ಕೋಸ್ಟಲ್‍ ಡೈಜೆಸ್ಟ್‍ ಎಂಪಿಎಲ್‍ ಚಾಂಪಿಯನ್ ವಿಶ್ವಾಸ್ – ಶ್ರೀಷ ಮಾರಕ ಸ್ಪಿನ್ ದಾಳಿ

Spread the love

ಕೋಸ್ಟಲ್‍ ಡೈಜೆಸ್ಟ್‍ ಎಂಪಿಎಲ್‍  ಚಾಂಪಿಯನ್  ವಿಶ್ವಾಸ್ – ಶ್ರೀಷ ಮಾರಕ ಸ್ಪಿನ್ ದಾಳಿ

ನವ ಮಂಗಳೂರು:  ಕೋಸ್ಟಲಿನ ಅಬ್ಬರದ ತೆರೆಗಳು ಟೈಟಾನ್‍ನ ಪಯಣಕ್ಕೆ ಅಡ್ಡಿಯಾಗಿ ಅದನ್ನಲ್ಲೇ ಮುಳುಗಿಸಿಬಿಟ್ಟ ಸನ್ನಿವೇಶವು ಇಲ್ಲಿನ ಬಿ.ಆರ್. ಆಂಬೇಡ್ಕರ್‍ ಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು ಇಪ್ಪತ್ತು ಸಾವಿರ ಮಂದಿ ಕ್ರೀಡಾ ಪ್ರೇಮಿಗಳ ಸಮ್ಮುಖದಲ್ಲಿ ಹೊನಲು ಬೆಳಕಿನಲಲಿ ಜರಗಿದ ಅಲ್ಮುಝೈನ್ ವೈಟ್‍ಸ್ಟೋನ್ ಮಂಗಳೂರು ಪ್ರೀಮಿಯರ್ ಲೀಗಿನ ಅಂತಿಮ ಪಂದ್ಯದಲ್ಲಿ ಒದಗಿ ಬಂದಿತು. ಕೋಸ್ಟಲ್‍ ತಂಡವು ಮ್ಯಾಸ್ಟ್ರೋ ಟೈಟಾನ್‍ ತಂಡವು ನೀಡಿದ 120 ರನ್‍ಗಳ ಗುರಿ ಮುಟ್ಟುವಲ್ಲಿ ಅತ್ತಿತ್ತ ಎಡವುತ್ತಾ ಸಾಗಿ, ಕೋಸ್ಟಲ್‍ ತಂಡದ ರೋಹಿತ್‍ಗೌಡ 19ನೆಯ ಓವರಿನ 3ನೆಯ ಚೆಂಡನ್ನು ಆಕಾಶದೆತ್ತರಕ್ಕೆ ಬೌಂಡರಿಗೆರೆಯ ಹೊರಕ್ಕೆ ಸಿಡಿಸಿದೊಡನೆ, ಆಕಾಶಕ್ಕೆ ನೆಗೆಯಲ್ಪಟ್ಟ ಸಿಡಿಮದ್ದುಗಳು ಇಡಿಯ ಮೈದಾನವನ್ನು ಬಣ್ಣದ ಬೆಳಕಿನಲ್ಲಿ ಮೀಯಿಸಿತು.  ಆಕಾಶಕ್ಕೆ ಕಳುಹಿಸಲ್ಪಟ್ಟ ಬೆಳಕಿನ ಹತ್ತಾರು ಲ್ಯಾಂಟೀನ್‍ಗಳು ಓಲಾಡುತ್ತಾ ಎತ್ತರೆತ್ತರಕ್ಕೆ ಸಾಗುತ್ತಾ, ಊರಿನೆಲ್ಲೆಡೆಗೆ ಕೋಸ್ಟಲ್‍ನ ವಿಜಯವನ್ನು ಬಿತ್ತುತಿರುವಂತೆ ಭಾಸವಾಯಿತು.

