ಕೋವಿಡ್ – 19 : ಹೋಂ ಕ್ವಾರಂಟೈನ್ ಕಟ್ಟು ನಿಟ್ಟಾಗಿ ಪಾಲಿಸಲು ಆರೋಗ್ಯ ಇಲಾಖೆಗೆ ಪೊಲೀಸರ ಸಾಥ್

Spread the love

ಕೋವಿಡ್ – 19 : ಹೋಂ ಕ್ವಾರಂಟೈನ್ ಕಟ್ಟು ನಿಟ್ಟಾಗಿ ಪಾಲಿಸಲು ಆರೋಗ್ಯ ಇಲಾಖೆಗೆ ಪೊಲೀಸರ ಸಾಥ್

ಉಡುಪಿ: ಒಂದೆಡೆ ಜನರು ರಾಜ್ಯ ಸರಕಾರದ ಲಾಕ್ ಡೌನ್ ಆದೇಶವನ್ನೇ ಧಿಕ್ಕರಿಸಿ ಮನೆಯಲ್ಲಿ ಇರುವುದನ್ನು ಬಿಟ್ಟು ರಸ್ತೆಗೆ ಬರುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೊರೋನಾ ವೈರಸ್ ಸೋಂಕಿತರು ಬಾರದೇ ಇರಲಿ ಎಂದು ಉಡುಪಿ ಜಿಲ್ಲಾಡಳಿತ ಹಗಲು ರಾತ್ರಿ ತನ್ನ ಶ್ರಮ ವಹಿಸುತ್ತಿದೆ. ಜಿಲ್ಲೆಯ ಎಲ್ಲಾ ಇಲಾಖೆಗಳು ಕೂಡ ಆರೋಗ್ಯ ಇಲಾಖೆಯ ಜೊತೆ ಕೈ ಜೋಡಿಸಿದ್ದು ಜಿಲ್ಲೆಯ ಪೊಲೀಸ್ ಇಲಾಖೆ ಕೂಡ ತನ್ನ ಸೇವೆಯನ್ನು ಆರೋಗ್ಯ ಇಲಾಖೆಗೆ ನೀಡುತ್ತಿದೆ.

ಈಗಾಗಲೇ ಕೇಂದ್ರ ಸರಕಾರ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿಷೇಧಿಸಿದ್ದು ಈ ವರೆಗೆ ವಿದೇಶದಿಂದ ವಾಪಾಸಾದ ಜನರನ್ನು ಗುರುತಿಸಿ ಅವರಿಗೆ ಹೋಂ ಕ್ವಾರಂಟೈನ್ ಪಾಲಿಸಲು ಸೂಚಿಸಲಾಗಿದ್ದರೂ ಕೂಡ ಕೆಲವೊಂದು ವ್ಯಕ್ತಿಗಳು ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸದೆ ತಿರುಗಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದ ಈ ನಿಟ್ಟಿನಲ್ಲಿ ಹೋಂ ಕ್ವಾರಂಟೈನ್ ಕಟ್ಟು ನಿಟ್ಟಾಗಿ ಪಾಲಿಸಲು ಪೊಲೀಸ್ ಇಲಾಖೆ ಕೂಡ ತಮ್ಮ ಗಸ್ತು ಪೊಲೀಸರ ಸೇವೆಯನ್ನು ಬಳಸಿಕೊಳ್ಳುತ್ತಿದೆ.

