ಕೊಳತ್ತಮಜಲುವಿನಲ್ಲಿ ಯುವಕನ ಕೊಲೆ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಖಂಡನೆ
ಮಂಗಳೂರಿನ ಬಂಟ್ವಾಳದಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಗಂಭೀರ ಹಲ್ಲೆ ನಡೆದಿದ್ದು, ಸ್ಥಳದಲ್ಲೇ ಒಬ್ಬನು ಮೃತನಾಗಿದ್ದಾನೆ, ಇನ್ನೊಬ್ಬ ಯುವಕ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯು ಕೋಮು ದ್ವೇಷದ ರಾಜಕಾರಣಕ್ಕೆ ತತ್ತರಿಸಿದೆ, ಕೋಮು ರಾಜಕೀಯಕ್ಕೆ ಯುವಕರು ಬಲಿಯಾಗುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ. ಹೆಣದ ಮೇಲಿನ ರಾಜಕಾರಣ ಮತ್ತು ಕೊಲ್ಲುವ ಸಂಸ್ಕೃತಿಯನ್ನು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕವು ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಅಮಾನುಷ ಕೃತ್ಯ ನಡೆಸಿರುವ ಅಪರಾಧಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸುತ್ತೇವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಈ ಬಗೆಯ ಕೋಮು ದ್ವೇಷ ಪ್ರೇರಿತ ಕೊಲೆ ಮತ್ತು ಹಲ್ಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಯುವಕರಲ್ಲಿ ಕೋಮು ದ್ವೇಷವನ್ನು ಬಿತ್ತುತ್ತಿರುವ ದ್ವೇಷ ಭಾಷಣಕಾರರು. ತಮ್ಮ ದ್ವೇಷಭಾಷಣಗಳಿಂದ ಯುವಕರನ್ನು ತಪ್ಪುದಾರಿಗೆ ತಳ್ಳುತ್ತಿರುವ ದ್ವೇಷ ಭಾಷಣಕಾರರನ್ನು ಪೊಲೀಸರು ಗುರುತಿಸಿ ತಕ್ಷಣ ಬಂಧಿಸಬೇಕು. ಇಂತಹ ಕೃತ್ಯ ಪುನಾರವರ್ತಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದರೂ ಸಹ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಖೇದಕರ. ಈ ಹಿಂದೆ ನಡೆದ ಮಾಬ್ ಲಿಂಚಿಂಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸದೇ ಇರುವುದು ಸಹ ಈ ಕ್ರಿಮಿನಲ್ ಕೆಲಸಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಗೃಹ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಅಮಾಯಕ ಯುವಕರ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ತಪಿತ್ತಸ್ಥರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಬೇಕು.
ಈ ಹಿಂದೆ ಕುಡುಪುವಿನಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಿದ ಜಿಲ್ಲಾ ಪೋಲಿಸ್ ಕಮಿಷನರ್ ಅವರು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಸಂಪೂರ್ಣವಾಗಿ ವಿಫಲರಾಗಿರುವುದಕ್ಕೆ ಈ ಹತ್ಯೆ ನಡೆಯಲು ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಸತ್ಯ. ಆದ್ದರಿಂದ ಪೋಲಿಸ್ ಆಯುಕ್ತರನ್ನು ತಕ್ಷಣ ಬದಲಿಸಿ ಬೇರೆಯವರನ್ನು ನೇಮಿಸಬೇಕು ಹಾಗೂ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಲು ವಿಶೇಷ ತಂಡ ಹಾಗೂ ತನಿಖಾಧಿಕಾರಿಯನ್ನು ನೇಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕವು ಆಗ್ರಹಿಸುತ್ತದೆ.
 
            