ವಿಜೇತ ಕೋಸ್ಟಲ್‍ ತಂಡ ಆಕರ್ಷಕ ಅಲ್ಮುಝೈನ್ ವೈಟ್‍ಸ್ಟೋನ್ ಎಂಪಿಲ್  ಟ್ರೋಫಿ ಮತ್ತು ನಗದು ಬಹುಮಾನ ಆರು ಲಕ್ಷರೂಪಾಯಿಯನ್ನು ಪಡೆದರೆ ಎರಡನೆಯ ಸ್ಥಾನಿ ಮ್ಯಾಸ್ಟ್ರೋ ಟೈಟಾನ್‍ ತಂಡವು ಟ್ರೋಫಿ ಮತ್ತು ನಗದು ಬಹುಮಾನ ಮೂರು ಲಕ್ಷವನ್ನು ಪಡೆಯಿತು.

image001mpl-final-match-mangalorean-com-20161231-001 image002mpl-final-match-mangalorean-com-20161231-002 image003mpl-final-match-mangalorean-com-20161231-003 image004mpl-final-match-mangalorean-com-20161231-004 image005mpl-final-match-mangalorean-com-20161231-005

ನಾಣ್ಯ ಚಿಮ್ಮುಗೆಯನ್ನು ಜಯಿಸಿ ಬ್ಯಾಟಿಂಗಿಗಿಳಿದ  ಮ್ಯಾಸ್ಟ್ರೋತಂಡದ ಪಾಲಿಗೆ ಅಬ್ಬರದ ಅಲೆಗಳ ರೂಪದ ಸ್ಪಿನ್ ಬೌಲಿಂಗ್ ದಾಳಿಯನ್ನು ಸಂಘಟಿಸಿದ ವಿಶ್ವಾಸ್ ಮಣಿಪಾಲ ಮತ್ತು ಶ್ರೀಷರವರು ತಲಾ ಮೂರು ವಿಕೇಟುಗಳನ್ನು ಪಡೆದು ಟೈಟಾನ್‍ ತಂಡದ ಜಂಘಾಬಲವನ್ನೇ ಉಡುಗಿಸಿ ಅದರ ಮುಳುಗಡೆಗೆ ಕಾರಣರಾದರು. ಮ್ಯಾಸ್ಟ್ರೋ ತಂಡದ ಆರಂಭಕಾರರಾದ ರೋಹನ್‍ ಕದಂ ಮತ್ತು ವಿಶ್ವನಾಥನ್‍ರವರು ಮುಕ್ಕ ಎಕ್ಸ್‍ಪ್ರೆಸ್‍ ಅರಿಫ್ ಮುಕ್ಕರವರ ಪ್ರಥಮ ಓವರಿನಲ್ಲಿಯೇ ವಿಕೇಟುಗಳನ್ನು ಒಪ್ಪಿಸಿದಾಗ ತಂಡವು 8 ರನ್‍ಗಳಿಗೆ ಎರಡು ವಿಕೇಟುಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.  ಈ ಹಂತದಲ್ಲಿ ತಂಡದ ನಾಯಕ ಅಕ್ಷಯ್ ಬಲ್ಲಾಳ್ ತನ್ನ ಎಂದಿನ ಬಿರುಸಿನ ಆಟವನ್ನು ಪ್ರದರ್ಶಿಸಿ 20 ಚೆಂಡುಗಳಲ್ಲಿ 3 ಭರ್ಜರಿ ಸಿಕ್ಸರ್ ಮತ್ತು ಮೂರು ಬೌಂಡರಿಗಳುಳ್ಳ 41 ರನ್ ಗಳಿಸಿ ತಂಡಕ್ಕೆಆಧಾರವಾಗಿ ನಿಂತರು. ಈ ಹಂತದಲ್ಲಿ ಕೋಸ್ಟಲ್ ನಾಯಕ ಜಾಣ್ಮೆಯಿಂದ ಎಡಗೈ ಸ್ಪಿನ್ನರ್ ವಿಶ್ವಾಸ್ ಮಣಿಪಾಲರವರನ್ನು ಬೌಲಿಂಗಿಗೆ ತಂದರು. ತನ್ನ ಮೇಲಿನ ವಿಶ್ವಾಸವನ್ನು ಸುಳ್ಳು ಮಾಡದ ವಿಶ್ವಾಸ್‍ರವರು ಮೂರನೆಚೆಂಡಿನಲ್ಲಿ ಮ್ಯಾಸ್ಟ್ರೋತಂಡದ ಬೆನ್ನೆಲುಬು ಅಕ್ಷಯ್ ಬಲ್ಲಾಳ್‍ರವರನ್ನು ಕ್ಲೀನ್ ಬೌಲ್ಡ್ ಮೂಡಿ ಪಂದ್ಯಕ್ಕೆ ಮುಖ್ಯ ತಿರುವನ್ನು ನೀಡಿದರು. ಆ ನಂತರ 11ನೆಯ ಓವರಿನಲ್ಲಿ ರಜತ್ ಹೆಗ್ಡೆ 7 ರನ್‍ಗಳಿಸಿ ರನ್‍ ಔಟ್‍ಗೆ ಬಲಿಯಾದರು. ವಿಶ್ವಾಸ್‍ರವರ ಸ್ಪಿನ್ ಮೋಡಿಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾದ ಕಾರ್ತಿಕ್‍ರವರು ಖಾತೆಯನ್ನುತೆರೆಯುವ ಮೊದಲೇ ಅವರಿಗೆ ಲ್ ಬಿ ಡಬ್ಲ್ಯು ಆಗಿ ಮರಳಿದರು. ವಿಶ್ವಾಸ್‍ರವರು 4 ಓವರುಗಳಲ್ಲಿ 17 ರನ್‍ಗಳ ವೆಚ್ಚಕ್ಕೆ 3 ವಿಕೇಟುಗಳನ್ನು ಪಡೆದರು. ಹನ್ನೆರಡನೆಯ ಓವರಿನಲ್ಲಿ ವಿಶ್ವಾಸ್‍ತನ್ನ ಮಾರಕ ಬೌಲಿಂಗನ್ನು ಮುಂದುವರಿಸಿ ಅಶ್ವಿನ್‍ರವರನ್ನು ಕ್ಲೀನ್ ಬೌಲ್ಡ್‍ ಮಾಡಿದಾಗ ತಂಡ ಗಳಿಸಿದ ಮೊತ್ತ 82 ಮಾತ್ರ. ತಂಡ 14ನೆಯ ಓವರಿನಲ್ಲಿ 100ರ ಗಡಿ ಮುಟ್ಟಿದಾಗ 8 ವಿಕೇಟುಗಳು ಪತನ ಹೊಂದಿದ್ದವು.ಇನ್ನೊಂದೆಡೆಯಲ್ಲಿ ತನ್ನ ಬೌಲಿಂಗ್ ಧಾಳಿಯನ್ನು ನಡೆಸಿದ ಶ್ರೀಷರವರು ಮ್ಯಾಸ್ಟ್ರೋ ತಂಡದಮೂರು ವಿಕೇಟುಗಳನ್ನು ಕಿತ್ತು ಹೊಡೆತ ನೀಡಿದರು. ಮ್ಯಾಸ್ಟ್ರೋತಂಡವು 17.5 ಓವರುಗಳಲ್ಲಿ 119 ರನ್‍ಗಳಿಗೆ ಸರ್ವ ಪತನವನ್ನುಕಂಡಿತು.

