ಜನವರಿ 28 ರಿಂದ ದೊಡ್ಡಣಗುಡ್ಡೆಯಲ್ಲಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ

Spread the love

 ಜನವರಿ 28 ರಿಂದ ದೊಡ್ಡಣಗುಡ್ಡೆಯಲ್ಲಿ  ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ

ಉಡುಪಿ:ಉಡುಪಿ ಜಿಲ್ಲಾ ಮಟ್ಟದ 2016-17 ನೇ ಸಾಲಿನ ಜಿಲ್ಲಾಮಟ್ಟದ ತೋಟಗಾರಿಕೆ ಫಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳ ಮತ್ತು ರೈತ ಸೇವಾ ಕೇಂದ್ರಗಳ ಉದ್ಘಾಟನೆಯು ಜನವರಿ 28 ರಿಂದ 30 ರ ವರೆಗೆ ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣ ದಲ್ಲಿ ನಡೆಯಲಿದೆ.

ಜನವರಿ 28 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಫಲಪುಷ್ಟ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳದಲ್ಲಿ 3000 ಗುಲಾಬಿ ಹೂಗಳು ಹಾಗೂ 1000 ಜರ್ಬೆರಾ ಹೂವಿನಿಂದ ಅಲಂಕರಿಸಿದ ಯಕ್ಷಗಾನ ಕಿರೀಟದ ಮಾದರಿ, ಮಕ್ಕಳಲ್ಲಿ ತೋಟಗಾರಿಕೆ ಆಸಕ್ತಿ ಮೂಡಿಸಲು 1000 ಆರ್ಕಿಡ್ ಹಾಗೂ 800 ಆಲ್‍ಸ್ಟ್ರೋಮೆರಿಯಾ ಹೂ ಗಳಿಂದ ಚೋಟಾ ಭೀಮ್ ಕುಟುಂಬದ ಪ್ರದರ್ಶನ, ತಾರಸಿತೋಟ ಮತ್ತು ಕೈ ತೋಟ , 19 ಪುಷ್ಪ ಜಾತಿಯ 11000 ಸಾವಿರ ಗಿಡಗಳನ್ನು ಕುಂಡಗಳಲ್ಲಿ ಹಾಗೂ ಪಾಲಿಬ್ಯಾಗ್ ಗಳಲ್ಲಿ ವಿವಿಧ ಮಾದರಿಯಲ್ಲಿ ಜೋಡಣೆ, 9000 ಗುಲಾಬಿ ಹೂಗಳಿಂದ ಅಲಂಕರಿಸಲ್ಪಟ್ಟ ಕಾಪು ದೀಪ ಸ್ತಂಭದ ಮಾದರಿ ಪ್ರದರ್ಶನಗೊಳ್ಳಲಿದೆ.

ನವಧಾನ್ಯದಿಂದ ಅಲಂಕರಿಸಲ್ಪಟ್ಟ ನಂದಿ, ಶಾವಿಗೆಯಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್. ಮರಿಗೌಡರ ಮೂರ್ತಿ, ತರಕಾರಿಗಳಲ್ಲಿ ವಿವಿಧ ಪ್ರಾಣಿ ಹಾಗೂ ಕಲಾಕೃತಿಗಳ ಕೆತ್ತನೆ ಪ್ರದರ್ಶನಗೊಳ್ಳಲಿದೆ.

ಇಲಾಖಾ ಮಳಿಗೆಗಳಲ್ಲಿ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ರೈತ ಸೇವಾ ಕೇಂದ್ರದ ಮಳಿಗೆಗಳಲ್ಲಿ ವಿವಿಧ ವಿಚಾರಗಳ ಮಾಹಿತಿ ಹಾಗೂ ವಸ್ತುಗಳ ಮಾರಾಟ, ಸಾವಯವ ವಸ್ತು ಪ್ರದರ್ಶನ, ಆಹಾರ ಮಳಿಗೆಗಳು, ಸಿರಿಧಾನ್ಯಗಳ ಪ್ರದರ್ಶನ, ಸಮಗ್ರ ಜಲಾನಯನ ಮಾದರಿ, ಕೃಷಿ ಉಪಕರಣಗಳ ಮಾದರಿ ಹಾಗೂ 3 ದಿನಗಳ ಕಾಲ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ವಿವಿಧ ವಿಚಾರಗಳ ಬಗ್ಗೆ ರೈತರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ ನಾಯ್ಕ್ ತಿಳಿಸಿದ್ದಾರೆ.


Spread the love