ಗೋವಿನ ವಿಚಾರದಲ್ಲಿ ಬಿಜೆಪಿಗರ ದ್ವಂದ್ವ ನೀತಿ ಜನರಿಗೆ ಅರ್ಥವಾಗಿದೆ-ಪ್ರಮೋದ್ ಮಧ್ವರಾಜ್

Spread the love

ಗೋವಿನ ವಿಚಾರದಲ್ಲಿ ಬಿಜೆಪಿಗರ ದ್ವಂದ್ವ ನೀತಿ ಜನರಿಗೆ ಅರ್ಥವಾಗಿದೆ-ಪ್ರಮೋದ್ ಮಧ್ವರಾಜ್

ಶೃಂಗೇರಿ: ‘ಈ ಚುನಾವಣೆಯಲ್ಲಿ ನಾನು ಹಾಗೂ ಶಾಸಕ ರಾಜೇಗೌಡ ಅವರು ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ನನಗೆ ಅರಿವು ಇದೆ’ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಶೃಂಗೇರಿಯಲ್ಲಿ ಸೋಮವಾರ ಆದಿಚುಂಚನಗಿರಿ ಸಮುದಾಯಭವನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಪರಿವರ್ತನಾ ಸಮಾ ವೇಶದಲ್ಲಿ ಅವರು ಮಾತನಾಡಿದರು. ‘ಬಿಜೆಪಿಯವರು ಗೋಮಾತೆಯನ್ನು ಪೂಜಿಸುವರು ಎಂದು ವೇದಿಕೆಯಲ್ಲಿ ಹೇಳುತ್ತಾರೆ. ಹೇಳಿದವರ ಮನೆಯಲ್ಲಿ ಗೋವುಗಳು ಇಲ್ಲ. ನಮ್ಮ ಮನೆಯಲ್ಲಿ 25 ಗೋವುಗಳನ್ನು ಸಾಕಿದ್ದೇವೆ. ಬಿಜೆಪಿಯು ಗೋವಿನ ಮೇಲೆ ಕಮಲದ ಚಿತ್ರ ಬಿಡಿಸಿ ಪ್ರಚಾರ ಮಾಡುತ್ತಿದ್ದಾರೆ. ಇವರ ದ್ವಂದ್ವನೀತಿ ಜನರಿಗೆ ಅರ್ಥವಾಗಿದೆ’ ಎಂದರು.

ಎಂಟು ವಿಧಾನಸಭಾ ಕ್ಷೇತ್ರಕ್ಕೆ ಕೆಲಸ ಮಾಡುವ ಅವಕಾಶ ದೊರಕಿದೆ. ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದಿಂದ ಮುಕ್ತವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಮುಂದೆ ಮೈತ್ರಿ ಪಕ್ಷವು ಬಿಜೆಪಿಗೆ ಪೈಪೋಟಿ ನೀಡುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಹೇಗೆ ಗೆಲ್ಲಬೇಕು, ಹೇಗೆ ಸೋಲಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಎಂದು ಚಳವಳಿ ಮಾಡಿದ್ದಾರೆ ಎಂದರು.