ಬಲಿಷ್ಟ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕೋಸ್ಟಲ್‍ ತಂಡವು ಪಡೆದ ವಿಜಯದಗುರಿ ಸುಲಭ ಸಾಧ್ಯವೆಂದು ಕಂಡಿತಾದರೂ, ಮಹಮ್ಮದ್‍ತಾಹ, ಸತ್ಯ ಸ್ವರೂಪ್ ಮತ್ತು ಆದಿತ್ಯ ಸೋಮಣ್ಣರವರ ಮೂರು ವಿಕೇಟುಗಳು ತಂಡದ ಮೊತ್ತ 25 ರನ್‍ಗಳಾಗುವಷ್ಷರಲ್ಲಿ ಧರೆಗುಳಿದಾಗ ಕೋಸ್ಟಲ್‍ ತಂಡದ ಪಾಳಯದಲ್ಲಿ ತಳಮಳ ಉಂಟಾಯಿತು. ಆಪಾಯವನ್ನರಿತ ರಿಷಬ್‍ ರಕ್ಷಣಾತ್ಮಕ ಆಟಕ್ಕೆ ತೊಡಗಿ ವಿಕೇಟ್ ಪತನಕ್ಕೆ ತಡೆ ಒಡ್ಡಿದಾಗ ತಂಡ 8 ಓವರುಗಳಲ್ಲಿ 42 ಓಟಗಳನ್ನು ಗಳಿಸಿತ್ತು.  ರನ್ನಿನ ಓಘಕ್ಕೆ ವೇಗವನ್ನು ನೀಡಬೇಕಾದ ಅಗತ್ಯವನ್ನು ಮನಗಂಡ ರಿಷಬ್ ಮತ್ತು ರಿತೇಶ್ ಭಟ್ಕಳ ಜೋಡಿಯು ಪ್ರತಿಯೊಂದು ಎಸೆತವನ್ನು ತೂಗಿ ನೋಡಿ ಜವಾಬ್ದಾರಿಯುತವಾಗಿ ಆಡುತ್ತಾ ಮೊತ್ತವನ್ನು 83ಕ್ಕೆ ತಂದಾಗ ರನ್‍ ಔಟ್‍ಗಾಗಿನ ಮನವಿಯೊಂದು ತೃತೀಯ ತೀರ್ಪುಗಾರರ ಬಳಿಗೆ ಹೋಗಿ ನಾಟೌಟ್‍ ಎಂದು ಘೋಷಣೆಯಾಗಿ ಕೋಸ್ಟಲ್ ಪಾಳಯ ನಿರಾಳತೆಯನ್ನು ಹೊಂದಿತು. ಕೋಸ್ಟಲ್‍ ತಂಡಕ್ಕೆ ಕೊನೆಯ 30 ಚೆಂಡುಗಳಲ್ಲಿ 25 ಓಟಗಳನ್ನು ಗಳಿಸಬೇಕಾದ ಅವಶ್ಯಕತೆ ಎದುರಾಗಿತ್ತು. ತಂಡದ ಮೊತ್ತ 100ರಲ್ಲಿ 37 ರನ್‍ಗಳಿಸಿದ ರಿತೇಶ್ ಭಟ್ಕಳ್‍ರವರು ವಿಕೇಟ್‍ ಕೀಪರ್‍ಗೆ ಕ್ಯಾಚ್ ನೀಡಿ ಅಭಿಲಾಷ್‍ರವರಿಗೆ ವಿಕೇಟ್ ಒಪ್ಪಿಸಿದರು. ರಿಷಬ್‍ರವರ ದಾಂಡಿನಿಂದ ಅರ್ಧ ಶತಕ ಮೂಡಿಬಂದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು 20000 ಮಂದಿ ಪ್ರೇಕ್ಷಕರಿಂದ ಹರ್ಷೋದ್ಗಾರ ಕೇಳಿ ಬಂತು. ತಂಡವು 9 ಚೆಂಡುಗಳು ಬಾಕಿ ಇರುವಂತೆ ರೋಹಿತ್‍ ಗೌಡರವರ ವರದಾಂಡಿನಿಂದ ಮೂಡಿಬಂದ ಭರ್ಜರಿ ಸಿಕ್ಸರ್ ತಂಡಕ್ಕೆ6 ವಿಕೇಟುಗಳ ಅಂತರದ ಜಯವನ್ನುತಂದಿತ್ತಿತು.

