ಜನರ ಋಣ ತೀರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ – ವಿನಯ ಕುಮಾರ್ ಸೊರಕೆ

Spread the love

ಜನರ ಋಣ ತೀರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ – ವಿನಯ ಕುಮಾರ್ ಸೊರಕೆ

ಉಡುಪಿ: 5 ವರ್ಷಗಳ ಕಾಲ ಕಾಪು ಕ್ಷೇತ್ರದ ಶಾಸಕನಾಗಿ ರಾಜ್ಯದ ಮಂತ್ರಿಯಾಗಿ ನನ್ನನ್ನು ಆಯ್ದು ಕಳುಹಿಸಿದ ಜನರ ಋಣ ಸಂದಾಯದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿರುತ್ತೇನೆ. ಎಲ್ಲವನ್ನೂ ಸಾಧಿಸಿದ್ದೇನೆ ಎಂಬ ಅಹಂಕಾರ ನನಗಿಲ್ಲ ಆದರೆ ಗರಿಷ್ಠ ಮಟ್ಟದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ ಎಂಬ ಹೆಮ್ಮೆ ನನಗಿದೆ. ನನ್ನ ಮತ್ತು ಕಾಂಗ್ರೆಸ್ ಸರಕಾರದ ಅಬಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ನಾನು ಚುನಾವಣೆಯನ್ನು ಎದುರಿಸಿದೆ. ಆದರೆ ಬಿಜೆಪಿ ಅಪಪ್ರಚಾರದ ಮೂಲಕ ಮತ್ತು ಭಾವನಾತ್ಮಕ ವಿಷಯಗಳನ್ನು ಕೆರಳಿಸುವ ಮೂಲಕ ಚುನಾವಣೆಗೆ ಇಳಿಯಿತು. ಜನತೆ ಅಪಪ್ರಚಾರಕ್ಕೆ ಮರುಳಾಗಿ ನಾನು ಸೋಲ ಬೇಕಾಯಿತು. ಇದು ನನ್ನ ಸೋಲಲ್ಲ, ಕಾಂಗ್ರೆಸ್ ಪಕ್ಷದ ಸೋಲಲ್ಲ, ಜನರ ಸೊಲಲ್ಲ ನೈತಿಕತೆಯ ಸೋಲು. ಸೋಲು ಹೇಗಿದ್ದರೂ ಅದನ್ನು ಒಪ್ಪಿಕೊಳ್ಳಲೇ ಬೇಕು. ನನಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೋಲು ಹೊಸತೇನಲ್ಲ. ಸೋತಲ್ಲೇ ಮತ್ತೆ ಗೆಲ್ಲುವ ಭರವಸೆ ಇದೆ. ಕಾರ್ಯಕರ್ತರು ಯಾರೂ ಕೂಡಾ ದೃತಿಗೆಡಬೇಕಾಗಿಲ್ಲ. ವಿಶ್ವಾಸವನ್ನು ಕಳೆದುಕೊಳ್ಳಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೊಮ್ಮೆ ತನ್ನ ವೈಭವವನ್ನು ಕಾಣಲಿದೆ ಎಂದು ಮಾಜಿ ಶಾಸಕರೂ ಹಾಗೂ ಮಾಜಿ ಮಂತ್ರಿಗಳೂ ಆದ ವಿನಯ ಕುಮಾರ್ ಸೊರಕೆಯವರು ಹಿರಿಯಡ್ಕ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ನುಡಿದರು.

