ಜಿಲ್ಲೆಯ ಮರಳು ಸಮಸ್ಯೆಗೆ ಕೇಂದ್ರದ ಕಾನೂನು ಕಾರಣ ಹೊರತು ಜಿಲ್ಲಾಧಿಕಾರಿಗಳಲ್ಲ – ಮುಖ್ಯಮಂತ್ರಿ ಕುಮಾರಸ್ವಾಮಿ

Spread the love

ಜಿಲ್ಲೆಯ ಮರಳು ಸಮಸ್ಯೆಗೆ ಕೇಂದ್ರದ ಕಾನೂನು ಕಾರಣ ಹೊರತು ಜಿಲ್ಲಾಧಿಕಾರಿಗಳಲ್ಲ – ಮುಖ್ಯಮಂತ್ರಿ ಕುಮಾರಸ್ವಾಮಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮರಳಿನ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಕಾರಣರಲ್ಲ ಬದಲಾಗಿ ಕೇಂದ್ರ ಸರಕಾರದ ಕೆಲವೊಂದು ಕ್ಲಿಷ್ಟಕರವಾದ ಕಾನೂನುಗಳು ಎಂದು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ ಕರಾವಳಿ ಜಿಲ್ಲೆಗಳಲ್ಲಿ ಮರಳಿನ ಸಮಸ್ಯೆಯಿಂದ ಸಾಮಾನ್ಯ ಜನರು ತತ್ತರಿಸಿದ್ದಾರೆ. ಸರಕಾರಿ ಯೋಜನೆಗಳಿಗೂ ಸಹ ಮರಳು ಲಭಿಸುತ್ತಿಲ್ಲ. ಬಿಜೆಪಿಯವರು ಇದಕ್ಕೆಲ್ಲಾ ಜಿಲ್ಲಾಧಿಕಾರಿಗಳು ಹೊಣೆ ಎಂಬ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಆದರೆ ಜಿಲ್ಲಾಧಿಕಾರಿಗಳು ಇದಕ್ಕೆ ಯಾವುದೇ ರೀತಿಯಲ್ಲಿ ಹೊಣೆಯಲ್ಲ ಬದಲಾಗಿ ಸಿ ಆರ್ ಝಡ್ ಕಾನೂನು ಕೇಂದ್ರ ಸರಕಾರ ರೂಪಿಸಿದ್ದು ಇದರಲ್ಲಿ ಕ್ಲಿಷ್ಟಕರವಾದ ನಿಯಮಗಳನ್ನು ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರಕಾರ ಪಾಲಿಸಲೇಬೇಕಾಗಿದೆ. ಬಿಜೆಪಿಗರು ಪ್ರತಿಭಟನೆ ಮಾಡುವ ಬದಲು ಕೇಂದ್ರ ಸರಕಾರಕ್ಕೆ ಒತ್ತಡ ಹೇರಿ ಕಾನೂನಿನಲ್ಲಿ ಬದಲಾವಣೆ ಮಾಡುವ ಕೆಲಸ ಮಾಡುವುದು ಉತ್ತಮ ಎಂದರು.

ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿಲ್ಲ. ಚುನಾವಣೆಯ ಬಳಿಕ ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಮರಳಿನ ಕುರಿತು ಶಾಶ್ವತ ನಿಯಮಾವಳಿ ರೂಪಿಸುವ ನಿಟ್ಟಿನಲ್ಲಿ ರಾಜ್ಯಸರಕಾರ ಗಮನಹರಿಸಿದ್ದು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನೀತಿ ಸಂಹಿತೆಯ ವೇಳೆ ಒರ್ವ ಶಾಸಕರಾಗಿ ಪ್ರತಿಭಟನೆಗೆ ಕುಳಿತು ಕೊಂಡಿರುವುದು ನೀತಿ ಸಂಹಿತೆಯ ಉಲ್ಲಂಘನೆಯ್ಲಲವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರವನ್ನು ಕೇಂದ್ರ ಚುನಾವಣಾ ಆಯೋಗ ನೀಡಿದೆ ಅದರಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬಹುದು ಎಂದರು.


Spread the love