ಕೊರೋನಾ ಹಿನ್ನಲೆ; ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರಿಂದ ಸರಳ ರೀತಿಯಲ್ಲಿ ತೆನೆ ಹಬ್ಬ ಆಚರಣೆ

Spread the love

ಕೊರೋನಾ ಹಿನ್ನಲೆ; ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರಿಂದ ಸರಳ ರೀತಿಯಲ್ಲಿ ತೆನೆ ಹಬ್ಬ ಆಚರಣೆ

ಉಡುಪಿ: ಕರಾವಳಿ ಕ್ರೈಸ್ತ ಭಾಂಧವರ ಅತ್ಯಂತ ಶ್ರದ್ದೆಯ ಹಬ್ಬ ತೆನಹಬ್ಬ ಹಾಗೂ ಕನ್ಯಾಮರಿಯಮ್ಮನವರ ಜನ್ಮದಿನ (ಮೊಂತಿ ಫೆಸ್ಟ್) ವನ್ನು ಕೊರೋನಾ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಳ ರೀತಿಯಲ್ಲಿ ಮಂಗಳವಾರ ಆಚರಿಸಲಾಯಿತು.

ಕೊರೋನಾ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಸಾಮೂಹಿಕ ಆಚರಣೆಗೆ ನಿಷೇಧವಿದ್ದ ಹಿನ್ನಲೆಯಲ್ಲಿ ಹಾಗೂ ಪುಟ್ಟ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕನ್ಯಾಮರಿಯಮ್ಮನವರ ಮೂರ್ತಿಗೆ ಹೂಗಳ ಸಮರ್ಪಣೆ ಹಾಗೂ ಮೆರವಣಿಗೆಗಳನ್ನು ರದ್ದುಗೊಳಿಸಲಾಗಿತ್ತು.

ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆರ್ಶಿವದಿಸಿ ಬಲಿಪೂಜೆಗಳನ್ನು ನೆರವೇರಿಸಲಾಯಿತು. ಪ್ರತಿ ಚರ್ಚುಗಳಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಬಲಿಪೂಜೆಗಳನ್ನು ಆಯೋಜಿಸಿಲಾಗಿತ್ತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಹೊಸ ತೆನೆಗಳನ್ನು ಆಶೀರ್ವದಿಸಿ ಬಲಿಪೂಜೆಯನ್ನು ನೆರವೇರಿಸಿ ಸರ್ವ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಬಲಿಪೂಜೆಗಳಿಗೆ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಪ್ರವೇಶ ನಿಷೇಧಿಸಿದ್ದು ಆಯ್ದ ಭಕ್ತರು ಚರ್ಚಿನೊಳಗೆ ಆಗಮಿಸುವ ಮುನ್ನ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಿದರು. ಪೂಜೆಗೆ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗುಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು.

ಪ್ರತಿ ವರ್ಷ ವಾಡಿಕೆಯಂತೆ ಹಬ್ಬದ 9 ದಿನ ಮುಂಚಿತವಾಗಿ ಅಂದರೆ ಅಗಸ್ಟ್ 30ರಿಂದ ಚರ್ಚುಗಳಲ್ಲಿ ವಿಶೇಷವಾಗಿ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿ ಮೊಂತಿ ಹಬ್ಬದ ಆಚರಣೆಗೆ ನಾಂದಿಯಾಗುತ್ತದೆ ಆದರೆ ಈ ಬಾರಿ 9 ದಿನಗಳ ನೊವೆನಾವನ್ನು ಕೇವಲ ಸಾಂಕೇತಿಕವಾಗಿ ನೆರವೇರಿಸಿದ್ದು ಮಕ್ಕಳ ತಮ್ಮ ಮನೆಗಳಲ್ಲಿಯೇ ಕುಟುಂಬದೊಡನೆ ಸೇರಿ ಮೇರಿ ಮಾತೆಗೆ ಹೂಗಳನ್ನು ಸಮರ್ಪಿಸಲು ಸೂಚಿಸಲಾಗಿತ್ತು

ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ವಾಳೆಯ ಗುರಿಕಾರರು ಮತ್ತು ಪ್ರತಿನಿಧಿಗಳ ಮೂಲಕ ನೀಡಿ ಹರಸಿದರು. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಸಹ ಪ್ರತಿ ವಾಳೆಯ ಗುರಿಕಾರರು ಪ್ರತಿನಿಧಿಗಳ ಮೂಲಕ ಕಳುಹಿಸಿಕೊಡುವ ವ್ಯವಸ್ಥೆ ಕೂಡ ಮಾಡಲಾಗಿತ್ತು..

ಇಗರ್ಜಿಯಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸೇವಿಸಿದರು.


Spread the love