ಜಯನಗರ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನ

Spread the love

ಜಯನಗರ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನ

ಬೆಂಗಳೂರು: ಹೃದಯ ಸಮಸ್ಯೆ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಜಯನಗರ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ (60) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವಿಜಯಕುಮಾರ್​ ಅವರು ಗುರುವಾರ ತಡರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇಪ್ಪತ್ತು ದಿನಗಳ ಹಿಂದೆ ಹೃದಯದ ನಾಳದಲ್ಲಿ ಸಮಸ್ಯೆ ಉಂಟಾಗಿದ್ದ ಕಾರಣ ವೈದ್ಯರು ಸ್ಟೆಂಟ್ ಅಳವಡಿಸಿದ್ದರು. ದಿನಕ್ಕೆ ಒಂದೂವರೆ ಕಿ.ಮೀ.ಗಿಂತಲೂ ಹೆಚ್ಚು ನಡೆಯಬಾರದು ಎಂದು ಸಲಹೆಯನ್ನೂ ನೀಡಿದ್ದರು. ಚುನಾವಣೆ ಪ್ರಚಾರಕ್ಕಾಗಿ ಹೆಚ್ಚು ನಡೆದ ಕಾರಣ ಅವರಿಗೆ ಸಮಸ್ಯೆ ಉಂಟಾಗಿತ್ತು. ಗುರುವಾರ ಸಂಜೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಮಂಜುನಾಥ್ ಪ್ರಾಥಮಿಕ ತಪಾಸಣೆ ನಡೆಸಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಜಯಕುಮಾರ್ ಪ್ರತಿನಿತ್ಯ ಹತ್ತಾರು ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದರು. ಇದರಿಂದ ಹೃದಯದಲ್ಲಿ ಸೋಂಕು ಉಂಟಾಗಿ ಸಮಸ್ಯೆ ಹೆಚ್ಚಾಗಿತ್ತು. ಜಯನಗರದ 4ನೇ ಟಿ ಬ್ಲಾಕ್​ನಲ್ಲಿ ಗುರುವಾರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾಗ ಅವರು ಕುಸಿದು ಬಿದ್ದಿದ್ದರು.

ವಿಜಯ ಕುಮಾರ್​ ಅವರು ಜಯನಗರದಿಂದ 2008 ಮತ್ತು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವಿವಾಹಿತರಾಗಿದ್ದ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Spread the love