ಪಂದ್ಯಾಟದ ಉದ್ದಕ್ಕೂ ಸರ್ವಾಂಗೀಣ ಆಟದ ಅದ್ಭುತ ಪ್ರದರ್ಶನ ನೀಡಿದ ಮ್ಯಾಸ್ಟ್ರೋ ತಂಡದ ಅಕ್ಷಯ ಬಲ್ಲಾಳ್ ರವರು 455 ರನ್‍ಗಳಿಸಿದ್ದಕ್ಕಾಗಿ ಕಿತ್ತಳೆ ವರ್ಣದ ಟೋಪಿ ಮತ್ತು ಒಂದು ಲಕ್ಷರೂಪಾಯಿಯ ಗಿಫ್ಟ್ ವೋಚರ್,  16 ವಿಕೇಟುಗಳನ್ನು ಪಡೆದದ್ದಕ್ಕಾಗಿ ನೇರಳೆ ಟೋಪಿ ಮತ್ತುಒಂದು ಲಕ್ಷ ರೂಪಾಯಿಯ ಗಿಫ್ಟ್ ವೋಚರ್,  ಸರಣಿ ಶ್ರೇಷ್ಠನಾಗಿ ಮೂರು ಲಕ್ಷ ರೂಪಾಯಿ ಗಿಫ್ಟ್ ವೋಚರ್ ಮತ್ತು ಹೊಚ್ಚ ಹೊಸ್‍ಚೆರ್‍ ವಲೇಟ್‍ಕಾರನ್ನು ಬಹುಮಾನವಾಗಿ ಪಡೆದರು. ಬಹುತೇಕ ಎಲ್ಲ ಬಹುಮಾನಗಳನ್ನು ಬಾಚಿಕೊಂಡರೂ ಬಲ್ಲಾಳ್‍ರವರಿಗೆ ಎಂಪಿಎಲ್‍ಟ್ರೋಫಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಲಿಲ್ಲ.

ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠನಾಗಿ ರಿತೇಶ್ ಭಟ್ಕಳ್,  ಉತ್ತಮ ಕ್ಯಾಚ್‍ಗಾಗಿ ಅಧೋಕ್ಷ್ ಹೆಗ್ಡೆ ಸ್ಯಾಕೋಕಮಾಲ್‍ ಕ್ಯಾಚ್ ಪ್ರಶಸ್ತಿ, ಉತ್ತಮ ಶಿಸ್ತು ಬದ್ಧ ಆಟಕ್ಕಾಗಿ ಕರಾವಳಿ ವಾರಿಯರ್ಸ್‍ ತಂಡವು ಬಹುಮಾನವನ್ನು ಪಡೆದವು.  ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ತಂಡವಾಗಿ ಪ್ರೆಸಿಡೆಂಟ್ ಸಿಕ್ಸರ್ಸ್ ಕುಂದಾಪುರ ಗೌರವವನ್ನು ಪಡೆಯಿತು.

ಎಲ್ಲ ತಂಡಗಳ ಮಾಲಕರು ಮತ್ತು ಕ್ರೀಡಾ ಪ್ರೇಮಿಗಳ ಸಮಕ್ಷಮದಲ್ಲಿ ಅದ್ಧೂರಿಯಾಗಿ ಜರಗಿದ ಬಹುಮಾನ ವಿತರಣಾ ಸಮಾರಂಭದಲ್ಲ್ಷಿ ಪ್ರಯೋಜಕ ಸಂಸ್ಥೆಗಳಾದ ಅಲ್ಮುಝರೈನ್ ಸಂಸ್ಥೆಯ ಝಖಾರಿಯ ಜೋಕಟ್ಟೆ, ರಿಯಲ್‍ಟೆಕ್ ಸಂಸ್ಥೆಯ ಇಮ್ರಾನ್, ಶುಕೂರು ಸಾಹೇಬ್ ಶಂಕರಪುರ,  ಯಶಪಾಲ್ ಸುವರ್ಣ, ಶಾಸಕ ಮೋಯಿದಿನ್ ಭಾವ, ಇಫ್ತಿಕಾರ್, ಮನೋಹರಅಮೀನ್,  ಚಯರ್ ಮ್ಯಾನ್ ಸಿರಾಜುದ್ದೀನ್, ಕನ್ವೀನರ್‍ಇಮ್ತಿಯಾಝ್ ಮೊದಲಾದವರು ಹಾಜರಿದ್ದರು.

ಪಂದ್ಯದ ಆರಂಭದಲ್ಲಿ ಪಂದ್ಯ ಕೂಟದ ಪ್ರಾಯೋಜಕರುಗಳಾದ ಅಲ್ಮುಝೈನ್‍ ಕಂಪನಿಯ ಝಾಖಾರಿಯಾ ಜೋಕಟ್ಟೆ, ರಿಯಲ್‍ ಟೆಕ್‍ ಕಂಪನಿಯ ಇಸ್ಮಾಯಿಲ್, ಶುಕೂರು ಸಾಹೇಬ್ ಶಂಕರಪುರ,  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮನೋಹರ್‍ ಅಮೀನ್, ಚೆಯರ್‍ಮ್ಯಾನ್ ಸಿರಾಜುದ್ಧೀನ್, ಕನ್ವೀನರ್‍ ಇಮ್ತಿಯಾಝ್ ಮೊದಲಾದವರು ಎರಡು ತಂಡಗಳ ಆಟಗಾರರನ್ನು ಪರಿಚಯಿಸಿಕೊಂಡರು.

ಸ್ಕೋರ್ ವಿವರ: ಮ್ಯಾಸ್ಟ್ರೋಟೈಟಾನ್ 119 ಆಲೌಟ್ (17.5 ಓವರುಗಳು) ಅಕ್ಷಯ್ ಬಲ್ಲಾಳ್ 41, ಲೋಕೇಶ್ 20, ಸಿನಾನ್ 10, ಅರಿಫ್ ಮುಕ್ಕ 2-0-30-2, ವಿಶ್ವಾಸ್ 4-0-17-3, ಶ್ರೀಷ 2-0-14-1, ರಿತೇಶ್ ಭಟ್ಕಳ್ 4-0-25-1

ಕೋಸ್ಟಲ್‍ಡೈಜೆಸ್ಟ್: 125ಕ್ಕೆ 4,ರಿಷಬ್‍ಅಜೇಯ 52ರಿತೇಶ್ ಭಟ್ಕಳ್ 37,ರೋಹಿತ್‍ಗೌಡಅಜೇಯ 15, ತಾಹ್ 13,

ಅಕ್ಷಯ್ ಬಲ್ಲಾಳ 4-0-18-2, ರಜತ್ ಹೆಗ್ಡೆ 3.3-0-30-1, ಅಭಿಲಾಷ್ 3-0-19-1


Spread the love