ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಆಸರೆಯಾದ ‘ರಕ್ಷಾ ಪಂಚಕ ಕಿಟ್’

Spread the love

ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಆಸರೆಯಾದ ‘ರಕ್ಷಾ ಪಂಚಕ ಕಿಟ್’
 

ಕುಂದಾಪುರ: ಇಡೀ ದೇಶವನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಕೋವಿಡ್ ಅಟ್ಟಹಾಸದಿಂದಾಗಿ ಎಲ್ಲಾ ಕ್ಷೇತ್ರಗಳು ನೆಲಕಚ್ಚಿ ಹೋಗಿವೆ. ದೊಡ್ಡ ದೊಡ್ಡ ಕಂಪನಿಗಳೂ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗದಲ್ಲಿದ್ದ ಯುವಕ-ಯುವತಿಯರು ಕೆಲಸ ಕಳೆದುಕೊಂಡು ತಮ್ಮ ತಮ್ಮ ಮನೆಗೆ ವಾಪಾಸಾಗಿದ್ದಾರೆ. ಉದ್ಯೋಗ ಸೃಷ್ಠಿಸುವುದೇ ಕಷ್ಟದಾಯಕವಾದ ಇಂದಿನ ದಿನದಲ್ಲಿ ಅತ್ಯಂತ ಗ್ರಾಮೀಣ ಭಾಗದ ಮೂವರು ವೈದ್ಯರು ಹದಿನೈದಕ್ಕೂ ಮಿಕ್ಕಿ ಯುವಕ-ಯುವಕತಿಯರಿಗೆ ಉದ್ಯೋಗ ನೀಡುವ ಮೂಲಕ ಅವರ ಜೀವನಕ್ಕೆ ದಾರಿಯಾಗಿದ್ದಾರೆ.

ಬೈಂದೂರು ತಾಲೂಕು ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ರಾಜೇಶ್ ಬಾಯರಿ, ಡಾ.ಅನುಲೇಖಾ ಆರ್. ಬಾಯರಿ ಹಾಗೂ ಮರವಂತೆ ಚೇತನಾ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ರೂಪಶ್ರಿ ಹೊಸದೊಂದು ಸಾಹಸಕ್ಕೆ ಕೈಹಾಕಿದ ಡಾಕ್ಟರ್ಸ್. ಇವರು ರಕ್ಷಾ ಪಂಚಕ ಹೆಸರಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸಿದ್ದಪಡಿಸುವ ಮೂಲಕ ಪರಿಸರದ ಜನರಿಗೆ ಉದ್ಯೋಗ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಎರಡು ಪರಿಹಾರಕ್ಕೆ ಒಂದೇ ಮಾರ್ಗೋಪಾಯ ಕಂಡುಕೊಂಡಿದ್ದಾರೆ.

