ಜನತಾದಳದ ಹಿರಿಯ ಮುಖಂಡ ಎಂ.ಸಂಜೀವ ನಿಧನ

Spread the love

ಜನತಾದಳದ ಹಿರಿಯ ಮುಖಂಡ ಎಂ.ಸಂಜೀವ ನಿಧನ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಜನತಾದಳದ ಹಿರಿಯ ಮುಖಂಡ ಎಂ.ಸಂಜೀವ ಅವರು ಕದ್ರಿ ಸ್ಟೂಡೆಂಟ್ ಲೇನ್ ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಜನತಾ ಪರಿವಾರದ ರಾಷ್ಟ್ರೀಯ ಮುಖಂಡರ ನಿಕಟವರ್ತಿಯಾಗಿದ್ದರು.

ಶಾಲಾ ದಿನಗಳಲ್ಲಿ ತ್ವಾತಂತ್ರ್ಯ ಹೋರಾಟದಿಂದ ಸಾಮಾಜಿಕ ಜೀವನ ಪ್ರವೇಶಿಸಿದ ಸಂಜೀವರು ತುರ್ತು ಪರಿಸ್ಥಿತಿಯಲ್ಲಿ ಸಕ್ರಿಯರಾಗಿದ್ದು ಅವರನ್ನು ಹಲವು ಬಾರಿ ಮೀಸಾ ಕಾಯಿದೆಯಡಿ ಬಂಧಿಸಲಾಗಿತ್ತು. ಅನಂತರ, ಭೂಸುಧಾರಣೆ ಕಾಲದಲ್ಲಿ ಬಡವರಿಗೆ ಭೂಮಿ ದೊರಕಿಸಲು, ಬಾಡಿಗಾರರ ವಿರುದ್ಧ ನಡೆಯುತ್ತಿದ್ದ ಅನ್ಯಾಯ ವಿರುದ್ಧ ಕೆಲಸ ಮಾಡಿದ್ದರು.

ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆತ್ಮೀಯರಾಗಿದ್ದ ಎಂ.ಸಂಜೀವ ಅವರು ತುರ್ತು ಪರಿಸ್ಥಿತಿ ಕಾಲದಿಂದಲೂ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದರು. ಯಾವುದೇ ರೀತಿಯ ರಾಜಕೀಯ ಅಧಿಕಾರ ದೊರೆಯದಿದ್ದರೂ ಎಂ.ಸಂಜೀವ ಅವರು ಜನಪರವಾದ ಕಾರ್ಯದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದವರು ಎಂದು ದೇವೇಗೌಡ ಈ ಸಂದರ್ಭದಲ್ಲಿ ಹೇಳಿದರು.

ಮಾಜಿ ಪ್ರಧಾನಿ ದೇವೆಗೌಡ ಅವರು ತಮ್ಮ ಸ್ನೇಹಿತ ಎಂ.ಸಂಜೀವ ಅವರಿಗಿಂತ ಕೇವಲ ಹತ್ತು ದಿವಸ ಹಿರಿಯರಾಗಿದ್ದಾರೆ. ಸಂಸ್ಥಾ ಕಾಂಗ್ರೆಸ್, ಜನತಾ ಪಕ್ಷ, ಜನತಾದಳ ಮುಖಂಡರಾಗಿದ್ದ ಎಂ.ಸಂಜೀವ ಅವರು ತಮ್ಮ ಜೀವನವನ್ನು ಪರರಿರಾಗಿ ತ್ಯಾಗ ಮಾಡಿದ ಸಮಾಜ ಸೇವಕ ಮತ್ತು ಬ್ರಹ್ಮಚಾರಿ ಆಗಿದ್ದರು.

ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಜನತಾದಳ ಟಿಕೇಟಿನಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋಲನುಭವಿಸಿದ್ದರು. ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಹಲವಾರು ವಸತಿ ಬಡಾವಣೆ ಅಭಿವೃದ್ಧಿ ಮಾಡಿದ್ದಲ್ಲದೆ ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದ್ದರು

ಅಂತ್ಯ ಸಂಸ್ಕಾರವು ಸೋಮವಾರ ಸಂಜೆ ಆರು ಗಂಟೆಗೆ ನಡೆಯಲಿದೆ.


Spread the love