ಗ್ರಾ.ಪಂ. ಹಾಲಿ ಸದಸ್ಯರ ಮುಂದುವರಿಕೆಗೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆ ಆಗ್ರಹ

Spread the love

ಗ್ರಾ.ಪಂ. ಹಾಲಿ ಸದಸ್ಯರ ಮುಂದುವರಿಕೆಗೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆ ಆಗ್ರಹ

ಉಡುಪಿ: ಕೋವಿಡ್ 19 ಸೊಂಕಿನ ಕಾರಣ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳ ಜೊತೆಗೆ ಲಾಕ್ಡೌನ್ನಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು ಹಾಲಿ ಗ್ರಾಮ ಪಂಚಾಯತ್ ಸದಸ್ಯರುಗಳನ್ನು ಮುಂದಿನ ಚುನಾವಣೆ ನಡೆಸುವವರೆಗೆ ಮುಂದುವರಿಸುವಂತೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಆಗ್ರಹಿಸಿದೆ.

ಕೋವಿಡ್ 19 ಸೊಂಕಿನ ಕಾರಣ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳ ಜೊತೆಗೆ ಲಾಕ್ಡೌನ್ನಿಂದ ಜನಜೀವನ ಸಹ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಚುನಾವಣಾ ಆಯೋಗವು ಗ್ರಾಮ ಪಂಚಾಯತ್ನ ಪ್ರತಿನಿಧಿಗಳ ಆಯ್ಕೆಗಾಗಿ ಯಾವುದೇ ಚುನಾವಣಾ ಪ್ರಕ್ರಿಯೆಯನ್ನು ಇದುವರೆಗೆ ಮಾಡಿರುವುದಿಲ್ಲ. ಕೋವಿಡ್ 19 ಸೊಂಕಿನ ಪ್ರಯುಕ್ತ ಗ್ರಾಮ ಪಂಚಾಯತ್ ಚುನಾವಣೆಯನ್ನು 6 ತಿಂಗಳ ಕಾಲ ಮುಂದೂಡುವುದು ಅನಿವಾರ್ಯವಾಗಿದೆ ಎಂದು ಸರಕಾರ ಹೇಳಿದೆ

ಆದರೆ ಇದೇ ಪ್ರಸ್ತುತ ಸಂದರ್ಭದಲ್ಲಿ ಪಂಚಾಯತಿಗಳ ಇತಿಹಾಸದಲ್ಲೆ ಪ್ರಥಮ ಬಾರಿಗೆ ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶಿತ ಸದಸ್ಯರು ಬರಲಿದ್ದಾರೆ, ಹಾಗೂ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಸದಸ್ಯರನ್ನು ನೇಮಕ ಮಾಡಲಿದ್ದು ಇವರನ್ನು ಒಳಗೊಂಡ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಧ್ಯಮದ ಮೂಲಕ ನಾವು ತಿಳಿದುಕೊಂಡಿದ್ದೇವೆ. ಒಂದು ವೇಳೆ ಈ ಸಮತಿ ರಚನೆ ಆಗಿದ್ದೆ ಹೌದಾದಲ್ಲಿ ಈಗ ಆಡಳಿತದಲ್ಲಿ ಇರುವಂತಹ ಬಿಜೆಪಿ ಸರಕಾರ ಮತ್ತು ಶಾಸಕರುಗಳು ಅವರದ್ದೇ ಆದ ಕಾರ್ಯಕರ್ತರನ್ನು ಈ ಸಮಿತಿಯಲ್ಲಿ ನೇಮಕಮಾಡಿ ಈ ಸಮಿತಿಯನ್ನು ರಾಜಕೀಯಕರಣಗೊಳಿಸುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯದಲ್ಲಿ 6029 ಗ್ರಾಮ ಪಂಚಾಯತಿಗಳಿದ್ದು ಸುಮಾರು 95168 ಸದಸ್ಯರು ಈ ಗ್ರಾಮ ಪಂಚಾಯತಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಗ್ರಾಮ ಪಂಚಾಯತಿಗಳ ಅವಧಿ ಮೇ 15 ರಿಂದ ಜೂನ್ 30, 2020ಕ್ಕೆ ಪೂರ್ಣಗೊಳ್ಳುತ್ತದೆ. ಪ್ರಸ್ತುತ ಅಧಿಕಾರದಲ್ಲಿರುವ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಬರ, ಪ್ರವಾಹದಂತಹ ಕಠಿಣ ಪರಿಸ್ಥಿತಿ ಹಾಗೂ ಕೋವಿಡ್ 19 ಸೊಂಕಿನ ಸಂದರ್ಭದಲ್ಲಿಯೂ ಗ್ರಾಮೀಣ ಅಭಿವೃದ್ಧಿಯನ್ನು ಸುಸೂತ್ರವಾಗಿ ನಿಭಾಯಿಸುವುದರ ಮೂಲಕ ಉತ್ತಮವಾಗಿ ಕೆಲಸಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಈ ಸೊಂಕು ತೀವ್ರವಾಗಿ ಹರಡುತ್ತಿಲ್ಲ. ನಗರಗಳಿಂದ ಜನರು ವ್ಯಾಪಕವಾಗಿ ಹಳ್ಳಿಗಳಿಗೆ ವಲಸೆಹೋದರೂ ಈ ಬೇಸಿಗೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ ಮುಂತಾದ ಸಮಸ್ಯೆಗಳು ಸೃಷ್ಠಿಯಾಗದಂತೆ ಗ್ರಾಮ ಪಂಚಾಯತ್ಗಳ ಸದಸ್ಯರುಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇದಕ್ಕಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ನ ಸದಸ್ಯರನ್ನು ಹಾಗೂ ಆಡಳಿತ ವರ್ಗದವರನ್ನು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆ ಅಭಿನಂದಿಸುತ್ತದೆ.