ಅವರು ಮುಂದುವರಿಯುತ್ತಾ ನನ್ನನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿಯಾಗಿ ಬಿಂಬಿಸಿ ಅಪಪ್ರಚಾರವನ್ನು ಮಾಡಿರುತ್ತಾರೆ. ಇವತ್ತಿಗೂ ನನಗೆ ಯಕ್ಷ ಪ್ರಶ್ನೆಯಾಗಿರುವುದು ಕಾಪು ಕ್ಷೇತ್ರದ 14 ದೇವಸ್ಥಾನ ಮತ್ತು 33 ದೈವಸ್ಥಾನಗಳ ಜೀರ್ಣೋದ್ದಾರಗಳಿಗೆ ಸರಕಾರದ ನೆರವನ್ನು ದೊರಕಿಸಿ ಕೊಡುವಲ್ಲಿ ಸಫಲನಾದ ನಾನು ಮತ್ತು ನೆರವನ್ನು ಕೊಟ್ಟ ಕಾಂಗ್ರೆಸ್ ಸರಕಾರ ಹೇಗೆ ತಾನೆ ಹಿಂದೂ ವಿರೋಧಿಯಾದೀತು? ಇದಕ್ಕೆ ಬಿಜೆಪಿ ಮುಂದಿನ ದಿವಸಗಳಲ್ಲಿ ಉತ್ತರವನ್ನು ಕೊಡಬೇಕಾಗಿದೆ. ಬಿಜೆಪಿಯವರ ಹಿಂದುತ್ವ ಎನ್ನುವುದು ಅತ್ಯಂತ ಕಪಟತನದಿಂದ ಕೂಡಿದ ಹಿಂದುತ್ವ. ಇದು ಹಿಂದೂ ಧರ್ಮಕ್ಕೆ ಮಾರಕವಾದುದು. ಇಡೀ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ನಾಯಕರು ಕೇಸರಿ ಶಾಲು ಹೊದ್ದುಕೊಂಡು ಅಭಿವೃದ್ಧಿಯ ಪರ ಭಾಷಣವನ್ನು ಮಾಡದೆ ಹಿಂದುತ್ವದ ಪರ ಭಾಷಣ ಮಾಡಿದ್ದರು ಆದರೆ ಶ್ರೀ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆಯ ಭಾಷಣದ ಸಮಯದಲ್ಲಿ ಹಸಿರು ಶಾಲನ್ನು ಹೊದ್ದುಕೊಂಡು ಹಿಂದುತ್ವದ ಬಗ್ಗೆ ಚಕಾರ ಎತ್ತದೆ ಭಾಷಣ ಮಾಡಿರುವುದು ಇವರ ದ್ವಂದ್ವ ನೀತಿಯನ್ನು ಧ್ವನಿಸುತ್ತದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನತೆಯೇ ಉತ್ತರವನ್ನು ಕೊಡುತ್ತಾರೆ. ನಾನು ಚುನಾವಣೆಯಲ್ಲಿ ಸೋತಿರ ಬಹುದು ಆದರೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಧ್ವನಿಯಾಗಿ ಜನರ ಮಧ್ಯದಲ್ಲೇ ಸೇವೆಯನ್ನು ಮಾಡುತ್ತಾ ಇರುತ್ತೇನೆ. ಈಗಾಗಲೇ ಕ್ಷೇತ್ರದಲ್ಲಿ ಯೋಜಿಸಿ ಅಪೂರ್ಣವಾಗಿರುವ ಕೆಲಸಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ. ನಾನೆಂದೂ ವಿರಮಿಸುವುದಿಲ್ಲ. ನನ್ನೊಂದಿಗೆ ರಾತ್ರಿ ಹಗಲು ಸಹಕರಿಸಿದ ಕಾರ್ಯಕರ್ತರ ಸಮಸ್ಯೆಗಳಿಗೆ ಸದಾ ಧ್ವನಿಯಾಗುತ್ತೇನೆ ಎಂದರು.

ಅಭಿವೃದ್ಧಿ ಕೆಲಸಗಳನ್ನು ಮಾಡಿಯೂ ಕೂಡಾ ವಿನಯ ಕುಮಾರ್ ಸೊರಕೆಯವರು ಸೋಲುತ್ತಾರೆ ಎಂದಾದರೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ. ಸೋಲಿಗೆ ಯಾವ ಕಾರಣ ಕೂಡಾ ಸಿಗುವುದಿಲ್ಲ. ಇದರ ಬಗ್ಗೆ ಕಾರ್ಯಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಆತ್ಮಾವಲೋಕನದ ನಂತರ ದೊರಕುವ ಉತ್ತರದಿಂದ ಪಕ್ಷವನ್ನು ಮತ್ತಷ್ಟು ಬಲಿಷ್ಟವಾಗಿ ಮುಂದಿನ ದಿವಸಗಳಲ್ಲಿ ಕಟ್ಟಬೇಕಾಗಿದೆ. ಈ ಕಾರ್ಯ ಪ್ರಾರಂಭಗೊಳ್ಳಲಿ. ಕಾರ್ಯಕರ್ತರು ಎದೆಗುಂದದೆ ಮುಂದೆ ಹೆಜ್ಜೆ ಇಡಿ ಎಂದು ಕಾಂಗ್ರೆಸ್ ಹಿರಿಯ ನಾಯಕರೂ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ ನುಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಸೋಲು ಗೆಲುವು ಎನ್ನುವುದು ಸಹಜ ಪ್ರಕ್ರಿಯೆ ಆದರೆ ಗೆಲ್ಲಲು ಕಾರಣವಿದ್ದ ಹಾಗೇ ಸೋಲಲೂ ನಿರ್ದಿಷ್ಟ ಕಾರಣ ಇರಲೇ ಬೇಕು. ಆದರೆ ಕಳೆದ ಚುನಾವಣೆಯಲ್ಲಿ ವಿನಯ ಕುಮಾರ್ ಸೊರಕೆಯವರು ಸೋಲಲು ಯಾವುದೇ ಕಾರಣವನ್ನು ವೈರಿಗಳಿಗೂ ತೋರಿಸಲಾಗುವುದಿಲ್ಲ. ಹೀಗಿರುವಾಗ ಈ ಫಲಿತಾಂಶವನ್ನು ನಾವು ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ, ಅಪಪ್ರಚಾರದ ಮೂಲಕ ಜನರ ಮನಸಲ್ಲಿ ವಿಷ ಬೀಜ ತುಂಬಿಸಿದ ಬಿಜೆಪಿಯ ಕೃತ್ಯ ಸ್ಪಷ್ಟವಾಗುತ್ತದೆ. ಈ ಬಗ್ಗೆ ಮುಂದಿನ ದಿವಸಗಳಲ್ಲಿ ಕಾರ್ಯಕರ್ತರು ಎಚ್ಚರವನ್ನು ವಹಿಸಬೇಕು. ನೈತಿಕತೆಯ ವಿರುದ್ಧ ಅನೈತಿಕತೆ ವಿಜಯವನ್ನು ಸಾಧಿಸಿದೆ. ಈ ಪರಂಪರೆಗೆ ಇನ್ನು ಮುಂದೆ ಪೂರ್ಣ ವಿರಾಮವನ್ನು ಇಡುವುದಕ್ಕಾಗಿ ಕಾರ್ಯಕರ್ತರು ಕಟಿಬದ್ಧರಾಗಬೇಕು ಎಂದು ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ನುಡಿದರು.

