ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾ. ಪಂ.ಗೆ ಮನವಿ ಸಲ್ಲಿಕೆ

Spread the love

ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾ. ಪಂ.ಗೆ ಮನವಿ ಸಲ್ಲಿಕೆ

ಕುಂದಾಪುರ: ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ಹೋರಾಟ ಸಮಿತಿ ವತಿಯಿಂದ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗಂಗೊಳ್ಳಿ ಗ್ರಾಮ ಪಂಚಾಯತ್‍ಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಕಳೆದ 30 ವರ್ಷಗಳಿಂದ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಲೇ ಬಂದಿದ್ದಾರೆ. ಗಂಗೊಳ್ಳಿ ಗ್ರಾಪಂ ಮತ್ತು ಕುಂದಾಪುರ ಪುರಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಲಾಗಿದೆ. ಸೇತುವೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ವ್ಯಾಪಾರ, ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಹೀಗಾಗಿ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಿಸುವ ಸಂಬಂಧ ಗ್ರಾಮ ಪಂಚಾಯತ್‍ನಲ್ಲಿ ನಿರ್ಣಯ ಕೈಗೊಂಡು ಸರಕಾರ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿ ಒತ್ತಡ ಹೇರಬೇಕು. ಶಾಸಕರು, ಸಂಸದರು ಗ್ರಾಮಸ್ಥರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಸಂಪರ್ಕ ಸೇತುವೆ ನಿರ್ಮಾಣವಾಗುವ ಭರವಸೆ ಇದೆ ಎಂದು ಸಮಿತಿ ಅಧ್ಯಕ್ಷ ಬಿ.ಸದಾನಂದ ಶೆಣೈ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಸೇತುವೆ ನಿರ್ಮಾಣದ ವಿಚಾರದಲ್ಲಿ ಗ್ರಾಪಂ ಸಭೆಯಲ್ಲಿ ಸೂಕ್ತ ನಿರ್ಣಯಕೈಗೊಂಡು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಪಂ ಕಾರ್ಯದರ್ಶಿ ದಿನೇಶ ಶೇರುಗಾರ್, ಸಮಿತಿ ಕಾರ್ಯದರ್ಶಿ ನವೀನ್ ಗಂಗೊಳ್ಳಿ, ಉಪಾದ್ಯಕ್ಷರಾದ ಹರೀಶ ಮೇಸ್ತ, ಶಿವಾನಂದ ಪೂಜಾರಿ, ಸದಾಶಿವ ಖಾರ್ವಿ, ಖಜಾಂಚಿ ಬಿ.ಲಕ್ಷ್ಮೀಕಾಂತ ಮಡಿವಾಳ ಹಾಗೂ ಸಮಿತಿ ಪದಾದಿಕಾರಿಗಳು, ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love