ಕೊರೋನಾ ಪ್ರಭಾವ; ಉಡುಪಿಯಲ್ಲಿ ಮಳೆಯ ನಡುವೆ ಸರಳವಾಗಿ ವಿಟ್ಲಪಿಂಡಿ ಉತ್ಸವ ಸಂಪನ್ನ

Spread the love

ಕೊರೋನಾ ಪ್ರಭಾವ; ಉಡುಪಿಯಲ್ಲಿ ಮಳೆಯ ನಡುವೆ ಸರಳವಾಗಿ ವಿಟ್ಲಪಿಂಡಿ ಉತ್ಸವ ಸಂಪನ್ನ

ಉಡುಪಿ: ದೇವಾಲಯಗಳ ನಗರಿ ಉಡುಪಿಗೆ ಹೊಸ ಚೈತನ್ಯ ನೀಡುವ ಹಬ್ಬ ಶ್ರೀ ಕೃಷ್ಣ ಜನ್ಮಾಷ್ಟಮಿ. ಲಕ್ಷಾಂತರ ಜನರು ಭಾಗವಹಿಸುವ ಉತ್ಸವ ವಿಟ್ಲಪಿಂಡಿ. ಆದರೆ ಕೊರೋನಾ ಪ್ರಭಾವದಿಂದ ಈ ಬಾರಿ ಕೃಷ್ಣ ಮಠದಲ್ಲಿ ನೀರಸ ಅಷ್ಟಮಿ ನಡೆಯಿತು. ಆಚರಣೆಗಳು ಕೇವಲ ಸಂಪ್ರದಾಯಕ್ಕೆ ಸೀಮಿತವಾಗಿತ್ತು.

ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಶುಕ್ರವಾರ ಗೋಪಾಲಕರಿಂದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ವಿಟ್ಲಪಿಂಡಿ ಉತ್ಸವ ಅದ್ದೂರಿಯಾಗಿ ನಡೆಯುವ ಬದಲು ಸಾಂಪ್ರದಾಯಿಕವಾಗಿ ನಡೆಯುವದರ ಮೂಲಕ ಸಂಪನ್ನಗೊಂಡಿದೆ.

ಕೃಷ್ಣಮಠದಲ್ಲಿ ಸಂಪ್ರದಾಯಗಳಿಗೆ ಸೀಮಿತವಾಗಿ ವಿಟ್ಲಪಿಂಡಿ ಉತ್ಸವ ನಡೆಯಿತು. ಭಕ್ತರಿಗೆ ರಥಬೀದಿಗೆ ಬರಲು ಅವಕಾಶವಿರಲಿಲ್ಲ. ಮಠದ ವೈದಿಕರು, ಗೊಲ್ಲರು, ಸಿಬ್ಬಂದಿಗಳು ಮಾತ್ರ ಹಾಜರಿದ್ದು ಸರಳತೆಯ್ಲೂ ವೈಭವ ತೋರಿಸುವ ಹರಸಾಹಸ ಮಾಡಿದರು. ಪರ್ಯಾಯ ಅದಮಾರು ಮಠಾಧೀಶರು ಕಡಗೋಲು ಕೃಷ್ಣನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಪ್ರದಕ್ಷಿಣೆ ತರುವಾಗ ಮಠದ ಗೊಲ್ಲರು ಮೊಸರುಕುಡಿಕೆಗಳನ್ನು ಒಡೆಯುತ್ತಾ ಸಾಗಿದರು.

ಲಕ್ಷಾಂತರ ಉಂಡೆ ಚಕ್ಕುಲಿ ಮಾಡಿದ್ದರೂ ಪ್ರಸಾದ ಸ್ವೀಕರಸಲು ಭಕ್ತರು ಬರಲು ಅವಕಾಶವಿರಲಿಲ್ಲ. ರಥಬೀದಿಯ ನಾಲ್ಕೂ ದ್ವಾರಗಳನ್ನು ಪೊಲೀಸ್ ಭದ್ರೆತೆಯಲ್ಲಿ ಬಂದ್ ಮಾಡಲಾಗಿತ್ತು. ಜನ ಸೇರಬಾರದು ಅನ್ನೋ ಕಾರಣಕ್ಕೆ ಮಧ್ಯಾಹ್ನದ ನಂತರ ಕನಕಕಿಂಡಿಯ ಮೂಲಕ ದೇವರ ದರ್ಶನಕ್ಕೂ ಬ್ರೇಕ್ ಹಾಕಲಾಗಿತ್ತು. ಜಿಟಜಿಟಿ ಮಳೆಯ ನಡುವೆಯೇ ಸಾಂಪ್ರದಾಯಿಕ ಉತ್ಸವ ಸಂಪನ್ನಗೊಂಡಿತು.

ಜನರ ಬದಲಿಗೆ ಮಠದ ದನಗಳನ್ನು ರಥಬೀದಿಯಲ್ಲಿ ಕಟ್ಟಿ, ಕೃಷ್ಣ ದೇವರ ಆಗಮನವನ್ನು ಸಂಭ್ರಮಿಸಿದ್ದು ವಿಟ್ಲಪಿಂಡಿಯ ವಿಶೇಷ. ಶ್ರೀ ಕೃಷ್ಣ ಲೀಲೋತ್ಸವದ ದಿನ ಸಾವಿರಾರು ವೇಷಧಾರಿಗಳು ರಥಬೀದಿಗೆ ಬರೋದು ಸಂಪ್ರದಾಯ. ಆದರೆ ಈ ಬಾರಿ ಸಾಂಕೇತಿಕವಾಗಿ ಕೊರೋನಾ ಜಾಗೃತಿಯ ಒಂದೆರಡು ವೇಷಗಳು ಮಾತ್ರ ಬಂದಿದ್ದವು.

ಈ ರೀತಿಯ ಅಷ್ಟಮಿ ಆಚರಣೆಯನ್ನು ಈ ತಲೆಮಾರಿನ ಜನರು ನೋಡಿದ್ದಿಲ್ಲ. ಆದರೂ ಸಂಪ್ರದಾಯಗಳಿಗೆ ಚ್ಯುತಿಯಾಗದಂತೆ ಮಠ ಹಾಗೂ ಜಿಲ್ಲಾಡಳಿತ ಎಚ್ಚರಿಕೆ ವಹಿಸಿ ಅಷ್ಟಮಿಯ ಆಚರಣೆ ನಡೆಸಿದ್ದು ಗಮನಾರ್ಹ.


Spread the love