ಕೋವಿಡ್-19 ಹಿನ್ನೆಲೆ; ದಕ ಜಿಲ್ಲೆಯಲ್ಲಿ ಸಾರ್ವಜನಿಕ ನಾಗರಪಂಚಮಿ ಆಚರಣೆಗೆ ಅವಕಾಶವಿಲ್ಲ

Spread the love

ಕೋವಿಡ್-19 ಹಿನ್ನೆಲೆ; ದಕ ಜಿಲ್ಲೆಯಲ್ಲಿ ಸಾರ್ವಜನಿಕ ನಾಗರಪಂಚಮಿ ಆಚರಣೆಗೆ ಅವಕಾಶವಿಲ್ಲ

ಮಂಗಳೂರು : ಜಿಲ್ಲೆಯಲ್ಲಿ ಜುಲೈ 25ರಂದು ನಡೆಯುವ ನಾಗರಪಂಚಮಿ ಕಾರ್ಯಕ್ರಮಗಳಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶಿಸಲು ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಇನ್ನೂ ಕೂಡ ಸಂಪೂರ್ಣ ಹತೋಟೆಗೆ ಬಾರದೇ ಇರುವುದರಿಂದ ಸಾರ್ವಜನಿಕರ ಪಾಲ್ಗೊಂಡು ಧಾರ್ಮಿಕ ಆಚರಣೆ ಮತ್ತು ಕಾರ್ಯಕ್ರಮಗಳನ್ನು ಆಚರಿಸಲು ಅವಕಾಶ ನೀಡಿದಲ್ಲಿ, ಬಹಳಷ್ಟು ಸಾರ್ವಜನಿಕರು ಒಂದೆಡೆ ಸೇರಿ ಸೋಂಕು ಹರಡುವಿಕೆ ಹೆಚ್ಚುವ ಸಂಭವವಿದೆ.

ಆದ್ಧರಿಂದ ಮುಂಜಾಗ್ರತಾ ಕ್ರಮವಾಗಿ ಮುಂಬರುವ ನಾಗರ ಪಂಚಮಿ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಾಗಾರಾಧನೆ ನಡೆಯುವ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿಗಳು ಮಾತ್ರ ಸಾಂಪ್ರದಾಯಿಕ ಪೂಜೆಗಳನ್ನು ಸಾಂಕೇತಿಕವಾಗಿ ಮಾಡಿ ಅಂದು ಸಾರ್ವಜನಿಕರಿಗೆ ಹಾಗೂ ಭಕ್ತಾಧಿಗಳಿಗೆ ದೇವಳದ ಆವರಣಕ್ಕೆ ನಿಷೇಧವನ್ನು ಹೇರಲು ಹಾಗೂ ನಾಗಬನಗಳಲ್ಲಿಯೂ ಸಹ ಅರ್ಚಕರು ಮಾತ್ರ ಸಾಂಪ್ರದಾಯಿಕ ಪೂಜೆಗಳನ್ನು ಸಾಂಕೇತಿಕವಾಗಿ ಮಾಡಲು ಹಾಗೂ ಸಾರ್ವಜನಿಕರು ಸೇರದಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ವರ ಮಹಾಲಕ್ಷ್ಮೀ ಹಬ್ಬ ಸೇರಿದಂತೆ ಎಲ್ಲಾ ಹಬ್ಬ ಹರಿದಿನಗಳಂದು ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರು ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಮಟ್ಟಿಗೆ ಸೀಮಿತಗೊಳಿಸಿ ಹಬ್ಬಗಳನ್ನು ಆಚರಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಧಾರ್ಮಿಕ ಧತ್ತಿ ಸಹಾಯಕ ಆಯುಕ್ತ ವೆಂಕಟೇಶ್, ಧಾರ್ಮಿಕ ಪರಿಷತ್ ರಾಜ್ಯ ಸದಸ್ಯರಾದ ಸೂರ್ಯ ನಾರಾಯಣ ಭಟ್, ಸೂರ್ಯ ಕಷೆಕೋಡಿ, ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


Spread the love