ಗೋ ಬ್ಯಾಕ್ ಅಭಿಯಾನ: ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತ ಯಡಿಯೂರಪ್ಪ!

Spread the love

ಗೋ ಬ್ಯಾಕ್ ಅಭಿಯಾನ: ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತ ಯಡಿಯೂರಪ್ಪ!

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಟಿಕೆಟ್ ಪೈಪೋಟಿ ಜೋರಾಗಿದೆ. ಈ ಮಧ್ಯೆ, ಬಿಜೆಪಿ ಕಾರ್ಯಕರ್ತರ ಒಂದು ಬಣದ ‘ಶೋಭಾ ಹಠಾವೋ ಬಿಜೆಪಿ ಬಚಾವೋ’ ಅಭಿಯಾನ ತೀವ್ರಗೊಳ್ಳುತ್ತಿದ್ದಂತೆಯೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಧ್ಯೆ ಪ್ರವೇಶ ಮಾಡಿದ್ದಾರೆ. ಯಡಿಯೂರಪ್ಪ ದಿಢೀರ್ ಇಂದು (ಫೆ.22) ಚಿಕ್ಕಮಗಳೂರಿಗೆ ಭೇಟಿ ನೀಡಿ ಬಿಜೆಪಿ ನಾಯಕರ ಜತೆ ಸಭೆ ನಡೆಸಿದ್ದಾರೆ. ಅಲ್ಲದೇ ಈ ಬಾರಿಯೂ ಸಹ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಸಿಗುವ ಬಗ್ಗೆ ಖಚಿತಪಡಿಸಿದ್ದಾರೆ. ಈ ಮೂಲಕ ವಿರೋಧಿ ಬಣಕ್ಕೆ ಶಾಕ್ ಕೊಟ್ಟಿದ್ದಾರೆ.

ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿ ಹಲವರು ಭಾಗಿಯಾಗಿದ್ದು, ಶೋಭಾ ಗೋಬ್ಯಾಕ್ ಅಭಿಯಾನದ ಬಗ್ಗೆ ಮಾಹಿತಿ ಪಡೆದುಕೊಂಡರು.ಈ ವೇಳೆ ಮಾತನಾಡಿದ ಯಡಿಯೂರಪ್ಪ, ಇಂಥ ಅಭಿಯಾನಕ್ಕೆ ಹೆದರಬೇಕಿಲ್ಲ. ಶೋಭಾ ಕರಂದ್ಲಾಜೆ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದು ಷಡ್ಯಂತ್ರದ ಒಂದು ಭಾಗವಾಗಿದೆ. ಇನ್ನು ಮೂರು ದಿನದ ಒಳಗೆ ಎಲ್ಲವೂ ಗೊತ್ತಾಗುತ್ತೆ. 3 ದಿನದಲ್ಲಿ ಮೊದಲ ಪಟ್ಟಿ ಬಿಡುಗಡೆ ಆಗಬಹುದು. ಶೋಭಾ ಕರಂದ್ಲಾಜೆ ಮೋದಿ ಸಂಪುಟದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿಯೂ ಶೋಭಾ ಕರಂದ್ಲಾಜೆ ಗೆಲ್ಲುತ್ತಾರೆ ಎಂದು ಹೇಳಿದರು. ಈ ಮೂಲಕ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಟಿಕೆಟ್ ಎನ್ನುವುದನ್ನು ಖಚಿತಪಡಿಸಿದರು.

ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಪಕ್ಷದಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಶಾಸಕ ಸಿಟಿ ರವಿ ಬಣಗಳ ನಡುವಣ ಸಂಘರ್ಷ ತಾರಕಕ್ಕೇರಿದೆ. ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಮುಂದುವರಿದ ಭಾಗವಾಗಿ ಇದೀಗ ‘ಹಠಾವೋ ಅಭಿಯಾನ’ ಆರಂಭಗೊಂಡಿದೆ. ಪತ್ರ ಅಭಿಯಾನ, ಗೋ ಬ್ಯಾಕ್ ಶೋಭಾ ಅಭಿಯಾನದ ಜೊತೆ ಬಿಜೆಪಿ ಬಚಾವೋ ಅಭಿಯಾನ ಆರಂಭವಾಗಿದೆ. ಇದರ ಮಧ್ಯೆ ಪ್ರಮೋದ್ ಮಧ್ವರಾಜ್ ಅವರು ಸಹ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಇದರ ಮಧ್ಯೆ ಯಡಿಯೂರಪ್ಪ ಎಂಟ್ರಿಯಾಗುವ ಮೂಲಕ ಮತ್ತೊಮ್ಮೆ ಶೋಭಾ ಕರಂದ್ಲಾಜೆ ಅವರ ಬೆನ್ನಿಗೆ ನಿಂತಿದ್ದಾರೆ. ಅಲ್ಲದೇ ಈ ಬಾರಿಯೂ ಶೋಭಾ ಕರಂದ್ಲಾಜೆ ಗೆಲ್ಲುತ್ತಾರೆ ಎಂದು ಹೇಳುವ ಮೂಲಕ ವಿರೋಧ ಬಣಕ್ಕೆ ಶಾಕ್ ಕೊಟ್ಟಿದ್ದಾರೆ.

ನೇರವಾಗಿ ಬಿಜೆಪಿಯ ಮೂವರು ಹಿರಿಯ ನಾಯಕರಿಗೆ (ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ) ಪತ್ರ ಬರೆದಿರುವ ’ನೊಂದ ಕಾರ್ಯಕರ್ತರು’ ಯಾವ ಕಾರಣಕ್ಕೂ ಶೋಭಾ ಕರಂದ್ಲಾಜೆಗೆ ಮತ್ತೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದರು. ಅಲ್ಲದೇ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಮುಂದುವರಿದ ಭಾಗವಾಗಿ ‘ಹಠಾವೋ ಅಭಿಯಾನ’. ಪತ್ರ ಅಭಿಯಾನ, ಗೋ ಬ್ಯಾಕ್ ಶೋಭಾ ಅಭಿಯಾನದ ಜೊತೆ ಬಿಜೆಪಿ ಬಚಾವೋ ಅಭಿಯಾನ ಮಾಡಲಾಗಿತ್ತು. 3583 ದಿನಗಳಲ್ಲಿ 100 ದಿನವೂ ಕ್ಷೇತ್ರಕ್ಕೆ ಬಾರದ ಸಂಸದೆ ನಮಗೆ ಬೇಕೇ? ಕ್ಷೇತ್ರಕ್ಕೆ ಬಾರದ ಸಂಸದೆ ನಮಗೆ ಬೇಡವೇ ಬೇಡ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಹಾಲೀ ಸಂಸದೆಗೆ ನುಂಗಲಾರದ ತುತ್ತಾಗಿತ್ತು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೂ ಮುಜುಗರ ತರುವ ವಿದ್ಯಮಾನಗಳು ನಡೆಯುತ್ತಿರುವುದು ವರಿಷ್ಠರ ತಲೆಕೆಡಿಸಿತ್ತು. ಇದೀಗ ಖುದ್ದು ಯಡಿಯೂರಪ್ಪ ಮಧ್ಯೆ ಪ್ರವೇಶ ಮಾಡಿ ಟಿಕೆಟ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.


Spread the love