ಕೊರೊನ ಹಿನ್ನಡೆಯಿಂದ ಯುವಜನತೆ ಭವಿಷ್ಯದ ಕುರಿತು ಚಿಂತಿಸಿ ಖಿನ್ನತೆಗೆ ಒಳಗಾಗವುದು ಬೇಡ : ವಿಶ್ವಾಸ್ ವಿ ಅಮೀನ್

Spread the love

ಕೊರೊನ ಹಿನ್ನಡೆಯಿಂದ ಯುವಜನತೆ ಭವಿಷ್ಯದ ಕುರಿತು ಚಿಂತಿಸಿ ಖಿನ್ನತೆಗೆ ಒಳಗಾಗವುದು ಬೇಡ : ವಿಶ್ವಾಸ್ ವಿ ಅಮೀನ್

ಉಡುಪಿ: ಕೊರೊನ ಮಹಾಮಾರಿಯಿಂದ ಆದ ಹಿನ್ನಡೆಯಿಂದ ಯುವಜನತೆ ಭವಿಷ್ಯದ ಕುರಿತು ಚಿಂತಿಸಿ ಖಿನ್ನತೆಗೆ ಒಳಗಾಗವುದು ಬೇಡ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ ಅಮೀನ್ ಹೇಳಿದ್ದಾರೆ

ಕೊರೊನಾ ಮಹಾಮಾರಿಯ ಕಾರಣದಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಬೇರೆ ಬೇರೆ ಪದವಿ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಪೈನಲ್ ಇಯರ್,ಗಳಲ್ಲಿ ಓದುತ್ತಿರುವ ಪದವಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ನೆನೆಸಿ ಆತಂಕಿತರಾಗಿದ್ದಾರೆ. ಜಿಲ್ಲೆಯಲ್ಲಿ ಯುವ ಜನತೆ ಲಾಕ್ಡೌನ್ ಸಮಸ್ಯೆಯಿಂದ ತಮ್ಮ ಭವಿಷ್ಯವೇ ಮುಗಿದು ಹೋಯಿತು ಎನ್ನುವಂತೆ ಖಿನ್ನತೆಗೊಳಗಾಗಿರುವ ವರದಿಗಳು ಬರುತ್ತಿರುವುದು ಆತಂಕಕ್ಕೀಡು ಮಾಡಿದೆ.

ಮೊನ್ನೆ ಕಾರ್ಕಳ ತಾಲೂಕಿನ ಮುನಿಯಾಲು ಸಮೀಪದ ಪೈನಲ್ ಇಯರ್ ಪದವಿ ವಿದ್ಯಾರ್ಥಿನಿಯೊರ್ವಳು ಪರೀಕ್ಷೆಗಳು ನಡೆದಿಲ್ಲ ಮುಂದೆ ಉದ್ಯೋಗ ಸಿಗುವುದಿಲ್ಲವೆಂದು ಖಿನ್ನತೆಗೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿರುವ ಘಟನೆ ಇರಬಹುದು, ಮಲ್ಪೆ ಸಮೀಪದ ಯುವಕನೋರ್ವ ಇಂತಹದೇ ಔದ್ಯೋಗಿಕ ಸಮಸ್ಯೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇರಬಹುದು ಇದು ಜಿಲ್ಲೆಯ ಮಟ್ಟಿಗೆ ಅತ್ಯಂತ ಆತಂಕಕಾರಿ ಬೆಳವಣಿಗೆ.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಯುವ ಜನತೆಗೊಂದು ಕಿವಿ ಮಾತನ್ನು ಹೇಳಲು ಇಷ್ಟಪಡುತ್ತೇನೆ. ಕೊರಾನ ಮಹಾಮಾರಿಯಿಂದ ನಾವು ಖಂಡಿತಾ ಹೊರಬರುತ್ತೇವೆ ಎನ್ನುವ ವಿಶ್ವಾಸವಿದೆ, ಈಗ ನಮಗಾಗಿರುವ ಸಮಸ್ಯೆ ಇದೊಂದು ತಾತ್ಕಾಲಿಕ ಸಮಸ್ಯೆಯಾಗಿದೆ (ಹಿನ್ನೆಡೆಯಾಗಿದೆ).

ಇದರಿಂದ ವಿದ್ಯಾರ್ಥಿಗಳಾಗಲಿ, ಯುವ ಜನತೆಯಾಗಲಿ ಆತ್ಮವಿಶ್ವಾಸವನ್ನು ಕಳೆದುಕೊಂಡು ಭಯಪಡುವ ಅವಶ್ಯಕತೆಯಿಲ್ಲ, ನನ್ನ ಯುವ ಮಿತ್ರರಲ್ಲಿ ವಿನಂತಿ, ದಯವಿಟ್ಟು ಯಾರೂ ಆತಂಕಕ್ಕೆ ಒಳಪಡದೇ ಭವಿಷ್ಯದ ಬಗ್ಗೆ ಆತ್ಮವಿಶ್ವಾಸದಿಂದ ಇರಬೇಕು. ಯುವಜನರು, ವಿದ್ಯಾರ್ಥಿಗಳು ಹೋರಾಟ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಖಂಡಿತಾ ಮುಂದಿನ ದಿನಗಳು ನಿಮ್ಮದಾಗಲಿದೆ, ನಿಮ್ಮ ಭವಿಷ್ಯ ಉಜ್ವಲವಾಗಲಿದೆ.