ಪಂಚಾಯತ್ ಚುನಾವಣೆಗಳು ಪಕ್ಷಾತೀತವಾಗಿ ನಡೆಯುತ್ತಿದ್ದು ಈಗ ಗ್ರಾಮ ಪಂಚಾಯತ್ನಲ್ಲಿರುವ ಹಾಲಿ ಸದಸ್ಯರು ಪಕ್ಷದ ಚಿಹ್ನೆ ಇಂದ ಆಯ್ಕೆ ಆದವರಲ್ಲ ಹಾಗೂ ನೇರ ಜನರಿಂದ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳಾಗಿರುವುದರಿಂದ ಹಾಲಿ ಗ್ರಾಮ ಪಂಚಾಯತ್ ಸದಸ್ಯರನ್ನೇ ಮುಂದುವರಿಸಬೇಕು. ಗ್ರಾಮ ಪಂಚಾಯತ್ಗಳ ಕಾರ್ಯ ವೈಖರಿಯ ಕುರಿತು ಏನೇನು ತಿಳುವಳಿಕೆ ಇಲ್ಲದವರನ್ನು ಆಡಳಿತ ಸಮಿತಿಗೆ ಸೇರಿಸಿದರೆ ಕೊರೊನಾದಂತಹಾ ಭೀಕರ ಬಿಕ್ಕಟ್ಟನ್ನು ನಿಭಾಯಿಸಲು ಕಷ್ಟವಾಗುತ್ತದೆ ಇದರ ಜೊತೆಗೆ ಗ್ರಾವಿೂೀಣ ಭಾಗದ ಅಭಿವೃದ್ಧಿ ಕುಂಠಿತವಾಗುತ್ತದೆ.

ಯಾವುದೇ ಕಾರಣಕ್ಕೂ ಹೊಸ ಸಮಿತಿ ರಚನೆ ಮಾಡುವಂತಹ ಪ್ರಯತ್ನ ಮಾಡಬಾರದು, ಒಂದು ವೇಳೆ ಸಮಿತಿ ರಚಿಸಿದ್ದೇ ಹೌದಾದಲ್ಲಿ ರಾಜಕೀಯಗೊಂಡಂತೆ ಆಗುತ್ತದೆ. ಈಗ ಇರುವ ಹಾಲಿ ಗ್ರಾಮ ಪಂಚಾಯತ್ ಸದಸ್ಯರುಗಳನ್ನು ಮುಂದಿನ ಚುನಾವಣೆ ನಡೆಸುವವರೆಗೆ ಮುಂದುವರಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು ಎನ್ನುವ ಆಗ್ರಹದೊಂದಿಗೆ ಬಿ.ಎಸ್.ಯಡಿಯೂರಪ್ಪ ಹಾಗೂ ಈಶ್ವರಪ್ಪ ಇವರಿಗೆ ಸಲ್ಲಿಸಿರುವ ಮನವಿಯಲ್ಲಿ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯ ಪರವಾಗಿ ಸಂಘಟನೆಯ ಗೌರವ ಸಲಹೆಗಾರರಾದ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಸಂಯೋಜಕರಾದ ರೋಶನಿ ಒಲಿವರ್ರವರು ಒತ್ತಾಯಿಸಿದ್ದಾರೆ.


Spread the love