ಚಿಕಿತ್ಸೆಯಿಂದ ಎಚ್‍ಐವಿ ಪೀಡಿತರು ವಂಚಿತರಾಗದಂತೆ ಎಚ್ಚರಿಕೆ ವಹಿಸಿ- ಸಿಇಒ ಡಾ ಸೆಲ್ವಮಣಿ

Spread the love

ಚಿಕಿತ್ಸೆಯಿಂದ ಎಚ್‍ಐವಿ ಪೀಡಿತರು ವಂಚಿತರಾಗದಂತೆ ಎಚ್ಚರಿಕೆ ವಹಿಸಿ- ಸಿಇಒ ಡಾ ಸೆಲ್ವಮಣಿ

ಮಂಗಳೂರು: ಜಿಲ್ಲೆಯಲ್ಲಿರುವ ಎಚ್‍ಐವಿ ಪೀಡಿತರು ಚಿಕಿತ್ಸೆ ಮತ್ತು ಇತರ ಸೌಲಭ್ಯಗಳಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಿ ಕಾರ್ಯೋನ್ಮುಖರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ ಸೆಲ್ವಮಣಿ ಆರ್ ಸೂಚನೆಯನ್ನು ನೀಡಿದರು.

ಸುಮಾರು 6000ದಷ್ಟು ಗುರುತಿಸಲ್ಪಟ್ಟವರಿಗೆ ಸೂಕ್ತ ಸೌಲಭ್ಯಗಳನ್ನು ಹಾಗೂ ಚಿಕಿತ್ಸೆಯನ್ನು ಒದಗಿಸಲು ಸೂಚಿಸಿದ ಅವರು, ಖಾಸಗಿ ಪ್ರಯೋಗಶಾಲೆ, ಕೆಎಂಸಿ ಆಸ್ಪತ್ರೆ ಇಲ್ಲಿ ಪತ್ತೆಯಾಗುವ ಹೆಚ್ ಐ ವಿ ಸೋಂಕಿತರ ವಿವರಗಳನ್ನು ಕಡ್ಡಾಯವಾಗಿ “`ಡ್ಯಾಪ್ಕೊ ಕಚೇರಿಗೆ ಸಲ್ಲಿಸಬೇಕು; ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ನಿರ್ದೇಶನದ ಮೇರೆಗೆ  ಸಮಿತಿ ಸಭೆಯನ್ನು ವಾರದೊಳಗೆ ಡಿಹೆಚ್‍ಒ ಅಧ್ಯಕ್ಷತೆಯಲ್ಲಿ ನಡೆಸಿ ಕಾರ್ಯಾನುಷ್ಠಾನ ವರದಿ ನೀಡಿ ಎಂದು ಅವರಿಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಆಯೋಜಿಸಿದ ಹೆಚ್‍ಐವಿ/ಟಿಬಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಕಳೆದ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಪರಿಶೀಲಿಸಿದ ಸಿಇಒ ಅವರು, ಯೋಜನೆಗಳ ಅನುಷ್ಠಾನದಲ್ಲಾದ ವ್ಯತ್ಯಯ ಹಾಗೂ ಸಮಗ್ರ ಹಾಗೂ ಸಮರ್ಪಕ ಮಾಹಿತಿ ನೀಡದ ಬಗ್ಗೆ ಏಡ್ಸ್ ನಿಯಂತ್ರಣಾಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಮುಂದಿನ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಲು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದಡಿ ಕಾರ್ಯಾಚರಿಸುತ್ತಿರುವ ಸರಕಾರೇತರ ಸಂಘಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಲ್ಯಾಬ್ ಟೆಕ್ನಿಷಿಯನ್ ಅಗತ್ಯದ ಬಗ್ಗೆ ಗಮನಸೆಳೆದರಲ್ಲದೆ, ರೋಗಪೀಡಿತರಿಗೆ ಕಳೆದ ನಾಲ್ಕು ತಿಂಗಳಿಂದ ನೆವಿರಾಪಿನ್(ಟಿeviಡಿಚಿಠಿiಟಿe) ಮಾತ್ರೆ ಸಿಗುತ್ತಿಲ್ಲ ಎಂದು ಹೇಳಿದರು.

