ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಕಠಿಣ ಕ್ರಮ – ಕೇಂದ್ರ ವೀಕ್ಷಕರ ಸೂಚನೆ

Spread the love

ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಕಠಿಣ ಕ್ರಮ – ಕೇಂದ್ರ ವೀಕ್ಷಕರ ಸೂಚನೆ

ಲೋಕಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿರುವ ವಿವಿಧ ಅಧಿಕಾರಿಗಳ ಮತ್ತು ಸಿಬ್ಬಂಧಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಕೃಷ್ಣ ಕುನಾಲ್ ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಚುನಾವಣಾ ಸಿದ್ಧತೆ ಸಭೆ ನಡೆಸಿ ಮಾತ ನಾಡಿದರು.

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಹಲವಾರು ಅಧಿಕಾರಿಗಳು ಸಿಬ್ಬಂಧಿಗಳು ತೊಡಗಿಸಿಕೊಂಡಿದ್ದಾರೆ. ತಪಾಸಣಾ ತಂಡದ ಅಧಿಕಾರಿಗಳು ವಿವಿದೆಡೆ ತಪಾಸಣೆಗೆ ಹೋದಾಗ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಲವಾರು ಪ್ರಕರಣ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲು ಅವರು ನಿರ್ದೇಶಿಸಿದರು.

ಶಸ್ತ್ರಾಸ್ತ್ರಗಳನ್ನು ಇದುವರೆಗೂ ಪೋಲೀಸು ಠಾಣೆಗೆ ಠೇವಣಿ ಇಡದವರ ಪರವಾನಿಗೆಯನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ಕೇಂದ್ರ ವೀಕ್ಷಕರು ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿ, ಚುನಾವಣಾ ಪ್ರಚಾರವನ್ನು ರಾತ್ರಿ 10.00 ಗಂಟೆ ನಂತರ ಯಾವುದೇ ಕಾರಣಕ್ಕೂ ನಡೆಸುವಂತಿಲ್ಲ. ಆಸ್ಪತ್ರೆ ಮತ್ತು ಶಾಲಾ ಪರಿಸರದಲ್ಲಿ ಚುನಾವಣಾ ಸಭೆ ಸಮಾರಂಭಗಳಿಗೆ ಅವಕಾಶ ನೀಡದಂತೆ ಅವರು ಸೂಚಿಸಿದರು.
ಸೂಕ್ಷ್ಮ ಮತಗಟ್ಟೆಗಳಿಗೆ ವೆಬ್ ಕ್ಯಾಮೆರ ಅಳವಡಿಸಬೇಕು. ಚುನಾವಣಾ ಕರ್ತವ್ಯದಲ್ಲಿರುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಬೇಕು. ಸಂಶಯಸ್ಪದ ಬ್ಯಾಂಕ್ ವ್ಯವಹಾರಗಳ ಮೇಲೆ ನಿಗಾ ಇಡುವಂತೆ ಕೃಷ್ಣ ಕುನಾಲ್ ರವರು ತಿಳಿಸಿದರು.

ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪತಿ ಅವರು ಚುನಾವಣಾ ಸಿದ್ದತೆಗಳ ಬಗ್ಗೆ ವಿವರಣೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಸಿಂದೂ ಬಿ ರೂಪೇಶ್ , ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಚುನಾವಣಾ ಜಾಗೃತಿ ಮೂಡಿಸಲು , ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಸಿದ್ದಪಡಿಸಿರುವ ಆಕರ್ಷಕ ಕೊಡೆಯನ್ನು ಕೇಂದ್ರ ಚುನಾವಣಾ ವೀಕ್ಷಕರು ಬಿಡುಗಡೆಗೊಳಿಸಿದರು.


Spread the love