ಜನತಾ ಪ್ರೌಢಶಾಲೆಯಲ್ಲಿ ನಿವೃತ್ತರಾದ ಭೋಧಕೇತರ ಸಿಬ್ಭಂದಿ ಯು ನಾಗೇಶ್ ಅವರಿಗೆ ಬೀಳ್ಕೊಡುಗೆ

Spread the love

ಜನತಾ ಪ್ರೌಢಶಾಲೆಯಲ್ಲಿ ನಿವೃತ್ತರಾದ ಭೋಧಕೇತರ ಸಿಬ್ಭಂದಿ ಯು ನಾಗೇಶ್ ಅವರಿಗೆ ಬೀಳ್ಕೊಡುಗೆ

ಕುಂದಾಪುರ: ವಿವಿವಿ ಮಂಡಳಿ ಆಡಳಿತದ ಜನತಾ ಪ್ರೌಢ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಮೂವತ್ತಾರುವರೆ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದ ಯು. ನಾಗೇಶ್ ಅವರ ಬೀಳ್ಕೊಡುಗೆ ಸಮಾರಂಭವು ಶಾಲಾ ಸಭಾಭವನದಲ್ಲಿ ಬುಧವಾರ ಜರುಗಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಜನತಾ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಂದಿ ದೇವಾಡಿಗ ಅವರು, ಒಂದು ಶಾಲೆ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಆ ಶಾಲೆಯಲ್ಲಿ ಬೋಧಕ ಸಿಬ್ಬಂದಿಗಳ ಪಾತ್ರ ಎಷ್ಟು ಮುಖ್ಯವೋ, ಅಷ್ಟೇ ಬೋಧಕೇತರ ಸಿಬ್ಬಂದಿಗಳ ಪಾತ್ರವೂ ಮುಖ್ಯವಾಗಿರುತ್ತದೆ. ಶಾಲೆಯ ಏಳಿಗೆಗಾಗಿ ತೆರೆಮರೆಯಲ್ಲಿ ಕೆಲಸ ಮಾಡುವ ಬೋಧಕೇತರ ಸಿಬ್ಬಂದಿಗಳು ಶಾಲೆಯ ಆಸ್ತಿ. ಮೂವತ್ತಾರುವರೆ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸುವುದು ಸಾಮಾನ್ಯದ ಮಾತಲ್ಲ. ತಮ್ಮ ಸೇವಾವಧಿಯೂದಕ್ಕೂ ಶಿಸ್ತು, ನೇರ ನಡೆನುಡಿಗಳಿಂದಲೇ ಎಲ್ಲರ ಮನಗೆದ್ದಿರುವ ಯು ನಾಗೇಶ್ ಅವರ ನಿವೃತ್ತಿ ನಮಗೆಲ್ಲರಿಗೂ ನೋವಿನ ಸಂಗತಿ. ಹೇಳಿದ ಕೆಲಸವನ್ನೆಲ್ಲಾ ಚಾಚುತಪ್ಪದೆ ನಗುಮೊಗದಿಂದಲೇ ಮಾಡಿ ಮುಗಿಸುವ ನಾಗೇಶ್ ಅವರ ಸೇವಾನಿವೃತ್ತಿ ಶಾಲೆಗೆ ತುಂಬಲಾರದ ನಷ್ಟ. ಶಾಲಾ ಬಗೆಗಿನ ಅವರಲ್ಲಿರುವ ಬದ್ದತೆ, ಪ್ರಾಮಾಣಿಕತೆ ಮೆಚ್ಚವಂತದ್ದು ಎಂದು ಹೇಳಿದರು.

ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಿ. ಮೋಹನ್ದಾಸ್ ಶೆಟ್ಟಿ ವಹಿಸಿದ್ದರು. ಸೇವಾನಿವೃತ್ತಿ ಪಡೆದ ಯು ನಾಗೇಶ್ ಅವರನ್ನು ಶಾಲಾ ಪರವಾಗಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬೈಂದೂರು ರತ್ತು ಬಾೈ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ಉಪಾಧ್ಯಕ್ಷ ರಾಜು ಪೂಜಾರಿ ಕಾಳೂರಮನೆ, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ಶಿಕ್ಷಕರಾದ ದೇವೇಂದ್ರ ನಾಯ್ಕ್, ಶ್ರೀಧರ್ ಗಾಣಿಗ, ಮಹೇಂದ್ರ ದೇವಾಡಿಗ, ಶಿಕ್ಷಕಿ ಪ್ರವಿತಾ, ಬೋಧಕೇತರ ಸಿಬ್ಬಂದಿ ರಘುರಾಮ್, ನಿವೃತ್ತ ಬೋಧಕೇತರ ಸಿಬ್ಬಂದಿ ಸತೀಶ್ ಪೈ ಉಪಸ್ಥಿತರಿದ್ದರು.

ಶಿಕ್ಷಕ ದಿನಾಕರ್ ಎಸ್ ಸ್ವಾಗತಿಸಿದರು. ಹಿಂದಿ ಶಿಕ್ಷಕ ವಿಠಲ್ ನಾಯಕ್ ಧನ್ಯವಾದವಿತ್ತರು. ಕನ್ನಡ ಶಿಕ್ಷಕ ಜಗದೀಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love