ರಾಜ್ಯದಲ್ಲೇ ಎಜುಕೇಷನ್ ಹಬ್ ಎಂದು ಖ್ಯಾತಿಗಳಿಸಿರುವ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತ ಯುವ ಜನರಿಗೆ ಸೂಕ್ತ ಉದ್ಯೋಗ ಅವಕಾಶಾಗಳಿಲ್ಲದೇ ನಮ್ಮ ಯುವ ಜನತೆ ಬೆಂಗಳೂರು ಮುಂಬಯಿ ಮುಂತಾದ ಅನ್ಯ ಜಿಲ್ಲೆ, ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಯುವಜನರ ವಲಸೆಯು ಜಿಲ್ಲೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ.

ಜಿಲ್ಲೆಯಲ್ಲಿ ಇಂದು ಮನೆ ಮನೆಗಳು ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಾಗಿ ನ್ಯೂಕ್ಲಿಯರ್ ಪ್ಯಾಮಿಲಿಗಳಾಗಿ ಮಾರ್ಪಟ್ಟಿವೆ.

ತಮ್ಮ ಅರ್ಹತೆಗೆ ತಕ್ಕಂತಹ ಉದ್ಯೋಗ ಸಿಗದೇ ಯುವ ಜನರು ವಲಸೆ ಹೋಗುವುದರಿಂದ ಇಂದು ಜಿಲ್ಲೆಯ ಮನೆ ಮನೆಗಳು ಅಕ್ಷರಶಃ ವೃದ್ದಾಶ್ರಮಗಳಾಗುತ್ತಿವೆ. ಒಂದು ಎರಡು ಮಕ್ಕಳಿರುವ ಹೆತ್ತವರು ಉದ್ಯೋಗ ನಿಮಿತ್ತ ದೂರದೂರಲ್ಲಿ ನೆಲೆಸಿರುವ ಮಕ್ಕಳಿಂದಾಗಿ ಮನೆಯಲ್ಲಿ ಮಕ್ಕಳ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ.

ಹಾಗಾಗಿ ಇಲ್ಲಿನ ಯುವ ಜನತೆಗೆ ಸ್ಥಳೀಯವಾಗಿಯೇ ಉದ್ಯೋಗ ಸಿಗುವಂತಾಗಬೇಕು. ನಾನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಮನವಿಯನ್ನು ಮಾಡುತ್ತೇನೆ : ನಮ್ಮ ಜಿಲ್ಲೆಗೆ ಐಟಿ ಬಿಟಿ,ಯಂತಹ ಕಂಪನಿಗಳು ಬರಬೇಕು, ಜಿಲ್ಲೆಯ ಸುಂದರ ಪರಿಸರಕ್ಕೆ ಹಾನಿಯಾಗದಂತಹ ಬೃಹತ್ ಉದ್ದಿಮೆಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು. ಆ ಮೂಲಕ ಇಲ್ಲಿನ ಯುವ ಜನರು ಜಿಲ್ಲೆ ಬಿಟ್ಟು ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ.

ನಮ್ಮ ಜಿಲ್ಲೆಯ ಶಾಸಕರುಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಈ ಎಲ್ಲಾ ನಿಟ್ಟಿನಲ್ಲಿ ಯುವ ಜನರ ಮೇಲಿನ ಕಾಳಜಿಯಿಂದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಟ್ವಿಟರ್ ಅಭಿಯಾನವನ್ನು ಮಾಡಲು ನಿರ್ಧರಿಸಿದೆ.

ನನ್ನೆಲ್ಲಾ ಯುವ ಮಿತ್ರರು ಈ ಟ್ವಿಟರ್ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ನಮ್ಮ ಜಿಲ್ಲೆಯ ಅಭಿವೃದ್ಧಿ ಹಾಗೂ ಯುವ ಜನರ ಉದ್ಯೋಗದ ಸಮಸ್ಯೆಗಳಿಗೆ ಸ್ಪಂದನೆಯನ್ನು ನೀಡಬೇಕೆಂದು ಮನವಿಯನ್ನು ಮಾಡುತ್ತೇನೆ.

ಮತ್ತೊಮ್ಮೆ ಯುವ ಮಿತ್ರರಲ್ಲಿ ಮನವಿಯನ್ನು ಮಾಡುತ್ತೇನೆ  ಪ್ರಸ್ತುತ ನಮಗಾಗಿರುವ ತಾತ್ಕಾಲಿಕ ಸಮಸ್ಯೆಯಿಂದ ನಾವು ಖಂಡಿತಾ ಹೊರಬರಲಿದ್ದೇವೆ. ಕೊರಾನ ಸಮಸ್ಯೆಗಳಿಂದ ಆದ ಅನಾಹುತಗಳನ್ನು ಮೆಟ್ಟಿನಿಂತು ಸುಂದರ ಬದುಕನ್ನು ಕಾಣುವ ವಿಶ್ವಾಸದಿಂದ ಮುನ್ನಡೆಯೋಣ. ಯುವ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ಯಾವುದೇ ಕ್ಷಣದಲ್ಲೂ ಯುವ ಕಾಂಗ್ರೆಸ್ ಸನ್ನದ್ದವಾಗಿರುತ್ತದೆ ಎನ್ನುವ ಭರವಸೆಯನ್ನು ಈ ಮೂಲಕ ನೀಡುತ್ತಿದ್ದೇನೆ.


Spread the love