ಜಿಲ್ಲೆಯಲ್ಲಿ ದಮನಿತ ಮಹಿಳೆಯರಿಗೆ ಸಲಹಾ ಸಮಿತಿ, ಕೋಶ ರಚನೆ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ 

Spread the love

ಜಿಲ್ಲೆಯಲ್ಲಿ ದಮನಿತ ಮಹಿಳೆಯರಿಗೆ ಸಲಹಾ ಸಮಿತಿ, ಕೋಶ ರಚನೆ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ 

ಉಡುಪಿ: ಜಿಲ್ಲೆಯಲ್ಲಿನ ಲೈಂಗಿಕ ಕಾರ್ಯಕರ್ತೆಯರ (ದಮನಿತ ಮಹಿಳೆಯರ) ಜೀವನಮಟ್ಟ ಸುಧಾರಿಸಲು ಮತ್ತು ಅವರ ನಿಸ್ಸಾಹಾಯಕತೆಯನ್ನು ಹೋಗಲಾಡಿಸಿ ಅವರ ಜೀವನಮಟ್ಟ ಸುಧಾರಿಸಲು ಹಾಗೂ ಪುರ್ನವಸತಿ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಅನುಷ್ಠಾನಗೊಳಸಲು ಜಿಲ್ಲಾ ಮಟ್ಟದ ಸಲಹಾ ಸಮಿತಿ/ಕೋಶ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅವರು ಮಂಗಳವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಲೈಂಗಿಕ ಕಾರ್ಯಕರ್ತೆಯರ ಅಧ್ಯಯನ ಸಮಿತಿ ಸಲ್ಲಿಸಿರುವ ಶಿಫಾರಸ್ಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದ ಸಲಹಾ ಸಮಿತಿ/ಕೋಶ ರಚಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಇರುವ ಲೈಂಗಿಕ ಕಾರ್ಯಕರ್ತೆಯರ ನಿಖರ ಅಂಕಿ ಅಂಶ ಇಲ್ಲದ ಕಾರಣ, ಇವರ ಬಗ್ಗೆ ಅಂಕಿ ಅಂಶ ಸಂಗ್ರಹಣೆಯನ್ನು ಸ್ವಯಂ ಸೇವಾ ಸಂಸ್ಥೆ ಮೂಲಕ ಮಾಡಿಸುವಂತೆ ಮತ್ತು ಸಮಾಜಶಾಸ್ತ್ರ ವಿದ್ಯಾರ್ಥಿಗಳ ಮೂಲಕ ಸಹ ಮಾಹಿತಿ ಸಂಗ್ರಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಲೈಂಗಿಕ ಕಾರ್ಯಕರ್ತೆಯರು ತಮ್ಮ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಗೆ ಖುದ್ದು ಭೇಟಿ ಅಥವಾ ಪತ್ರ ಮೂಲಕ ಸಹ ತಲುಪಿಸಬಹುದಾಗಿದ್ದು, ದಮನಿತ ಮಹಿಳೆಯರು ನೀಡಿದ ಮಾಹಿತಿಯನ್ನು ಗೋಪ್ಯವಾಗಿಡಲಾಗುವುದು ಹಾಗೂ ಸರಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ದಮನಿತ ಮಹಿಳೆಯ ಜೀವನಮಟ್ಟವನ್ನು ಸಮಗ್ರವಾಗಿ ಸುಧಾರಿಸಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ದಮನಿತ ಮಹಿಳೆಯರಿಗೆ ದೈರ್ಯ ತುಂಬುವ ಕೆಲಸ ಮಾಡಿ, ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಈಗಾಗಲೇ ಜಿಲ್ಲೆಯಲ್ಲಿ ಸರಕಾರದ ಸೌಲಭ್ಯ ಪಡೆದಿರುವ ದಮನಿತ ಮಹಿಳೆಯರು, ತಮ್ಮ ಸಮುದಾಯದ ಇತರರಿಗೂ ಸಹ ಮಾಹಿತಿ ನೀಡುವುದರ ಮೂಲಕ ಅವರ ಅಭಿವೃಧ್ದಿಗೆ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಮೂಲಕ 2015 ರಿಂದ ಇದುವರೆಗೆ 32 ಮಂದಿ ದಮನಿತ ಮಹಿಳೆಯರಿಗೆ ಚೇತನಾ ಯೋಜನೆಯಡಿ ನೆರವು ನೀಡಲಾಗಿದ್ದು, ಈ ವರ್ಷ 6 ಮಂದಿಗೆ ಸೌಲಭ್ಯ ಒದಗಿಸುವ ಗುರಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಸದಸ್ಯ ಡಾ. ಶ್ರೀಪಾದ ಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love