ಕೋಟ್ಯಾಂತರ ಮೌಲ್ಯದ ಸ್ಥಳವನ್ನು ಗುಂಡ್ಯಡ್ಕ ರಸ್ತೆ ನಿರ್ಮಾಣಕ್ಕೆ ದಾನ ಮಾಡಿದ ಮಂಗಳೂರಿನ ಡಾ| ಸುಧೀರ್ ಹೆಗ್ಡೆ ಕುಟುಂಬ

Spread the love

ಕೋಟ್ಯಾಂತರ ಮೌಲ್ಯದ ಸ್ಥಳವನ್ನು ಗುಂಡ್ಯಡ್ಕ ರಸ್ತೆ ನಿರ್ಮಾಣಕ್ಕೆ ದಾನ ಮಾಡಿದ ಮಂಗಳೂರಿನ ಡಾ| ಸುಧೀರ್ ಹೆಗ್ಡೆ ಕುಟುಂಬ

ಕಾರ್ಕಳ : ಕಾರ್ಕಳದ ಬಿ.ಬಿ.ಎಂ ಕಾಲೇಜು ಹಾಗೂ ಮಹಿಳಾ ಪಾಲಿಟೆಕ್ನಿಕ್ ಸಂಪರ್ಕದ ರಸ್ತೆ ಇಂದು ಅಗಲೀಕರಣವಾಗಿ ಕಾಂಕ್ರಿಟೀಕೃತಗೊಂಡು ಎರಡೂ ಭಾಗದ ವಾಹನಗಳು ಸಲೀಸಾಗಿ ಹಾದಿಹೋಗುವಷ್ಟರ ಮಟ್ಟಿಗೆ ನಿರ್ಮಾಣವಾಗಿದೆ.

ಸರಕಾರಿ ಬಿ.ಬಿ.ಎಂ ಕಾಲೇಜಿಗೆ ತೀರಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಭವಿಷ್ಯದ ಕನಸುಗಳನ್ನು ಹೊತ್ತು ಮೌಲ್ಯಯುತ ಶಿಕ್ಷಣಕ್ಕಾಗಿ ನಿತ್ಯ ಬರುತ್ತಿದ್ದಾರೆ. ಇಲ್ಲಿನ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುವುದೆಂದರೆ ಬಹಳ ಸಂಕಷ್ಟವಾಗುತ್ತಿತ್ತು. ವಿದ್ಯಾರ್ಥಿಗಳನ್ನು ಹೊತ್ತು ತರುವ ಬಸ್ ಈ ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿತ್ತು.

ಕಡಿದಾದ ರಸ್ತೆ, ರಸ್ತೆಯ ಒಂದು ಭಾಗದಲ್ಲಿ ಅಡಿಕೆ, ತೆಂಗಿನ ತೋಟ ಇನ್ನೊಂದೆಡೆ ಅಗಲವಾದ ತೋಡು. ಮಳೆಗಾಲದಲ್ಲಿ ಈ ತೋಡು ತುಂಬಿ ಹರಿಯುವುದನ್ನು ಕಂಡಾಗ ಈ ರಸ್ತೆಯಲ್ಲಿ ಸಂಚರಿಸುವುದೇ ಬೇಡ ಎಂಬ ಭಯ ಉಂಟಾಗುತ್ತಿತ್ತು. ಕಳೆದ ಸಾಲಿನ ಮಳೆಗಾಲದಲ್ಲಿ, ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ನೀರಿನ ತೋಡಿಗೆ ಬಿದ್ದೇ ಬಿಟ್ಟಿತು. ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು. ಇನ್ಯಾವಾಗ ಈ ರಸ್ತೆ ಅಗಲೀಕರಣಗೊಳ್ಳುವುದೋ ಎಂಬ ಒತ್ತಾಸೆಯಿಂದ ಜನ ಕಾಯತೊಗಿದ್ದರು.

