ಜೀವಂತವಿದ್ದರೂ ಮೃತರೆಂದು ಆಧಾರ್ ಕಾರ್ಡ್ ಡಿಲೀಟ್!

Spread the love

ಜೀವಂತವಿದ್ದರೂ ಮೃತರೆಂದು ಆಧಾರ್ ಕಾರ್ಡ್ ಡಿಲೀಟ್!

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಹಲವು ಸಾರ್ವಜನಿಕರ ಆಧಾರ್ ಕಾರ್ಡ್‌ಗಳು ಡಿಲೀಟ್ ಆಗಿದ್ದು, ನಮ್ಮ ಗಮನಕ್ಕೆ ಈಗಾಗಲೇ ಬಂದಿರುವ ಮೂರು ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆಯಲಾಗಿದೆ. ಸೂಕ್ತ ಕ್ರಮ ಆಗದಿದ್ದಲ್ಲಿ ಆಮ್ ಆತ್ಮ ಪಕ್ಷದ ಹಿಂದುಳಿದ ವರ್ಗದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಘಟಕದ ರಾಜ್ಯಾಧ್ಯಕ್ಷ ಬಿ ನವೀನ್ ಚಂದ್ರ ಪೂಜಾರಿ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯ ವಿವಿಧ ಕಡೆ ಜೀವಂತವಾಗಿರುವವರ ಸುಮಾರು 12 ಲಕ್ಷಕ್ಕೂ ಅಧಿಕ ಆಧಾರ್ ಕಾರ್ಡ್‌ಗಳು ಅಳಿಸಿ ಹೋಗಿರುವ ಮಾಹಿತಿ ಇದೆ. ದ.ಕ. ಜಿಲ್ಲೆಯಲ್ಲೂ ಸುಮಾರು 30000 ಮಂದಿಯ ಆಧಾರ್ ಕಾರ್ಡ್ ಡಿಲೀಟ್ ಆಗಿರುವುವುದಾಗಿ ಅಂದಾಜಿಸಲಾಗಿದೆ. ಜೀವಂತ ಇರುವಾಗಲೇ ಮೃತಟ್ಟಿದ್ದಾರೆಂದು ಆಧಾರ್ ಕಾರ್ಡ್ ಡಿಲೀಟ್ ಮಾಡಿರುವುದು ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಹಿರಿಯ ನಾಗರಿಕರು ಅದರಲ್ಲೂ ಮುಖ್ಯವಾಗಿ ಹಿರಿಯ ಮಹಿಳೆಯರ ಆಧಾ‌ರ್ ಕಾರ್ಡ್‌ಗಳು ಡಿಲೀಟ್ ಆಗಿರುವುದು ಗಮನಕ್ಕೆ ಬಂದಿದೆ. ಮಂಗಳೂರಿನ ತಾರ್ದೊಲ್ಯ ಆಕಾಶಭವನ ಮತ್ತು ಉಳ್ಳಾಲದ ಮೂರು ಮಹಿಳೆಯರ ಆಧಾರ್ ಕಾರ್ಡ್ ಡಿಲೀಟ್ ಆಗಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಸುಮಾರು 500 ಮಂದಿಯಿಂದ ದೂರು ಬಂದಿರುವುದಾಗಿ ತಿಳಿಸಿದ್ದಾರೆ. ಡಿಲೀಟ್ ಆಗಿರುವ ಬಗ್ಗೆ ಅರ್ಜಿ ನೀಡಿದ 45 ದಿನಗಳೊಳಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಹೇಳಿದ್ದಾರೆ. ಆದರೆ ಆ ಅವಧಿಯಲ್ಲಿ ಇವರು ಸರಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.

ನನಗೆ ಬಂದ ದೂರಿನಲ್ಲಿ ಒಬ್ಬರಿಗೆ ಆಶ್ರಯ ಯೋಜನೆಯಡಿ ಮನೆ ಮಂಜೂರು ಆಗಿದೆ. ಅವರಿಗೆ ವಾಸ್ತವ್ಯದ ಪ್ರಮಾಣ ಪತ್ರ ಪಡೆಯುವ ಸಂದರ್ಭ, ಅರ್ಜಿದಾರ ಮೃತಪಟ್ಟಿರುವ ಕಾರಣ ಆಧಾರ್ ಕಾರ್ಡ್‌ಡಿಲೀಟ್ ಆಗಿರುವುದಾಗಿ ಉತ್ತರ ದೊರಕಿದೆ. ಇದು ನಿಜಕ್ಕೂ ಶೋಚನೀಯ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಪರ ಎಂದು ಹೇಳಿಕೊಂಡು ಬಡವರಿಗೆ ಸರಕಾರದಿಂದ ಸಿಗುವ ಸವಲತ್ತುಗಳಿಗೆ ತೊಂದರೆ ಮಾಡಿದ್ದಾರೆ. ಈ ಅವ್ಯವಸ್ಥೆ ವಿರುದ್ಧ ವಿಪಕ್ಷವೂ ಮೌನವಾಗಿರುವ ಕಾರಣ ಕೇಂದ್ರ ಸರಕಾರವೂ ಕಾರಣವೆಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅವರು ದೂರಿದರು.

ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಒಂದು ವಾರದೊಳಗೆ ಕ್ರಮ ವಹಿಸುವ ಭರವಸೆ ದೊರಕಿದೆ. ಮತ್ತೊಮ್ಮೆ ಭೇಟಿ ನೀಡಿ ಮನವಿ ಮಾಡಲಾಗುವುದು. 10 ದಿನಗಳಲ್ಲಿ ಸೂಕ್ತ ಕ್ರಮ ಆಗದಿದ್ದರೆ ಪಕ್ಷದಿಂದ ಮುಂದಿನ ಹೋರಾಟವನ್ನು ನಿರ್ಧರಿಸಲಾಗುವುದು ಎಂದರು.

ಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ರವಿ ಪ್ರಸಾದ್, ಕುಶಲ್ ಕುಮಾರ್, ಪಾಂಡುರಂಗ, ಕೆ.ಎ., ದ್ಯಾವಪ್ಪ ಗಿರಿಯಪ್ಪಣ್ಣವ‌ರ್, ಸಂದೀಪ್ ಶೆಟ್ಟಿ ಅಡ್ಕ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments