ಕೋಟ ಜೋಡಿ ಕೊಲೆ ಪ್ರಕರಣ; ಮತ್ತೆ ಐವರು ಆರೋಪಿಗಳ ಬಂಧನ

Spread the love

ಕೋಟ ಜೋಡಿ ಕೊಲೆ ಪ್ರಕರಣ; ಮತ್ತೆ ಐವರು ಆರೋಪಿಗಳ ಬಂಧನ

ಉಡುಪಿ : ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಸೋಮವಾರ ಇನ್ನೂ 5 ಮಂದಿಯನ್ನು ಬಂಧಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಬಂಧಿತರನ್ನು ಉಡುಪಿ ಪುತ್ತೂರು ಸುಬ್ರಹ್ಮಣ್ಯ ನಗರದ ಅಭಿಷೇಕ @ ಅಭಿ ಪಾಲನ್ (23), ಬಾರ್ಕೂರು ಹನೆಹಳ್ಳಿ ಗ್ರಾಮದ ಸಂತೋಷ್ ಕುಂದರ್ (35) ಬ್ರಹ್ಮಾವರ ನಿವಾಸಿ ನಾಗರಾಜ @ ರೊಟ್ಟಿ ನಾಗರಾಜ(44), ಭದ್ರಾವತಿ ನಿವಾಸಿ ಪ್ರಣವ್ ರಾವ್ (20) ಮತ್ತು ಅಂಜಾರು ನಿವಾಸಿ ಶಂಕರ ಮೊಗವೀರ(41) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಲ್ಲಿ ಅಭೀಷೇಕ ಕೊಲೆ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದು, ಈತನು ಪೈಂಟಿಂಗ್ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದಾನೆ.

ಬಂಧಿತ ಇತರ ನಾಲ್ವರು ಆರೋಪಿಗಳಿಗೆ ಸಹಾಯ ಮಾಡಿದ್ದು ಆರೋಪಿ ಸಂತೋಷ್ ಕುಂದರ್ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ್ದು, ಇನ್ನೋರ್ವ ಆರೋಪಿಗಳಾದ ಶಂಕರ ಮೊಗವೀರ ನಾಗರಾಜ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿರುತ್ತಾರೆ. ಆರೋಪಿ ಪ್ರಣವ್ ರಾವ್ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದು ಆರೋಪಿತರಿಗೆ ಹಣ ಮತ್ತು ಮೊಬೈಲ್ ನೀಡಿ ಸಹಕರಿಸಿದ್ದಾನೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಹದಿಮೂರಕ್ಕೇರಿದೆ.

ಭಾನುವಾರವಷ್ಟೇ ಪೊಲೀಸರು ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎಂಬವರನ್ನು ಬಂಧಿಸಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.15ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.

ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಶೌಚಾಲಯ ಹೊಂಡದ ವಿವಾದಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಯತೀಶ್ ಎಂಬವರನ್ನು ತಂಡವೊಂದು ಜ.26ರಂದು ಕೊಲೆಗೈದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ, ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಐದು ಮಂದಿಯ ಬಂಧನದೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಒಟ್ಟು ಹದಿಮೂರಕ್ಕೇರಿದೆ.


Spread the love