾಗಿ ಕೈ ಜೋಡಿಸಿ ಕೊರೊನಾ ನಿರ್ಮೂಲನಕ್ಕೆ ಸಾಂಗೀಕ ಪ್ರಯತ್ನ ಮಾಡಬೇಕು ಎಂದು ಶಾಸಕರು ವಿನಂತಿಸಿದರು.


Spread the love