ಜನಾರ್ದನ ಪೂಜಾರಿ ನಿಧನ ಕುರಿತು ಕಿಡಿಗೇಡಿಗಳಿಂದ ಸುಳ್ಳು ವದಂತಿ: ಪೊಲೀಸ್ ಆಯುಕ್ತರಿಗೆ ದೂರು

Spread the love

ಜನಾರ್ದನ ಪೂಜಾರಿ ನಿಧನ ಕುರಿತು ಕಿಡಿಗೇಡಿಗಳಿಂದ ಸುಳ್ಳು ವದಂತಿ: ಪೊಲೀಸ್ ಆಯುಕ್ತರಿಗೆ ದೂರು

ಮಂಗಳೂರು: ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕುದ್ರೋಳಿ ದೇವಸ್ಥಾನ ಆಡಳಿತ ಮಂಡಳಿ  ಪೊಲೀಸ್ ಆಯುಕ್ತರಿಗೆ ಶನಿವಾರ ದೂರು ನೀಡಲಾಗಿದೆ.

ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಜನಾರ್ದನ ಪೂಜಾರಿಯವರ ಆರೋಗ್ಯದ ಬಗ್ಗೆ ವದಂತಿ ಹರಿದಾಡುತ್ತಿತ್ತು. ಈ ಬಗ್ಗೆ ಆತಂಕಿತರಾದ ಪೂಜಾರಿ ಅಭಿಮಾನಿಗಳು, ರಾಜಕೀಯ ಮುಖಂಡರು ದೇವಸ್ಥಾನ ಆಡಳಿತ ಮಂಡಳಿಯವರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

‘ದೇಶ ಕಂಡ ಪರಿಶುದ್ಧ, ನಿಷ್ಠಾವಂತ ರಾಜಕಾರಣಿ ಎಂಬ ಹೆಗ್ಗಳಿಕೆ ಪಡೆದ ಜನಾರ್ದನ ಪೂಜಾರಿ ಬಗ್ಗೆ ವಿಕೃತ ಮನಸ್ಸಿನ ಕೆಲವರು ಸುಳ್ಳು ವದಂತಿ ಹಬ್ಬಿಸಿ, ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತಿದ್ದಾರೆ. ಇದು ಕುಟುಂಬ ವರ್ಗ, ಅಭಿಮಾನಿಗಳಿಗೆ ಆತಂಕ ಉಂಟು ಮಾಡಿದೆ. ವದಂತಿ ಹಬ್ಬಿಸಿದ ವ್ಯಕ್ತಿಗಳನ್ನು ಕೂಡಲೇ ಪತ್ತೆ ಹಚ್ಚಿ ಕೂಡಲೇ ಬಂಧಿಸಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ಆಗ್ರಹಿಸಿದೆ.

ಇನ್ನು ಮುಂದಿನ ದಿನಗಳಲ್ಲಿ ಯಾರೂ ಕೂಡ ಜನಾರ್ದನ ಪೂಜಾರಿ ಬಗ್ಗೆ ಅವಹೇಳನ ಮಾಡುವ ಯಾವುದೇ ಸಂದೇಶ, ವೀಡಿಯೊಗಳನ್ನು ರವಾನಿಸದಂತೆ ಎಚ್ಚರಿಕೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ಒಂದು ವೇಳೆ ಕಿಡಿಗೇಡಿಗಳು ತಮ್ಮ ಕೃತ್ಯ ಮುಂದುವರಿಸಿದಲ್ಲಿ ದೇವಸ್ಥಾನದ ಆಡಳಿತ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


Spread the love