ಗಂಗೊಳ್ಳಿ ಬಂದರು ಜೆಟ್ಟಿ ಪುನರ್ ನಿರ್ಮಾಣಕ್ಕೆ 6.5 ಕೋಟಿ ರೂ. ಮೀಸಲು – ಸಚಿವ ಮಂಕಾಳ ವೈದ್ಯ
ಕುಂದಾಪುರ: ಗಂಗೊಳ್ಳಿ ಬಂದರು ಜೆಟ್ಟಿ ಕುಸಿತ ಪ್ರಕರಣ ಲೋಕಾಯುಕ್ತದಲ್ಲಿರುವುದರಿಂದ ಅಲ್ಲಿನ ವರದಿ ಬರುವ ತನಕ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ. ಸಾಕಷ್ಟು ಇತಿಹಾಸವಿರುವ ಗಂಗೊಳ್ಳಿ ಬಂದರಿನಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಯಿಂದಾಗಿ ಮತ್ತು ಕಾಮಗಾರಿಯಲ್ಲಿ ವ್ಯತ್ಯಾಸವಾಗಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಬಂದರಿನ ಜೆಟ್ಟಿ ಪುನರ್ ನಿರ್ಮಾಣಕ್ಕಾಗಿ ಈಗಾಗಲೇ 6.5 ಕೋಟಿ ರೂ. ಮೀಸಲಿಡಲಾಗಿದೆ ಎಚಿದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಪಿ.ಎಂ.ಎಂ.ಎಸ್.ವೈ ಯೋಜನೆಯಡಿ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯ ಬಹುತೇಕ ಬಂದರುಗಳು ದುಸ್ಥಿತಿಗೆ ತಲುಪಿವೆ. 5 ಸಾವಿರ ಕೋಟಿ ಕೊಟ್ಟರೆ ಎಲ್ಲಾ ಬಂದರುಗಳ ಅಭಿವೃದ್ಧಿ ಮಾಡಬಹುದು. ಬಂದರುಗಳ ಅಭಿವೃದ್ಧಿಗೆ ತೊಡಕಾಗಿದ್ದ ಸಿಆರ್ಝಡ್ ಸಮಸ್ಯೆ ಬಗೆಹರಿಸಲು ಒಂದುವರೆ ವರ್ಷ ತಗುಲಿದ್ದು, ಇದೇ ಸಮಸ್ಯೆಯಿಂದಾಗಿ ಮರವಂತೆ ಹೊರಬಂದರು ಕಾಮಗಾರಿಯ ಸುಮಾರು 68 ಕೋಟಿ ರೂ. ಹಾಗೆ ಬಾಕಿ ಉಳಿದಿತ್ತು. 340 ಕಿ.ಮೀ ಉದ್ದದ ಕರಾವಳಿ ಪ್ರದೇಶದಲ್ಲಿ 13 ಬಂದರುಗಳಿವೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ಮೂರು ಬಂದರುಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಗಂಗೊಳ್ಳಿ ಮೀನುಗಾರಿಕೆ ಬಂದರಿನ ಆಧುನೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಸುಮಾರು 22.18 ಕೋಟಿ ರೂ. ಮೀಸಲಿಟ್ಟಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಗಂಗೊಳ್ಳಿ ಬಂದರು ಬಹಳ ಹಿಂದುಳಿದಿದೆ. ಜೆಟ್ಟಿ ಸಮಸ್ಯೆ, ಡ್ರೆಜ್ಜಿಂಗ್ ಸಮಸ್ಯೆಗಳೇ ಕೊಳೆಯುತ್ತಿದೆ. ಸಾಗರಾ ಮಾಲಾ ಮತ್ತು ಮತ್ಸö್ಯಸಂಪದ ಯೋಜನೆಯಡಿ ಬಂದರುಗಳನ್ನು ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿವೆ. ಈ ಭಾಗದಲ್ಲಿ ದೂರದೃಷ್ಟಿಯ ಯೋಜನೆಗಳಿಗೆ ತುಂಬಾ ಅವಕಾಶಗಳಿವೆ. ಕೇಂದ್ರದ ಯೋಜನೆಗಳನ್ನು ತರಲು ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದು. ಇರುವ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸುವ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕುಮಾರ್ ಕಳ್ಳೇರ್, ಮೀನುಗಾರಿಕೆ ಅಪರ ನಿರ್ದೇಶಕ ಸಿದ್ಧಯ್ಯ ಡಿ., ಜಂಟಿ ನಿರ್ದೇಶಕ ವಿವೇಕ ಆರ್., ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ಶೇಟ್, ಉಪನಿರ್ದೇಶಕ ಸಂಜೀವ ಅರಕೇರಿ, ಸಹಾಯಕ ನಿರ್ದೇಶಕ ಆಶಾಲತಾ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಶೋಭಾ, ಸಹಾಯಕ ನಿದೇಶಕಿ ಸುಮಲತಾ ಮೊದಲಾದವರು ಉಪಸ್ಥಿತರಿದ್ದರು.
ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮೀನುಗಾರಿಕೆ ಇಲಾಖೆಯ ಗೋಪಾಲಕೃಷ್ಣ ವಂದಿಸಿದರು.