ಗುರುಪುರದಲ್ಲಿ ಬಂಟ ಕಲಾವೀಳ್ಯ-2019 – ರಾಷ್ಟ್ರೀಯ ಬಂಟ ಕಲಾವಿದರ ಸ್ಪರ್ಧಾ ಸಮ್ಮಿಲನ

Spread the love

ಗುರುಪುರದಲ್ಲಿ ಬಂಟ ಕಲಾವೀಳ್ಯ-2019 – ರಾಷ್ಟ್ರೀಯ ಬಂಟ ಕಲಾವಿದರ ಸ್ಪರ್ಧಾ ಸಮ್ಮಿಲನ

ಗುರುಪುರ : ಸಮಾಜದ ಬೆಳವಣಿಗೆಗೆ ಚಿಂತನೆ ಅಗತ್ಯ. ಒಂದು ಕಾಲದಲ್ಲಿ ಬಂಟರು ನ್ಯಾಯ ತೀರ್ಮಾನ ಮಾಡುತ್ತಿದ್ದರು. ಭೂಮಸೂದೆಯಿಂದ ಭೂಮಿ ಕಳೆದುಕೊಂಡ ಬಂಟರು ಎದೆ ಗುಂದಲಿಲ್ಲ. ದೈವಾರಾಧನೆ, ನಾಗಾರಾಧನೆಯ ಮೂಲಕ ಭಕ್ತಿಯನ್ನು ಮೈಗೂಡಿಸಿಕೊಂಡು ಸಮಾಜದ ಏಳೆಗೆಗೆ ಪ್ರಯತ್ನಿಸಿದರು ಎಂದು ಸಮಾಜ ಸೇವಕ, ಪ್ರಕಾಶಾಭಿನಂದನೆ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.

ವಾಮಂಜೂರಿನ ಅಮೃತ ಸದನ ಸಭಾಭವನದಲ್ಲಿ ಜರಗಿದ ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಡಿಸೆಂಬರ್ 29 ರಂದು ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ಇರುವ ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 11ರ ತನಕ ನಡೆಯುವ ಬಂಟ ಕಲಾವೀಳ್ಯ -2019 ಇದರ ಕಲಾ ತಂಡಗಳಿಗೆ ನೀಡುವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಗುರುಪುರ ಬಂಟರ ಮಾತೃ ಸಂಘದಿಂದ ರಾಷ್ಟ್ರೀಯ ಬಂಟರ ಭಾವೈಕ್ಯ ಸಂಗಮದ ಅಂಗವಾಗಿ ನಡೆಯುವ ರಾಷ್ಟ್ರೀಯ ಬಂಟ ಕಲಾವಿದರ ಸ್ಪರ್ಧಾ ಸಮ್ಮಿಲನ ಬಂಟ ಕಲಾವೀಳ್ಯ-2019 ಯಶಸ್ಸು ಕಾಣಲಿ. ಆ ಮೂಲಕ ಸಮಾಜವು ಒಗ್ಗಟ್ಟಿನಿಂದ ಕಾರ್ಯೋನ್ಮುಖವಾಗಲಿ ಎಂದು ಆಸರೆ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲ್‍ಗುತ್ತು ಮಾತನಾಡಿ ಬಂಟ ಕಲಾವೀಳ್ಯ ಸ್ಪರ್ಧೆಯಲ್ಲಿ ಸುಮಾರು 10ರಿಂದ 15 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಮುಂಬಯಿ ಬಂಟರ ಸಂಘ, ಥಾಣೆ ಬಂಟರ ಸಂಘ, ಮುಲುಂಡು ಬಂಟರ ಸಂಘ, ಬೆಂಗಳೂರು, ಪೂನಾ, ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಕರಾವಳಿ ಜಿಲ್ಲೆಯಲ್ಲಿರುವ ಬಂಟರ ಸಂಘಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ದೂರದ ಊರಿನಿಂದ ಬರುವ ಎಲ್ಲಾ ತಂಡಗಳಿಗೆ ವಸತಿ, ಉಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಬಂಟ್ಸ್ ಇಂಟರ್ ನ್ಯಾಷನಲ್ ವೆಲ್‍ಫೇರ್ ಟ್ರಸ್ಟ್‍ನ ಯುವ ಘಟಕದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಶೆಟಿ,್ಟ ಯುವ ಘಟಕದ ಅಧ್ಯಕ್ಷ ಉದಯ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಮಾಜೀ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು `ಭಾರತ’ ಸಾಧಕರು ಕಂಡಂತೆ ವಿಚಾರದಲ್ಲಿ ಸುಮಾರು 24 ವಿಚಾರಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ನೀಡಲಾಗುವುದು. ಸ್ಪರ್ಧೆಯಲ್ಲಿ ಪ್ರಥಮ ಒಂದು ಲಕ್ಷ ರೂ ನಗದು ಮತ್ತು ಟ್ರೋಫಿ, ದ್ವಿತೀಯ ಅರವತ್ತು ಸಾವಿರ ನಗದು, ತೃತೀಯ ನಲ್ವತ್ತು ಸಾವಿರ ನಗದು ಹಾಗೂ ಸ್ಪರ್ಧಿಸುವ ಎಲ್ಲಾ ತಂಡಗಳಿಗೆ ಹತ್ತು ಸಾವಿರ ರೂ. ನೀಡಲಾಗುವುದು. ಶ್ರೇಷ್ಠ ನಟ. ಶ್ರೇಷ್ಠನಟಿ ಹಾಗೂ ಉತ್ತಮ ನಿರೂಪಣೆ ಬಹುಮಾನವಿದೆ. ನೃತ್ಯ, ಹಾಡುಗಾರಿಕೆ, ಪ್ರಹಸನ ಮತ್ತು ವೇಷಭೂಷಣಕ್ಕೆ ಸಮೂಹ ಬಹುಮಾನವಿದೆ. 25 ನಿಮಿಷಗಳ ಕಾಲಾವಧಿಯ ಸ್ಪರ್ಧೆಯಲ್ಲಿ 10 ವಿಭಾಗಗಳಲ್ಲಿ ಅಂಕಗಳನ್ನು ನೀಡಲಾಗುವುದು. ಈ ಸ್ಪರ್ಧೆಯಲ್ಲಿ ನಾಲ್ಕು ಮಂದಿ ತೀರ್ಪುಗಾರರು ಹಾಗೂ ಓರ್ವ ಸಮನ್ವಯಕಾರರು ಅಂಕಗಳನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು. ಸಂಘದ ಕಾರ್ಯದರ್ಶಿ ಜಯರಾಮ ರೈ ಸ್ವಾಗತಿಸಿದರು. ಅಶ್ವಿನಿ ಶೆಟ್ಟಿ ಬೊಂಡಂತಿಲಗುತ್ತು ಕಾರ್ಯಕ್ರಮ ನಿರ್ವಹಿಸಿದರು.


Spread the love