ಕೊಲ್ಲೂರು: ಚೇಂಬರ್ ನಿಂದ ಉಕ್ಕಿ ಹರಿದ ಹೊಲಸು ನೀರು!

Spread the love

ಕೊಲ್ಲೂರು: ಚೇಂಬರ್ ನಿಂದ ಉಕ್ಕಿ ಹರಿದ ಹೊಲಸು ನೀರು!

ಕುಂದಾಪುರ: ಜಗತ್ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಂಬಂಧಿಸಿದ ಸಂಪ್ರೆ ಗಣಪತಿ ದೇವಸ್ಥಾನದ ಮುಂಭಾಗ ಕೊಳಚೆ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ಪರಿಸರವಿಡೀ ದುರ್ನಾತ ಬೀರುತ್ತಿದೆ.

ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಕೊಳಚೆ ನೀರನ್ನೇ ಮೆಟ್ಟಿಕೊಂಡು ಒಳ ಪ್ರವೇಶಿಸುವ ಸ್ಥಿತಿ ನಿರ್ಮಾಣವಾಗಿದ್ದು, ಕಲ್ಮಶಯುಕ್ತ ನೀರು ನದಿಯನ್ನು ಸೇರುತ್ತಿದೆ.

ಕೊಲ್ಲೂರಿನ ಪರಿಸರದಲ್ಲಿ ಖಾಸಗಿ ವಸತಿಗೃಹ ಇನ್ನಿತರ ಭಾಗಗಳಿಂದ ಎಲ್ಲೆಂದರಲ್ಲಿ ಹೊರಬಂದು ಪುಣ್ಯ ನದಿ ಸೌಪರ್ಣಿಕಾ ಹಾಗೂ ಅಗ್ನಿ ತೀರ್ಥವನ್ನು ಸೇರುತ್ತಿದ್ದ ಕೊಳಚೆ ಹಾಗೂ ತ್ಯಾಜ್ಯಗಳಿಗೆ ಶಾಶ್ವತ ಮುಕ್ತಿ ನೀಡುವಂತೆ ಸ್ಥಳೀಯರ ಹಾಗೂ ಭಕ್ತರ ನಿರಂತರ ಹಕ್ಕೊತ್ತಾಯದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ದೇವಸ್ಥಾನದ ಸಹಕಾರದಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಬಂದಿತ್ತು. ಯೋಜನೆಯ ಪ್ರಾರಂಭದಿಂದಲೂ ಒಂದಲ್ಲಾ ಒಂದು ರೀತಿಯಿಂದ ಸುದ್ದಿಯಾಗುತ್ತಿದ್ದ ಒಳಚರಂಡಿ ಯೋಜನೆ ಇವತ್ತಿಗೂ ಸರಿಯಾದ ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿಲ್ಲ. ಬಸ್ಸು ನಿಲ್ದಾಣದ ಬಳಿಯಲ್ಲಿ ಪಂಪ್ ಹೌಸ್ ನಿರ್ಮಾಣಕ್ಕೆ ಮುಂದಾದಾಗ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಅಂದಿನ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ಬರಬೇಕಾದ ಪರಿಸ್ಥಿತಿಗಳು ಬಂದೊದಗಿತ್ತು. ಒಳಚರಂಡಿ ನಿರ್ವಹಣೆಯನ್ನು ದೇವಸ್ಥಾನದವರು ನಿರ್ವಹಿಸಬೇಕೇ ಅಥವಾ ಗ್ರಾ.ಪಂ ಯಿಂದ ನಿರ್ವಹಿಸಬೇಕೆ ಎನ್ನುವ ಬಗ್ಗೆ ಇನ್ನೂ ಶಾಶ್ವತ ಪರಿಹಾರಗಳು ಸಿಕ್ಕಿಲ್ಲ. ಈ ಮಧ್ಯೆ ಯೋಜನೆಯ ನಿರ್ವಹಣೆಗಾಗಿ ದೇವಸ್ಥಾನದಿಂದಲೇ ಲಕ್ಷಾಂತರ ರೂ. ಬಳಕೆಯಾಗಿದೆ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿದೆ.

