ಜನಮನಗೆದ್ದ ಹಾಡುಗಾರ ಕುಂದಾಪುರದ ವೈಕುಂಠ ನಿಧನ; ವೈದ್ಯರ ನಿರ್ಲಕ್ಷ್ಯ ಆರೋಪ

Spread the love

ಜನಮನಗೆದ್ದ ಹಾಡುಗಾರ ಕುಂದಾಪುರದ ವೈಕುಂಠ ನಿಧನ; ವೈದ್ಯರ ನಿರ್ಲಕ್ಷ್ಯ ಆರೋಪ

ಕುಂದಾಪುರ: ಶ್ವಾಸಕೋಶ, ಉಸಿರಾಟ ಸಮಸ್ಯೆ, ಬಹುಅಂಗಾಂಗ ವೈಫಲ್ಯದಿಂದಾಗಿ ಕಳೆದ ಐದು ದಿನಗಳಿಂದ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ಕುಂದಾಪುರದ ಟ್ರೋಲ್ ಕಿಂಗ್ ವೈಕುಂಠ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಟ್ರೋಲ್ ಕಿಂಗ್ ವೈಕುಂಠ

ತೀವ್ರ ಅನಾರೋಗ್ಯದಿಂದ ಕುಂದಾಪುರದ ರಸ್ತೆಯ ಬದಿಯಲ್ಲಿ ನರಳುತಿದ್ದ ವೈಕುಂಠನನ್ನು ಆತನ ಅಭಿಮಾನಿಗಳು ಕಳೆದ ನ.13ರಂದು ಉಡುಪಿಯ ಜಿಲ್ಲಾಸ್ಪತ್ರೆಗೆ ಸೇರಿದ್ದರು. ಕುಂದಾಪುರದ ಬೀದಿಗಳಲ್ಲಿ ಸ್ವಚ್ಛಂಧವಾಗಿ ಹಾಡುತಿದ್ದ ಆತನ ಹಾಡನ್ನು ಕೇಳಿದ ಹಲವರು   ಆತನಿಂದ ಬಗೆಬಗೆಯ ಹಾಡನ್ನು ಹಾಡಿಸಿ ಅದನ್ನು ಯೂಟ್ಯೂಬ್ಗೆ ಹಾಕಿ ವೈರಲ್ ಮಾಡುತಿದ್ದರು. ಕುಡಿತದ ಚಟದಿಂದಾಗಿ ಆತನ ಆರೋಗ್ಯ ಕೈಕೊಟ್ಟು, ಚಿಕಿತ್ಸೆಯಿಂದಲೂ ಆತ ಬದುಕುಳಿಯಲಿಲ್ಲ.

ಆದರೆ ಇದೀಗ ಆತನಿಗೆ ಚಿಕಿತ್ಸೆ ನೀಡಿದ ಜಿಲ್ಲಾಸ್ಪತ್ರೆಯ ವೈದ್ಯ ಡಾ. ನಾಗೇಶ್ ಅವರ ನಿರ್ಲಕ್ಷ್ಯ ಧೋರಣೆಯಿಂದ ವೈರಲ್ ಸ್ಟಾರ್ ವೈಕುಂಠ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತನ ಹಿತೈಷಿಗಳು,ಅಭಿಮಾನಿಗಳು ಇಂದು ಆಸ್ಪತ್ರೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದರು.

ಘಟನೆಯ ಬಗ್ಗೆ ವಿವರಣೆ ನೀಡಿದ ರಂಜಿತ್ ಅವರು ತೀವ್ರ ಅನಾರೋಗ್ಯದಿಂದ ನರಳುತಿದ್ದ ಹಾಡುಗಾರ ವೈಕುಂಠನನ್ನು 108 ಅಂಬುಲೆನ್ಸ್ನಲ್ಲಿ ನ.13ರ ಅಪರಾಹ್ನ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ವೇಳೆ ಡಾ.ನಾಗೇಶ್, ಬೀದಿಯಲ್ಲಿರುವವರನ್ನೆಲ್ಲಾ ಸೇರಿಸಿಕೊಳ್ಳಲು ಇಂದು ಧರ್ಮಛತ್ರವಲ್ಲ. ನಮಗೆ ಊಟ ಮಾಡಲೂ ಅವಕಾಶ ಕೊಡುವುದಿಲ್ಲ ಎಂದೆಲ್ಲಾ ಅವಮಾನಕರ ರೀತಿಯಲ್ಲಿ ಬೈದು ರೋಗಿಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಇದನ್ನೆಲ್ಲಾ ಶೂಟಿಂಗ್ ಮಾಡಲು ಮುಂದಾದ ತಮ್ಮ ಮೊಬೈಲ್ನ್ನು ಕಿತ್ತುಕೊಂಡು ಹಾಳುಗೆಡವಿದ್ದರು ಎಂದು ದೂರಿದರು .