‘ಶಾಸಕ ಟಿ.ಡಿ.ರಾಜೇಗೌಡ ಅವರನ್ನು ₹ 50 ಕೋಟಿಗೆ ಖರೀದಿಸಲು ಬಿಜೆಪಿಯವರು ಹೊರಟಿದ್ದರು. ಆದರೆ, ಶಾಸಕರು ಪಕ್ಷ ನಿಷ್ಠೆಯನ್ನು ಮೆರೆದರು. ಸಂಸದೆ ಶೋಭಾ ಕರಂದ್ಲಾಜೆ ಐದು ವರ್ಷಗಳಲ್ಲಿ ಮಾಡಿದ ಸಾಧನೆ ಶೂನ್ಯ. ವೋಟು ಕೇಳುವ ನೈತಿಕತೆಯನ್ನು ಶೋಭಾ ಕಳೆದುಕೊಂಡಿದ್ದಾರೆ. ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿರುವುದು ದುರಂತ. ತನ್ನ ಅಸ್ತಿತ್ವವನ್ನು ಕಳೆದು ಕೊಂಡ ಸಂಸದರು ಚುನಾವಣೆಯಲ್ಲಿ ಸೋಲುವುದು ಖಂಡಿತ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ರಸ್ತೆ ಅಭಿವೃದ್ಧಿಗೆ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರ ಜೊತೆಗಾರರು ಅಡ್ಡಕಾಲು ಹಾಕುತ್ತಿದ್ದಾರೆ. ಸಮ್ಮಿಶ್ರ ಸರ್ಕಾರವು ರೈತರ ಹಾಗೂ ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಅವಿರತವಾಗಿ ದುಡಿಯುತ್ತಿದೆ. ಮೋದಿ ಯಾವುದರಲ್ಲಿ ಚೌಕಿದಾರರು? ಎಂಬ ಪ್ರಶ್ನೆಗೆ ಉತ್ತರವನ್ನು ಜನರ ಮುಂದೆ ಹೇಳಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೃಷಿಕರಿಗೆ ₹ 46 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಕಾರ್ಯಕರ್ತರು ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಏಪ್ರಿಲ್ 5ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಶೃಂಗೇರಿಗೆ ಭೇಟಿ ನೀಡಿ ಪ್ರಚಾರ ಭಾಷಣ ಮಾಡಲಿದ್ದಾರೆ’ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ಕುಮಾರ್ ಮಾತನಾಡಿ, ‘ಪಾಕಿಸ್ತಾನದ ಮೇಲೆ ಕಾಂಗ್ರೆಸ್ ಸರ್ಕಾರವಿದ್ದಾಗ ಹಲವು ದಾಳಿ ಮಾಡಿದೆ. ಬಿಜೆಪಿಯು ಸೇನೆಯ ಕ್ಷಿಪಣಿ ದಾಳಿಯನ್ನು ರಾಜಕೀಯ ತಂತ್ರಕ್ಕೆ ಬಳಸಿಕೊಳ್ಳುತ್ತಿದೆ. ರೈತರಿಗೆ ವರ್ಷಕ್ಕೆ ₹ 6000 ನೀಡಿ ಕೇಂದ್ರ ಸರ್ಕಾರವು ಘನ ಕಾರ್ಯ ಮಾಡಿದ ರೀತಿ ವರ್ತಿಸುತ್ತಿದೆ’ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ‘ಶೋಭಾ ಕರಂದ್ಲಾಜೆ ಅವರನ್ನು ಚುನಾವಣೆಗೆ ನಿಲ್ಲಿಸಿ ರಾಷ್ಟ್ರೀಯ ಕಾಗೂ ರಾಜ್ಯದ ಬಿಜೆಪಿ ನಾಯಕರು ಕುರಿಗಳಾಗಿದ್ದಾರೆ. ಜನರ ನಡುವೆ ಇಲ್ಲದ ಸಂಸದೆ ಅವರಿಂದ ಮಲೆನಾಡಿನಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಬೇಕು’ ಎಂದರು.

ಸಮಾವೇಶದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ಸಂದೀಪ್, ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಗೋಪಾಲ ಭಂಡಾರಿ, ಸಚಿನ್ ಮೀಗಾ, ಹೆಚ್.ಜಿ ವೆಂಕಟೇಶ್, ಭಂಡಿಗಡಿ ದಿವಾಕರ್ ಭಟ್, ಕೆ.ಆರ್.ವೆಂಕಟೇಶ್, ಡಾ.ಅಂಶುಮಂತ್, ಮಾರನಕೂಡಿಗೆ ನಟರಾಜ್, ದಿನೇಶ್ ಹೆಗಡೆ, ಜೆಡಿಎಸ್ ಪಕ್ಷದ ಜಿ.ಜಿ.ಮಂಜುನಾಥ್, ಪುಪ್ಪಾ ಲಕ್ಷ್ಮೀನಾರಾಯಣ್, ಕಚ್ಚೋಡಿ ರಮೇಶ್ ಹಾಜರಿದ್ದರು.


Spread the love