ಈ ಚುನಾವಣೆ ರಾಜ್ಯದ ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಅಲ್ಲ. ರಾಜ್ಯದ ಕಾಂಗ್ರೆಸ್ ನಾಯಕರಿಗೂ ಪ್ರಧಾನಿ ಮೋದಿಯವರ ನಡುವೆ ನಡೆದ ಸ್ಪರ್ಧೆ ಎಂದು ಬಿಜೆಪಿ ನಾಯಕರೇ ಬಿಂಬಿಸಿದ್ದಾರೆ. ಕೇಂದ್ರದಲ್ಲಿ ಮೋದಿಯ ಜನಪ್ರಿಯತೆ ಕುಗ್ಗುತ್ತಾ ಇದೆ. ಅದು ನಮ್ಮ ರಾಜ್ಯಕ್ಕೂ ಹಬ್ಬಿದೆ ಹಾಗಾಗಿ ಅವರಿಗೆ ಇಲ್ಲಿ ಅಧಿಕಾರವನ್ನು ಪಡೆದುಕೊಳ್ಳಲು ಆಗಲಿಲ್ಲ. ಇಡೀ ದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ಇದೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಹಾಗಿಲ್ಲ ಎಂಬುದನ್ನು ಅಂಕಿ ಅಂಶಗಳ ಆದಾರದಲ್ಲಿ ಎ.ಐ.ಸಿ.ಸಿ. ಸದಸ್ಯರಾದ ಅಮೃತ್ ಶೆಣೈಯವರು ಸಭೆಗೆ ವಿವರಿಸಿದರು.

ಸಭೆಯ ಅಧ್ಯಕ್ಷ ಸ್ಥಾನವನ್ನು ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷರಾದ ಸುಧೀರ್ ಹೆಗ್ಡೆಯವರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಚಂದ್ರಿಕಾ ಕೇಳ್ಕರ್, ಮೈರ್ಮಾಡಿ ಸುಧಾಕರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀನಾರಾಯಣ ಪ್ರಭು, ಸಂಧ್ಯಾ ಶೆಟ್ಟಿ, ಕಾಪು ಬ್ಲಾಕ್ ಉತ್ತರ ವಲಯ ಗೌರವಾಧ್ಯಕ್ಷರಾದ ವಿನೋದ್ ಕುಮಾರ್, ಉಸ್ತುವಾರಿಗಳಾದ ಮಹಾಬಲ ಕುಂದರ್, ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ಆತ್ರಾಡಿ, ರಮೇಶ್ ಶೆಟ್ಟಿ ಕುಕ್ಕೆಹಳ್ಳಿ, ಮಲ್ಪೆ ರಾಘವೇಂದ್ರ, ಬಿ. ಶಂಕರ್ ಶೆಟ್ಟಿ, ಸುಗಂಧಿ ಶೇಖರ್, ಸುಂದರ್ ಪೂಜಾರಿ, ಮಾಲತಿ ಆಚಾರ್ಯ, ರಾಜು ಪೂಜಾರಿ, ಗಿರೀಶ್ ಕುಮಾರ್ , ವಿನ್ಸೆಂಟ್, ವಿವಿಧ ಗ್ರಾಮೀಣ ಸಮಿತಿಯ ಅಧ್ಯಕ್ಷರು, ವಿವಿಧ ಪಂಚಾಯತ್‍ಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಭೈರಂಪಳ್ಳಿಯವರು ಪ್ರಾರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.


Spread the love