ಸಂಬಂಧ ಪಟ್ಟವರಲ್ಲಿ ತಕ್ಷಣವೇ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಿಇಒ ಅವರು, ಗ್ರಾಮೀಣ ವಸತಿ ಯೋಜನೆಯಡಿ ಹೆಚ್‍ಐವಿ ಪಾಸಿಟಿವ್ ರೋಗಿಗಳಿಗೆ ವಸತಿ ಒದಗಿಸುವ ಬಗ್ಗೆ ಮನೆ ಮತ್ತು ನಿವೇಶನ ಇಲ್ಲದವರ ಪ್ರತ್ಯೇಕ ಪಟ್ಟಿ ತಯಾರಿಸಿ ನೀಡಲು ಎನ್‍ಜಿಒ ಪ್ರತಿನಿಧಿಗಳಿಗೆ ಸಿಇಒ ಹೇಳಿದರು. ಹಲವರಿಗೆ ರೇಷನ್ ಕಾರ್ಡ್ ಇಲ್ಲದೆ ಸೌಲಭ್ಯ ವಂಚಿತರಾಗಿದ್ದಾರೆಂದು ಪ್ರತಿನಿಧಿಗಳು ಗಮನಸೆಳೆದಾಗ, ನಿಗದಿತ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ ರೇಷನ್ ಕಾರ್ಡ್ ಹಾಗೂ ಆಧಾರ್ ಒದಗಿಸಲು ಖುದ್ದು ನೆರವು ನೀಡುವುದಾಗಿ ಹೇಳಿದರು.

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಎಚ್‍ಐವಿ ಪೀಡಿತರಿಗೆ ಅರಿವು ಕಾರ್ಯಕ್ರಮ ಆಯೋಜಿಸುವ ಬಗ್ಗೆ ಅವರಿಗೆ ಎಆರ್‍ಟಿಯಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಇಒ ಅವರು, ವಲಸೆ ಕಾರ್ಮಿಕರ ಬಗ್ಗೆ, ಟ್ರಕ್ ಚಾಲಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸೂಚನೆ ನೀಡಿದರಲ್ಲದೆ, ಇಲ್ಲೂ ವಸತಿರಹಿತರ ಮಾಹಿತಿ ನೀಡಿದರೆ ಡಿಯುಡಿಸಿ ಮೂಲಕ ವಸತಿ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಅವಕಾಶವಿದೆ ಎಂದರು.

ಎಚ್‍ಐವಿ ಪೀಡಿತ ಮಕ್ಕಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೇರ್ಪಡೆಗೆ ಅವಕಾಶವಿದೆ ಎಂದೂ ಸಿಇಒ ಅವರು ಸಭೆಯಲ್ಲಿ ಹೇಳಿದರು. ಕಳಂಕ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೆಚ್‍ಐವಿ ಕಾನೂನು -2017ನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಹಾಗೂ ಬಹುಮಾಧ್ಯಮದ ಮೂಲಕ ಈ ಸಂಬಂಧ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು. ಸುಮಾರು 6000ದಷ್ಟು ರೋಗಿಗಳನ್ನು ಜಿಲ್ಲೆಯಲ್ಲಿ ಪತ್ತೆಹಚ್ಚಲಾಗಿದ್ದು, ಇವರನ್ನು ತಲುಪಲು ವಿಫಲವಾದರೆ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ವಿಫಲವಾದಂತೆ ಎಂದ ಅವರು, ರೋಗಿಗಳಿಗೆ ದೊರಕುವ ಸೌಲಭ್ಯಗಳನ್ನು ಚಿಕಿತ್ಸೆಯನ್ನು ಅವರಿಗೆ ಸಕಾಲಕ್ಕೆ ತಲುಪಿಸಿ ಎಂದು ಸೂಚಿಸಿದರು.

ರೋಗ ಹರಡುವ ವಲ್ನರೇಬಲ್ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣಕ್ಕೆ ಒತ್ತು ನೀಡಿ ಎಂದ ಸಿಇಒ ಡಾ ಸೆಲ್ವಮಣಿ ಅವರು, ಮುಂದಿನ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಲು ಸೂಚಿಸಿದರು.


Spread the love