ಜಗತ್ತನ್ನು ತಲ್ಲಣಗೊಳಿಸಿದ ಬಜ್ಪೆ ವಿಮಾನ ದುರಂತದ ಕಹಿ ನೆನಪಿಗೆ 8 ವರ್ಷ!

Spread the love

ಜಗತ್ತನ್ನು ತಲ್ಲಣಗೊಳಿಸಿದ ಬಜ್ಪೆ ವಿಮಾನ ದುರಂತದ ಕಹಿ ನೆನಪಿಗೆ 8 ವರ್ಷ!

ಮಂಗಳೂರು : ಪ್ರಪಂಚದ ಜನತೆಯನ್ನೇ ಒಂದರೆಕ್ಷಣ ತಲ್ಲಣಗೊಳಿಸಿದ್ದ ಮಂಗಳೂರಿನ ವಿಮಾನ ದುರಂತ ಸಂಭವಿಸಿ ಎಂಟು ವರ್ಷ ಕಳೆಯುತ್ತಾ ಬಂದರೂ ಆ ಕರಾಳ ನೆನಪು ಮಾತ್ರ ಇಂದಿಗೂ ಕಾಡುತ್ತಿದೆ.

ಮಂಗಳೂರು ವಿಮಾನ ದುರಂತ ನಡೆದದ್ದುದು ಮೇ 22ಕ್ಕೆ. ಅಂದು ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 812 ಬಜ್ಪೆ ನಿಲ್ದಾಣ ಸ್ಪರ್ಶಿಸುತ್ತಿದ್ದಂತೆ 158 ಮಂದಿಯನ್ನು ಬಲಿತೆಗೆದುಕೊಂಡು ಬಿಟ್ಟಿತ್ತು.

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, 6 ಜನ ಸಿಬ್ಬಂದಿ ಸೇರಿದಂತೆ 166 ಮಂದಿಯನ್ನು ಹೊತ್ತು ತಂದಿದ್ದ ವಿಮಾನ ಬಜ್ಪೆ ವಿಮಾನ ನಿಲ್ದಾಣದಲ್ಲಿ ರನ್ ವೇಯನ್ನು ಜಿಗಿದು ಹತ್ತಿರದಲ್ಲಿದ್ದ ಗುಡ್ಡಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 8 ಜನ ಬದುಕುಳಿದಿದ್ದರು.

2010ರ ಮೇ 22ರ ಮುಂಜಾನೆ 6.05ಕ್ಕೆ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದ 158 ಮಂದಿಯಲ್ಲಿ 10 ಮಂದಿಯ ಗುರುತನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಡಿದವರ ಪೈಕಿ ಗುರುತು ಪತ್ತೆಯಾಗದ 10 ಮೃತದೇಹಗಳನ್ನು ದ.ಕ. ಜಿಲ್ಲಾಡಳಿತವು ಕೂಳೂರು-ತಣ್ಣೀರುಬಾವಿ ಬಳಿ ಸರ್ವಧರ್ಮಗಳ ಶಾಸ್ತ್ರ ಪ್ರಕಾರ ಅಂತಿಮ ಸಂಸ್ಕಾರ ಮಾಡಿಸಿತ್ತು. ಅಲ್ಲಿ ಇದೀಗ ವಿಮಾನ ದುರಂತ ಸ್ಮಾರಕ ಉದ್ಯಾನವನ ನಿರ್ಮಿ ಸಲಾಗಿದೆ. ಪ್ರತೀ ವರ್ಷ ಜಿಲ್ಲಾಡಳಿತ ಅಲ್ಲಿ ದುರಂತದಲ್ಲಿ ಮಡಿದವರನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.

ದುರಂತ ಸಂಭವಿಸಿದ ಬಳಿಕ ಸಂತ್ರಸ್ತರ ಕುಟುಂಬಸ್ಥರು ಸಭೆ ಸೇರಿ ಪರಿಹಾರಕ್ಕಾಗಿ ಸಮಾಲೋಚನೆ ನಡೆಸಿದರು. ಸಂಘಟನೆ ರಚಿಸಿಕೊಂಡರು. ಅಂತಿಮವಾಗಿ ಮುಂಬೈಯ ಕಾನೂನು ತಜ್ಞ ಎಚ್.ಡಿ. ನಾನಾವತಿಯ ನೇತೃತ್ವದ ಮುಲ್ಲ ಆ್ಯಂಡ್ ಮುಲ್ಲ ಎಂಬ ಸಂಸ್ಥೆಯನ್ನು ಸಂಪರ್ಕಿಸಿದರು. ಈ ಸಂಸ್ಥೆಯು ಬಹುತೇಕ ಸಂತ್ರಸ್ತ ಕುಟುಂಬಗಳಿಗೆ ಕನಿಷ್ಠ 25 ಲಕ್ಷ ರೂ. ಹಾಗೂ ಗರಿಷ್ಠ 7.75 ಕೋ.ರೂ. ಪರಿಹಾರ ಒದಗಿಸಿತ್ತು.

ಈ ಮಧ್ಯೆ ಕೆಲವರು ಸಿಕ್ಕಿದ ಪರಿಹಾರಕ್ಕೆ ತೃಪ್ತಿ ಹೊಂದಿ ಸ್ಥಳೀಯ ನ್ಯಾಯಾಲಯ ಮಟ್ಟದಲ್ಲೇ ಪ್ರಕರಣ ಸಮಾಪ್ತಿ ಗೊಳಿಸಿದರೆ ಕೆಲವರು ಪರಿಹಾರ ತೃಪ್ತಿಕರವಾಗಿಲ್ಲ ಮತ್ತು ವಾಯು ಅಪಘಾತದ ಪರಿಹಾರದ ಕುರಿತು ಅಂತಾರಾಷ್ಟ್ರೀಯ ಒಪ್ಪಂದ ‘ಮೋಂಟ್ರಿಯಲ್ ಕನ್ವೆನ್ಷನ್’ನ ಅನ್ವಯ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿ ಕೇರಳ ಹೈಕೋರ್ಟ್ ಮೊರೆ ಹೋದರು. ಅದರಂತೆ ಕೇರಳ ಹೈಕೋರ್ಟ್ ಮೊದಲ ಹಂತದಲ್ಲಿ ಎಲ್ಲರಿಗೂ ತಲಾ 75 ಲಕ್ಷ ರೂ. ಪರಿಹಾರ ನೀಡ ಬೇಕು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಏರ್ ಇಂಡಿಯಾ ಕಂಪೆನಿಯು ತ್ರಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು. ಈ ಪೀಠವು ಕಂಪೆನಿಯ ಪರವಾಗಿ ತೀರ್ಪು ನೀಡಿತು. ಸಂತ್ರಸ್ತರು ಇದರ ವಿರುದ್ಧ ಹೆಚ್ಚುವರಿ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಮಡಿದ ಅಮಾಯಕ ಜೀವಗಳಿಗೆ ಮ್ಯಾಂಗಲೋರಿಯನ್ ಡಾಟ್ ಕಾಮ್ ಭಾವಪೂರ್ಣ ಶೃದ್ಧಾಂಜಲಿ ಕೋರುತ್ತದೆ.


Spread the love