ಡಾ|ನಾಗೇಶ್

ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ವೈದ್ಯ ಡಾ|ನಾಗೇಶ್ ಅವರು ಸರಕಾರಿ ಆಸ್ಪತ್ರೆ ಇರುವುದೇ ಬಡವರಿಗಾಗಿ. ನಾವು ವೈಕುಂಠನನ್ನು ಅಡ್ಮಿಟ್ ಮಾಡಿಕೊಂಡು ಸಿಟಿ ಸ್ಕಾನ್ ಸೇರಿದಂತೆ ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಿದ್ದೇವೆ. ಆದರೆ ವೆಂಟಿಲೇಟರ್ನಲ್ಲಿ ಇಟ್ಟ ನಂತರ ರೋಗಿ ಬದುಕುವ ಸಾಧ್ಯತೆ 50:50 ಮಾತ್ರ ಇರುತ್ತದೆ. ನಾನು ವೈದ್ಯನಾಗುವುದಕ್ಕಿಂತ ಮೊದಲೇ ನನಗೆ ವೈಕುಂಠ ಪರಿಚಿತರು. ಶಾಸ್ತ್ರೀವೃತ್ತದಲ್ಲಿ ಸಿಕ್ಕಾಗಲೆಲ್ಲಾ ಅವರನ್ನು ಮಾತನಾಡಿಸುತ್ತಿದ್ದೆ. ಆಸ್ಪತ್ರೆಗೆ ದಾಖಲಾಗುವ ವೇಳೆಯಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ವಿಶೇಷ ಮುತುವರ್ಜಿ ವಹಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇನೆ. ಸೋಮವಾರ ಬೆಳಿಗ್ಗೆಯೂ ವೈಕುಂಠ ಎಂದು ಕರೆದು ಏನು ಆಗಲ್ಲ ಎಂದು ಧೈರ್ಯ ತುಂಬಿದ್ದೆ. ಬಾಯಿಗೆ ಯಂತ್ರ ಅಳವಡಿಸಿದ್ದರಿಂದ ಕೈಅಲುಗಾಡಿಸಿ ನನ್ನ ಮಾತಿಗೆ ಪ್ರತಿಸ್ಪಂದಿಸಿದ್ದರು. ನಮ್ಮೆಲ್ಲಾ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆಗೆ ಸ್ಪಂಧಿಸದೇ ಅವರು ಸಾವನ್ನಪ್ಪಿದ್ದಾರೆ. ಇದರಲ್ಲಿ ನಮ್ಮ ನಿರ್ಲಕ್ಷ್ಯ ಏನೂ ಇರುವುದಿಲ್ಲ

ಮಂಗಳವಾರ ಆಂಬುಲೆನ್ಸ್ ಮೂಲಕ ವೈಕುಂಠ ಅವರ ಮೃತದೇಹ ನೇರಂಬಳ್ಳಿಯಲ್ಲಿರುವ ಅವರ ಮನೆಗೆ ಸಂಜೆ ತರಲಾಯಿತು. ಮನೆಯಲ್ಲಿ ಅಂತಿಮ ವಿಧಿವಿಧಾನಗಳು ನಡೆದ ಬಳಿಕ ಕುಂದಾಪುರದ ಶಾಸ್ತ್ರೀವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ ಎದುರು ಹದಿನೈದು ನಿಮಿಷಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.


Spread the love