ಹೃದಯ ವೈಶಾಲ್ಯತೆ ಮೆರೆದ ಡಾ| ಸುಧೀರ್ ಹೆಗ್ಡೆ ಕುಟುಂಬ

ಮಂಗಳೂರಿನ ತಜ್ಞ ಕಣ್ಣಿನ ವೈದ್ಯ ಡಾ| ಸುಧೀರ್ ಹೆಗ್ಡೆ ಕುಟುಂಬಸ್ಥರ ಮನೆ ಈ ಪರಿಸರದಲ್ಲಿ ಇದೆ. ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಕಣ್ಣಿನ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಣ್ಣಿನ ವೈದ್ಯರ ಅಸೋಸಿಯೇಶನ್ ಅಧ್ಯಕ್ಷರಾದ ಡಾ| ಸುಧೀರ್ ಹೆಗ್ಡೆಯವರು, ಈ ರಸ್ತೆಯಲ್ಲಿ ವಾಹನ ಸಂಚಾರಕ್ಕುಂಟಾಗುವ ತೊಂದರೆ ಹಾಗೂ ಬಸ್ ಅಪಘಾತದಿಂದಾಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾದುದನ್ನು ತಿಳಿದು ಮನನೊಂದಿದ್ದರು.

ತಕ್ಷಣ ರಸ್ತೆ ಅಗಲೀಕರಣ ಮಾಡಬೇಕೆಂಬ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ ಹೆಗ್ಡೆ ಕುಟುಂಬ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಸ್ಥಳವನ್ನು ರಸ್ತೆ ಅಗಲೀಕರಣಕ್ಕಾಗಿ ದಾನ ನೀಡಿದ್ದಾರೆ. 27 ವರ್ಷದ ಹಿಂದೆಯೂ ಸರಕಾರಿ ಬಿ.ಬಿ.ಎಂ ಕಾಲೇಜಿಗೆ ಹೋಗಲು ರಸ್ತೆ ನಿರ್ಮಾಣಕ್ಕಾಗಿ ಒಂದು ಎಕ್ರೆಗಿಂತಲೂ ಹೆಚ್ಚು ಸ್ಥಳವನ್ನು ನೀಡಿ ವಿಶಾಲ ಮನೋಭಾವವನ್ನು ಈ ಕುಟುಂಬ ತೋರ್ಪಡಿಸಿತ್ತು.

ಇದೀಗ ರಸ್ತೆ ಸುಂದರವಾಗಿದೆ. ತೋಡಿಗೆ ಅಡ್ಡಲಾಗಿ ಕಾಂಕ್ರಿಟೀಕೃತ ತಡೆಬೇಲಿ ನಿರ್ಮಿಸಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ.

ವೈದ್ಯ ಸುಧೀರ್ ಹೆಗ್ಡೆಯವರ ಹೃದಯ ವೈಶಾಲ್ಯತೆಯಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗುಂಟಾಗುವ ಸಮಸ್ಯೆ ಪರಿಹಾರ ಕಂಡಂತಾಗಿದೆ.

ಈ ಕುರಿತು ಮಾತನಾಡಿದ ಡಾ| ಸುಧೀರ್ ಹೆಗ್ಡೆ ವಿದ್ಯಾರ್ಥಿಗಳ ಬಸ್ ಅಪಘಾತಕ್ಕೊಳಗಾದುದು ನನಗೆ ಅತೀವ ನೋವನ್ನು ತಂದಿತ್ತು. ಈ ಘಟನೆಯ ಬಳಿಕ ಶಾಸಕ ಸುನಿಲ್ ಕುಮಾರ್ ನನ್ನನ್ನು ಭೇಟಿ ಮಾಡಿ ರಸ್ತೆ ಅಗಲೀಕರಣದ ಅಗತ್ಯತೆ ಬಗ್ಗೆ ತಿಳಿಸಿದ್ದರು. ತಕ್ಷಣ ನಾನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ರಸ್ತೆ ಅಗಲೀಕರಣ ಮಾಡಲು ಸ್ಥಳ ನೀಡಲು ಒಪ್ಪಿಕೊಂಡಿದ್ದೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಒಳಿತಾಗಲಿ ಎಂಬ ಆಶಯ ನಮ್ಮ ಕುಟುಂಬದ್ದಾಗಿದೆ.

 


Spread the love