ಸಮಸ್ಯೆ ಇದೇ ಮೊದಲಲ್ಲ!:
ಕೆಲ ಸಮಯದ ಹಿಂದೆ ಪುಣ್ಯ ನದಿ ಕಾಶಿ ತೀರ್ಥಕ್ಕೆ ತೆರಳುವ ದಾರಿಯಲ್ಲಿ ಒಳಚರಂಡಿಗಾಗಿ ನಿರ್ಮಿಸಲಾಗಿದ್ದ ಚೇಂಬರ್ ನಿಂದ ಉಕ್ಕಿ ಹರಿದ ಕಶ್ಮಲಯುಕ್ತ ನೀರು ಪರಿಸರದ ಮನೆಯಂಗಳ, ಬಾವಿಗಳನ್ನು ಸೇರಿ ದೊಡ್ಡ ಮಟ್ಟದಲ್ಲಿ ಸ್ಥಳೀಯರ ಆಕ್ರೋಶವನ್ನು ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಈ ಸುದ್ದಿಯನ್ನು ನೋಡಿದ ಅಂದಿನ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರಿಂದ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸಲಾಗಿತ್ತು.

ದುರ್ನಾತ ಬೀರುತ್ತಿರುವ ಸಂಪ್ರೆ ಗಣಪತಿ ದೇಗುಲ:
ಕೊಲ್ಲೂರಿನ ಇತಿಹಾಸ ಪ್ರಸಿದ್ದವಾದ ಸಂಪ್ರೆ ಗಣಪತಿ ದೇವಸ್ಥಾನಕ್ಕೆ ತೆರಳುವ ಭಕ್ತರು ಪುಣ್ಯ ನದಿ ಸೌಪರ್ಣಿಕೆಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಗಣಪತಿ ದೇವಸ್ಥಾನವನ್ನು ಪ್ರವೇಶಿಸುವುದು ವಾಡಿಕೆ. ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿರುವ ಒಳಚರಂಡಿ ಯೋಜನೆಯ ಚೇಂಬರ್ ನಿಂದ ಕಶ್ಮಲಯುಕ್ತ ಹೊಲಸು ನೀರು ಹರಿದು ದೇವಸ್ಥಾನ ಮುಂಭಾಗದಲ್ಲಿ ಹರಿದ ಪರಿಣಾಮ ದೇವಸ್ಥಾನದ ಆವರಣವೆಲ್ಲಾ ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ದೇಗುಲಕ್ಕೆ ತೆರಳುವ ಭಕ್ತರು ಹೊಲಸು ನೀರನ್ನೇ ಮೆಟ್ಟಿಕೊಂಡು ದೇವಸ್ಥಾನ ಪ್ರವೇಶಿಸಬೇಕಾದ ಸ್ಥಿತಿ ಬಂದಿರುವುದರಿಂದ ಸ್ಥಳೀಯರು ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊಲ್ಲೂರಿಗೆ ಬಹು ಉಪಯೋಗವಾಗುತ್ತದೆ ಎನ್ನುವ ನಿರೀಕ್ಷೆ ಇದ್ದ ಒಳಚರಂಡಿ ಯೋಜನೆ ಒಂದಲ್ಲ ಒಂದು ರೀತಿಯಿಂದ ಸ್ಥಳೀಯರಿಗೆ ಬಾಧಕವಾಗುತ್ತಿದೆ. ಪುಣ್ಯ ತೀರ್ಥ ಹರಿಯುವ ಸ್ಥಳದಲ್ಲಿ ಕೊಳಚೆ ನೀರು ಹರಿಯುತ್ತಿರುವ ದುಸ್ಥಿತಿ ಬಂದಿರುವುದು ಖೇದಕರ ಎಂದು ಸಾಮಾಜಿ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು ಬೇಸರ ವ್ಯಕ್ತಪಡಿಸಿದ್ದಾರೆ.


Spread the love