ರಕ್ಷಾ ಪಂಚಕ್ ಕಿಟ್ ಸಿದ್ದಪಡಿಸುವ ಸಾಹಸಕ್ಕೆ ಕೈ ಹಾಕಿದ ನಂತರ ಕೆಲಸ ಕೊಡುವ ಶಕ್ತಿಯೂ ವೃದ್ಧಿಸಿದೆ. ಹಿಂದೆ ಇದ್ದ ಎಲ್ಲಾ ಕೆಲಸಗಾರರ ಉಳಿಸಿಕೊಳ್ಳುವ ಜೊತೆ ಇನ್ನಷ್ಟು ಕೆಲಸಗಾರರನ್ನು ಸೇರಿಸಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಎಸೆಸ್ಸೆಲ್ಸಿ, ಪಿಯು ಪೂರೈಸಿ ಮನೆಯಲ್ಲ್ಲಿದ್ದವರು ಕಿಟ್ ಸಿದ್ದಪಡಿಸುವ ವೃತ್ತಿಯಲ್ಲಿ ತೊಡಗಿದ್ದಾರೆ. ಎಲ್ಲಾ ನೌಕರರೂ ಗ್ರಾಮೀಣ ಭಾಗದ ಕೆಲಸಗಾರರಾಗಿದ್ದು, ಅವರನ್ನೆಲ್ಲಾ ಕರೆತಂದು ಬಿಡಲು ವಾಹನ ವ್ಯವಸ್ಥೆ ಕೂಡಾ ಮಾಡಿಕೊಳ್ಳಲಾಗಿದೆ. ಇನ್ನು ಮುಂದೆ ರಕ್ಷಾ ಕಿಟ್ ಉತ್ಪಾದನೆ ಹೆಚ್ಚಿಸಿ, ದೊಡ್ಡಮಟ್ಟದಲ್ಲಿ ಆರಂಭಿಸುವ ಜೊತೆ ನೂರಾರು ಜನರಿಗೆ ಉದ್ಯೋಗ ನೀಡುವ ಯೋಜನೆ ಕೂಡಾ ಈ ಮೂವರು ವೈದ್ಯರು ನಿರ್ಧರಿಸಿದ್ದಾರೆ.

ನಮೋ ಆತ್ಮನಿರ್ಭರ ಭಾರತ ಪ್ರೇರಣೆ
ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತಕ್ಕಾಗಿ ಕರೆ ಕೊಟ್ಟಿರುವುದು ಈ ಹೊಸ ಸಾಹಸಕ್ಕೆ ಪ್ರೇರಣೆಯಾಗಿದೆ ಎನ್ನುತ್ತಾರೆ ಈ ಮೂವರು ವೈದ್ಯರು. ಚಿತ್ರಕೂಟ, ಮರವಂತೆ ಚಿಕಿತ್ಸಾಲಯ ಸೇರಿ ಹತ್ತಕ್ಕೂ ಮಿಕ್ಕಿ ನೌಕರರನ್ನು ಉಳಿಸಿಕೊಳ್ಳುವ ಪ್ರಯತ್ನದ ಫಲವೇ ಈ ರಕ್ಷಾ ಪಂಚಕ ಕಿಟ್. ಚಿತ್ರಕೂಟ ಪರಿಸರದಲ್ಲಿ ಸಿಗುವ ಸಸ್ಯಗಳಾದ ನೆಲನೆಲ್ಲಿ, ಅಮೃತಬಳ್ಳಿ, ಅರಿಶಿನ, ಆಡುಸೋಗೆ, ತುಳಸಿ ಸಿದ್ದಪಡಿಸಿದ ಕಿಟ್‍ನಲ್ಲಿ ಹರ್ಬಲ್ ಟೀ, ಮೌತ್‍ವಾಶ್, ಮೂಗಿನ ಡ್ರಾಪ್, ವೈರಸ್ ತಡೆಗೆ ರಾಶೋಘ್ನ ದೂಪ ಐದು ಆರೋಗ್ಯ ರಕ್ಷಕಗಳನ್ನೊಳಗೊಂಡ ರಕ್ಷಾ ಪಂಚಕ ಕಿಟ್ ಸಿದ್ದಪಡಿಸಲಾಗುತ್ತಿದೆ.

