ಕೊರೊನಾ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಲೂಟಿ, ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹ

Spread the love

ಕೊರೊನಾ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಲೂಟಿ, ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹ

ಮಂಗಳೂರು: ಸರ್ಕಾರ ಕೊರೊನಾ ಹೆಣಗಳ ಮೇಲೆ ಹಣ ಮಾಡಿದೆ. ಕೊರೊನಾದ ಹೆಸರಿನಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದ್ದು, 4 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಎರಡು ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಲೂಟಿ ಮಾಡಿದೆ ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ದ ಬಗ್ಗೆ ಹಾಲಿ ನ್ಯಾಯಾಧೀಶ ರಿಂದ ನ್ಯಾಯಾಂಗ ತನಿಖೆ ನಡೆಯಲಿ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರಕಾರ ಕೋವಿಡ್ -19 ರ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮೂಲಕ 4ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಸುರಕ್ಷಾ ಸಾಮಾಗ್ರಿ, ವೈದ್ಯಕೀಯ ಉಪಕರಣಗಳ ಖರೀದಿಗೆ ಮತ್ತು ಕಾರ್ಮಿಕ ಇಲಾಖೆಯ ಮೂಲಕ ವೆಚ್ಚಮಾಡಿರುವುದಾಗಿ ದಾಖಲೆಯಲ್ಲಿ ತಿಳಿಸಿದೆ. ಆದರೆ ಈ ಮೊತ್ತವನ್ನು ಕೇಂದ್ರ ಸರಕಾರದ ಸಾಮಾಗ್ರಿ ಖರೀದಿ ಹಾಗೂ ಇತರ ರಾಜ್ಯಗಳು ಖರೀದಿಸಿದ ಕೋವಿಡ್ ಸಂಬಂಧಿಸಿದ ಸಾಮಾಗ್ರಿಗಳ ಬೆಲೆಗೆ ಹೋಲಿಸಿದರೆ, ರಾಜ್ಯದಲ್ಲಿ 2ಸಾವಿರ ಕೋಟಿಗೂ ಅಧಿಕ ಸಾರ್ವಜನಿಕರ ಹಣ ಕೊವಿಡ್ ಹೆಸರಿನಲ್ಲಿ ಲೂಟಿಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಕೊರೋನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ 30 ಜನರ ತಂಡ ಭೇಟಿ ನೀಡಲಿದೆ.ಕೊರೋನಾ ಸಂತ್ರಸ್ತರಿಗೆ ದೈರ್ಯ ತುಂಬುವ,ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಭ್ರಷ್ಟಾಚಾರ ಬಯಲಿಗೆಳೆಯಲು ಕಾಂಗ್ರೆಸ್ ಕಾರ್ಯಪ್ರವ್ರತ್ತವಾಗಿದೆ. ರಾಜ್ಯದಲ್ಲಿ ಕೊವಿಡ್ ನಿಯಂತ್ರಣದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ನಮ್ಮ ಸರಕಾರದ ಬಗ್ಗೆ ಆರೋಪಗಳಿದ್ದರೂ ಸೇರಿಸಿ ಕೊರೋನ ಅಕ್ರಮದ ಬಗ್ಗೆ ಹಾಲಿ ನ್ಯಾಯಾಧೀಶರ ನೇತ್ರತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಇದೇ ವೇಳೆ ಬಿಜೆಪಿ ನೀಡಿರುವ ಲೀಗಲ್ ನೋಟಿಸ್ ಪ್ರತಿಕ್ರಿಯಿಸಿ, ಸರ್ಕಾರದ ಎಲ್ಲ ನೋಟಿಸ್ಗೆ ಉತ್ತರ ನೀಡಲು ಸಿದ್ಧವಿದ್ದೇವೆ. ಹಗರಣ ನಡೆದಿದೆ ಅನ್ನೋದಕ್ಕೆ ಎಲ್ಲ ದಾಖಲೆಗಳಿವೆ. ಈ ಹಗರಣದ ತನಿಖೆಯನ್ನು ನ್ಯಾಯಾಧೀಶರು ವಿಚಾರಣೆ ಮಾಡಬೇಕು. ಎಲ್ಲಾ ಖರೀದಿ ಪ್ರಕ್ರಿಯೆ ಬಗ್ಗೆಯೂ ತನಿಖೆಯಾಗಲಿ. ನಾನು ಏನು ಮಾಡಿದ್ದೇನೆ ಎಂಬುವುದರ ಬಗ್ಗೆಯೂ ತನಿಖೆಯಾಗಲಿ. ನನ್ನ ಮೇಲೆ ಇಡಿ, ಸಿಒಡಿ, ಸಿಬಿಐ ತನಿಖೆ ಮಾಡಿದರು. ಈಗ ಗಲ್ಲು ಹಾಕೋಕೆ ಹೊರಟಿದ್ದಾರೆ. ನಾನು ಹೇಳಿದ್ದು ತಪ್ಪಾಗಿದ್ದರೆ ಸರ್ಕಾರ ನನ್ನನ್ನು ಗಲ್ಲಿಗೇರಿಸಲಿ ಎಂದು ಸವಾಲ್ ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ,ಅಭಯ ಚಂದ್ರ ಜೈನ್, ಶಾಸಕ ಯು.ಟಿ.ಖಾದರ್. ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೊ,ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ,ಐವನ್ ಡಿ ಸೋಜ, ಮಿಥುನ್ ರೈ, ಮೊದಲಾದವರು ಉಪಸ್ಥಿತರಿದ್ದರು.


Spread the love