ಗುರುಪರ ಕೈಕಂಬ ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ಸಾಮೂಹಿಕ ಧರಣಿ

Spread the love

ಗುರುಪರ ಕೈಕಂಬ ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ಸಾಮೂಹಿಕ ಧರಣಿ

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಅವರ ಬೇಜವಾಬ್ದಾರಿತನ, ಅಸಮರ್ಥ ಆಡಳಿತಕ್ಕೆ ಜಿಲ್ಲೆಯನ್ನು ಹಾದು ಹೋಗುವ ಹೆದ್ದಾರಿಗಳು ಬಲಿಯಾಗಿವೆ. ದಶಕ ಸಂದರೂ ಪೂರ್ತಿಯಾಗದ ಪಂಪ್ ವೆಲ್, ತೊಕ್ಕೊಟ್ಟು ಮೇಲ್ಸೇತುವೆ, ಸುರತ್ಕಲ್ ಅಕ್ರಮ ಟೋಲ್ ಗೇಟ್, ಗುತ್ತಿಗೆದಾರರು ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿರುವ ಬಿ ಸಿ ರೋಡ್, ಗುಂಡ್ಯ ಚತುಷ್ಪತ ರಸ್ತೆ ಕಾಮಗಾರಿ ಸಂಸದರ ಕಾರ್ಯವೈಖರಿಗೆ ಕನ್ನಡಿಯಾಗಿವೆ. ಇವರ ತೂಕವಿಲ್ಲದ ಬಣ್ಣದ ಮಾತುಗಳ ಭರವಸೆಯನ್ನೇ ನಂಬಿ ಕೂತರೆ ನಂತೂರು, ಮೂಡಬಿದ್ರೆ, ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳಲು ಶತಮಾನವೇ ಬೇಕಾದೀತು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಂಸದ ನಳಿನ್ ಕುಮಾರ್ ಕಟೀಲರ ವಿರುದ್ದ ವಾಗ್ದಾಳಿ ನಡೆಸಿದರು.

ಅವರು “ಕಾರ್ಕಳ, ಮೂಡಬಿದ್ರೆ, ಮಂಗಳೂರು ಹೆದ್ದಾರಿ ಅಗಲೀಕರಣ ಹೋರಾಟ ಸಮಿತಿ” ಗುರುಪರ ಕೈಕಂಬ ಜಂಕ್ಷನ್ ನಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿದ್ದ ಸಾಮೂಹಿಕ ಧರಣಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. “ನಂಬರ್ ವನ್ ಸಂಸದ” ಎಂದು ತನ್ನ ಬೆಂಬಲಿಗರಿಂದ ಜೈಕಾರ ಹಾಕಿಸಿಕೊಳ್ಳುವ ಸಂಸದರು ಜಿಲ್ಲೆಯ ಹಿತಾಸಕ್ತಿಗಳನ್ನು ದೆಹಲಿಯಲ್ಲಿ ಪ್ರತಿನಿಧಿಸುವಲ್ಲಿ ದಯನೀಯ ವೈಫಲ್ಯ ಕಂಡಿದ್ದಾರೆ. ವಿಜಯಾ ಬ್ಯಾಂಕ್ ವಿಲೀನ, ಮಂಗಳೂರು ಬಂದರು, ವಿಮಾನ ನಿಲ್ದಾಣ ಖಾಸಾಗೀಕರಣ ಮುಂತಾದ ಜಿಲ್ಲೆಯ ಗಂಭೀರ ವಿಷಯಗಳಲ್ಲೂ ನಳಿನ್ ಕುಮಾರ್ ಕಟೀಲು ಜನತೆಯ ಪರವಾಗಿ ನಿಲ್ಲಲಿಲ್ಲ ಎಂದು ಅವರು ಆರೋಪಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯ ಪೃಥ್ವಿರಾಜ್ ಮಾತನಾಡುತ್ತಾ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಈ ಭಾಗದ ಊರುಗಳಿಗೆ ಸರಿಯಾದ ಹೆದ್ದಾರಿ ಇಲ್ಲದಿರುವುದು ಅಭಿವೃದ್ದಿಗೆ ದೊಡ್ಡ ತೊಡಕಾಗಿದೆ. ಮಂಗಳೂರು, ಮೂಡಬಿದ್ರೆ ಮದ್ಯೆ ವಾಹನಗಳು ತೆವಳಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಸತತ ಮೂವತ್ತು ವರ್ಷ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಿರುವ ಬಿಜೆಪಿ ಹಾಗೂ ಈಗಿನ ಸಂಸದ ನಳಿನ್ ಕುಮಾರ್ ಕಟೀಲು ಹೆದ್ದಾರಿಯ ಇಂದಿನ ದುಸ್ಥಿತಿಗೆ ನೇರಕಾರಣ‌. ಹೆದ್ದಾರಿ ಅಗಲೀಕರಣದ ಕುರಿತು ತಿಂಗಳಿಗೊಂದು ಸಲ ದಿನಾಂಕ ಘೋಷಣೆ ಮಾಡಿದ್ದೇ ಸಂಸದರ ಸಾಧನೆ ಎಂದು ವ್ಯಂಗ್ಯವಾಡಿದರು.

ಸ್ಥಳೀಯ ಮುಂದಾಳು ಕಿಟ್ಟಣ್ಣ ರೈ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ರಾಜ್ಯ ರೈತ ಸಂಘದ ಮುಖಂಡರಾದ ರೋನಿ ಮೆಂಡೋನ್ಸಾ, ಆಲ್ವಿನ್ ಮೆನೇಜಸ್ ಧರಣಿಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಮಿಕ ನಾಯಕರಾದ ಯು ಬಿ ಲೋಕಯ್ಯ, ಗಂಗಯ್ಯ ಅಮೀನ್, ಸಾಮಾಜಿಕ ಕಾರ್ಯಕರ್ತರಾದ ಬಾವಾ ಪದರಂಗಿ, ಜಬ್ಬಾರ್ ಮಲ್ಲೂರು, ಡಿವೈಎಫ್ಐ ಮುಖಂಡರಾದ ಮನೋಜ್ ವಾಮಂಜೂರು, ರಿಯಾಜ್ ಮಾಂತೂರು,ತಸ್ರೀಫ್ ಮೂಡಬಿದ್ರೆ, ದಿನೇಶ್ ವಾಮಂಜೂರು, ಸಿಐಟಿಯು ಮುಖಂಡರಾದ ರಾಧ, ಗಿರಿಜಾ, ವಸಂತಿ ಕುಪ್ಪೆಪದವು, ಲಕ್ಷ್ಮಿ, ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಾಸುದೇವ ಉಚ್ಚಿಲ, ನೋಣಯ್ಯ ಗೌಡ ಮತ್ತಿತರರು ಉಪಸ್ಥಿತರಿದ್ದರು‌ ಹೋರಾಟ ಸಮಿತಿಯ ಸಂಚಾಲಕ ಯಾದವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ‌ ಸದಾಶಿವ ದಾಸ್ ವಂದಿಸಿದರು.


Spread the love