ಔಷಧೀವನ.. ದೇಸೀತಳಿ ಡೈರಿ..
ಚಿತ್ರಕೂಟ ವಿಶೇಷತೆ ಯಾವುದೇ ಕಾಯಿಲೆ ಇರಲಿ ಅದಕ್ಕೆ ಬೇಕಾಗುವ ಗಿಡಮೂಲಿಕೆ ಗಿಡಗಳನ್ನು ತಮ್ಮ ಭೂಮಿಯಲ್ಲೇ ಬೆಳೆಸಲಾಗುತ್ತದೆ. ನೂರಕ್ಕೂ ಮಿಕ್ಕಿದ ಔಷಧೀಯ ಸಸ್ಯಗಳಿದ್ದು, ಎಲ್ಲವೂ ಚಿತ್ರಕೂಟ ವನದಲ್ಲಿ ಪೋಷಣೆ ಮಾಡಲಾಗುತ್ತಿದೆ. ಚಿತ್ರಕೂಟ ಹಚ್ಚ ಹಸಿರು ಹೊದ್ದು ಮಲಗಿದ್ದರೆ, ಒಳ ಪ್ರವೇಶಿಸಿದರೆ ಔಷಧೀಯ ಸಸ್ಯಗಳ ಘಮ ಮೂಗಿಗೆ ಅಡರುತ್ತದೆ. ಚಿತ್ರಕೂಟದಲ್ಲಿ ಆಯುರ್ವೇದ ಔಷಧಿಗೆ ಬೇಕಾಗುವ ಗೋ ಉತ್ಪನ್ನಗಳನ್ನು ಬಳಸಲಾಗುತ್ತದೆ. ಗೀರ್, ಮಲೆನಾಡು ಗಿಡ್ಡ, ಹಳ್ಳಿಕಾರ್, ಸಾಹಿಮಾಲ್ ಜಾತಿಯ 17 ಹಸುಗಳಿವೆ. ಆಯುರ್ವೇದ ಔಷಧಿ ಸಿದ್ದಪಡಿಸಲು ಬೇಕಾಗುವ ಹಾಲು, ತುಪ್ಪ, ಮೊಸರು ದೇಶೀಯ ಹಸುಗಳದ್ದೇ ಆಗಿದೆ. ಹಸುಗಳಿಗೆ ಕೃತಕ ಆಹಾರ ನೀಡದೆ, ಪ್ರಾಕೃತಿಕ ಆಹಾರ ಪದ್ದತಿ ಅನುಸರಿಸುತ್ತಿದ್ದು, ಬೆಟ್ಟಕ್ಕೆ ಹಸುಗಳ ಹೊಡೆದುಕೊಂಡು ಹೋಗಿ ಮೇಯಿಸಿ ಮನೆಗೆ ಕರೆತರುವ ಚಾಕರಿ ಮಾಡಲು ಆಳುಗಳನ್ನು ನೇಮಕ ಮಾಡಲಾಗಿದೆ. ಒಟ್ಟಾರೆ ಚಿತ್ರಕೂಟದಲ್ಲಿ ಸ್ವದೇಶಿ ಮಂತ್ರ ಅನುರಣಿಸುತ್ತದೆ.

ಚಿತ್ರಕೂಟ ಚಿಕಿತ್ಸಾ ಕೇಂದ್ರಕ್ಕೆ ವಿದೇಶಿಗರೂ ಬರುತ್ತಿದ್ದರು. ಕೊರೋನಾ ಲಾಕ್‍ಡೌನ್ ನಂತರ ಚಿಕಿತ್ಸೆಗೆ ಬರುವುದು ನಿಂತು ನಮ್ಮಲ್ಲಿದ್ದವರಿಗೆ ಕೆಲಸ ಕೊಡುವುದು ಹೇಗೆ ಎನ್ನುವ ಚಿಂತೆ ಶುರುವಾಯಿತು. ಅದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಆತ್ಮನಿರ್ಭರ ಭಾರತ ಘೋಷಣೆ ನಮ್ಮ ಚಿಂತನೆ ಬದಲಾಯಿಸಿತು. ಕೊರೋನಾ ರೋಗ ತಡೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾಗಿದ್ದು, ಅನಿವಾರ್ಯವಾಗಿದ್ದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಫುಡ್ ಸಿದ್ದಪಡಿಸುವ ಕೆಲಸಕ್ಕೆ ಕೈ ಹಾಕಿದ್ದರಿಂದ ಹಿಂದೆ ಇದ್ದವರಲ್ಲದೆ ಮತ್ತಷ್ಟು ಜನರಿಗೆ ಕೆಲಸ ಕೊಡುವಂತಾಗಿದೆ ಎನ್ನುತ್ತಾರೆ ಡಾ.ರಾಜೇಶ್ ಬಾಯರಿ