ಈ ವರೆಗೆ ಜಿಲ್ಲೆಗೆ ವಿದೇಶದಿಂದ ಬಂದಿರುವ 900 ಜನರನ್ನು ಗುರುತಿಸಲಾಗಿದ್ದು, ಈ ಎಲ್ಲರ ಮನೆಗಳಿಗೆ ನೋಟೀಸ್ ಅಂಟಿಸಲಾಗಿದ್ದು, ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಪಾಲಿಸಲು ಸೂಚಿಸಲಾಗಿದ್ದು, ಪ್ರತಿದಿನ ದಿನಕ್ಕೆ 2 ಬಾರಿ ಗಸ್ತು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲಿಸಲಿದ್ದಾರೆ. ಅಲ್ಲದೆ ಹೋಮ್ ಕ್ವಾರಂಟೈನ್ ಪಾಲಿಸಲು ಸೂಚಿಸಿರುವ ಮನೆಯವರ ಮಾಹಿತಿ ಅವರ ಪಕ್ಕದ ಮನೆಯವರಿಗೂ ನೀಡಿರುವುದರಿಂದ ಒಂದು ವೇಳೆ ಹೋಂ ಕ್ವಾರಂಟೈನ್ ಅಲ್ಲಿ ಇರುವ ವ್ಯಕ್ತಿ ಮನೆಯಿಂದ ಹೊರಬಂದಲ್ಲಿ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿರುತ್ತದೆ. ಈ ಮೂಲಕ ಕೊರೋನಾ ಸೋಂಕು ಜಿಲ್ಲೆಯಲ್ಲಿ ಹರಡಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಕೂಡ ತನ್ನ ಸೇವೆಯನ್ನು ನೀಡುತ್ತಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಮ್ಯಾಂಗಲೋರಿಯನ್ ಗೆ ಪ್ರತಿಕ್ರಿಯಿಸಿ ವಿದೇಶದಿಂದ ಬಂದಿರುವ ವ್ಯಕ್ತಿಗಳು ಯಾರೇ ಇದ್ದರೂ ಕೂಡ ಇಲಾಖೆಯ ಗಮನಕ್ಕೆ ತರಲು ವಿನಂತಿಸಿದ್ದು, ಅಂತಹವರನ್ನು ವೈದ್ಯಕೀಯ ತಪಾಸಣೆ ಮಾಡಲು ಮತ್ತು ಹೋಮ್ ಕ್ವಾರಂಟೈನ್ ಅಲ್ಲಿ ಇರುವುದು ಕಡ್ಡಾಯವಾಗಿದೆ. ಇದನ್ನು ಸತತ 14ರಿಂದ 28 ದಿನದ ತನಕ ಅವರು ಮನೆಯಿಂದ ಹೊರಗಡೆ ಹೋಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಯ ಬೀಟ್ ಪೊಲೀಸರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು. ಒಂದು ವೇಳೆ ಅಂತಹವರು ಮನೆಯಿಂದ ಹೊರಬಂದಲ್ಲಿ ಕೂಡಲೇ ಪೊಲೀಸ್ ಕಂಟ್ರೋಲ್ ರೂ.100 ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದರು.

ಈ ಕುರಿತು ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಕುಂದಾಪುರ ಠಾಣಾ ಉಪನಿರೀಕ್ಷಕರಾದ ಹರೀಶ್ ನಾಯ್ಕ್ ಅವರು ಮಹಾಮಾರಿ ಕೊರೋನಾ ವೈರಸ್ ಜಿಲ್ಲೆಯ ಯಾರಿಗೂ ಕೂಡ ಬಾರದಂತೆ ಜಿಲ್ಲಾಡಳಿತ ಹಗಲು ರಾತ್ರಿ ಶ್ರಮವಹಿಸುತ್ತಿದೆ. ಆರೋಗ್ಯ ಇಲಾಖೆ ವಿದೇಶದಿಂದ ಬಂದವರನ್ನು ಗುರುತಿಸಿದ್ದು ಅವರಿಗೆ ಹೊಂ ಕ್ವಾರಂಟೈನ್ ಅಲ್ಲಿ ಇರುವಂತೆ ಸೂಚನೆ ನೀಡಿದ್ದರೂ ಕೆಲವು ವ್ಯಕ್ತಿಗಳು ಅದನ್ನು ಪಾಲಿಸದೆ ಇರುವುದು ಗಮನಕ್ಕೆ ಬಂದಿದ್ದು ಈಗ ಪೊಲೀಸ್ ಇಲಾಖೆ ಬೀಟ್ ಪೊಲೀಸರ ಮೂಲಕ ಅಂತಹ ವ್ಯಕ್ತಿಗಳ ಮನೆಗೆ ಹೋಗಿ ನೋಟಿಸ್ ಅಂಟಿಸಿ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಪಾಲಿಸಲು ಸೂಚಿಸಲಾಗಿದ್ದು, ಪ್ರತಿದಿನ ದಿನಕ್ಕೆ 2 ಬಾರಿ ಹೋಗಿ ಅವರ ಮಾಹಿತಿಯನ್ನು ಪಡೆದು ಇಲಾಖೆ ನೀಡುತ್ತಿದ್ದೇವೆ ಎಂದರು.


Spread the love