ಗ್ರಾಮೀಣ ಭಾಗದ ಜನರಿಗೆ ಇನ್ನೂ ಹೆಚ್ಚಿನ ಕೆಲಸ ನೀಡುವ ಉದ್ದೇಶದಲ್ಲಿ ರಕ್ಷಾ ಪಂಚಕ್ ಕಿಟ್ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆ. ಇದಕ್ಕಾಗಿಯೇ 10 ಲಕ್ಷ ರೂ.ವೆಚ್ಚದಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನು ಕೂರಿಸಲಾಗುತ್ತದೆ. ರಕ್ಷಾ ಪಂಚಕ ಕಿಟ್ ಪರಿಸರದ ಜನರಿಗೆ ಕೆಲಸ ನೀಡುವ ಜೊತೆ ಕೊರೋನಾ ವಿರುದ್ಧ ಹೋರಾಡುವ ಶಕ್ತಿ ಕೂಡಾ ಹೆಚ್ಚಿಸಲಿದ್ದು, ರಾಜ್ಯ ವ್ಯಾಪಿಯಲ್ಲಿ ಬೇಡಿಕೆ ಪಡೆದುಕೊಂಡಿದೆ. ಮುಂದೆ ಕೊರೋನಾ ಇರಲಿ ಇಲ್ಲದಿರಲಿ ನಮ್ಮ ಯೋಜನೆ ಕೈ ಬಿಡದೆ, ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಪಂಚಕ್ ಕಿಟ್ ವ್ಯವಸ್ಥಾಪಕಿ ಡಾ.ಅನುಲೇಖಾ ಆರ್.ಬಾಯರಿ

ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಏನಾದರೂ ಕೊಡಬೇಕು ಎನ್ನುವ ಚಿಂತನೆ ಜೊತೆ ಉದ್ಯೋಗವಕಾಶ ನೀಡುವ ಸಂಕಲ್ಪದಿಂದ ರಕ್ಷಾ ಪಂಚಕ ಕಿಟ್ ಸಿದ್ದಪಡಿಸಲು ಮೂಲ ಕಾರಣ. ಪಂಚಕ್ ಕಿಟ್ ಜನ ಸಾಮಾನ್ಯರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವಾಗಿದೆ. ನಮ್ಮಲ್ಲಿ ಕೆಲಸಗಾರರ ಉಳಿಸಿಕೊಂಡು ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಸಿದ್ದಪಡಿಸಲಾದ ಕಿಟ್ ಬಳಸುವುದರಿಂದ ಕೊರೋನಾ ಅಲ್ಲದೆ ಇನ್ನಿತರ ಕಾಯಿಲೆಗಳು ರಕ್ಷಣೆ ಪಡೆಯಲು ಸಾಧ್ಯ. ಇದರಲ್ಲಿ ಜೀರಿಗೆ, ಶುಂಟಿ, ಅರಿಶಿನ, ಕಾಳುಮೆಣಸು, ನೆಲ್ಲಿಕಾಯಿ, ಅಶ್ವಗಂಧ, ತುಪ್ಪ ಬಳಸಲಾಗಿದೆ. ಕಿಟ್ ಸಿದ್ದಪಡಿಸುವುದು ವಿಸ್ತರಿಸಿ, ಉದ್ಯೋಗವಕಾಶ ಹೆಚ್ಚಿಸುವ ಗುರಿ ಇದೆ ಎನ್ನುತ್ತಾರೆ ಚೇತನಾ ಚಿಕಿತ್ಸಾಲಯ ಮರವಂತೆ  ವೈದ್ಯಾದಿಕಾರಿ ಡಾ.ರೂಪಶ್ರೀ


Spread the love