ಜು. 20: ಕುಂದಾಪುರದಲ್ಲಿ 2ನೇ ವರ್ಷದ ‘ಲಗೋರಿ’ ಗ್ರಾಮೀಣ ಕ್ರೀಡಾಕೂಟ

Spread the love

ಜು. 20: ಕುಂದಾಪುರದಲ್ಲಿ 2ನೇ ವರ್ಷದ ‘ಲಗೋರಿ’ ಗ್ರಾಮೀಣ ಕ್ರೀಡಾಕೂಟ

ಕುಂದಾಪುರ: ಕುಂದಾಪ್ರ ಕನ್ನಡ ಭಾಷೆಯ ಹೆಸರಿನಲ್ಲಿ, 2ನೇ ವರ್ಷದ ‘ಲಗೋರಿ’ ಗ್ರಾಮೀಣ ಕ್ರೀಡಾಕೂಟವನ್ನು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಇಲ್ಲಿನ ಬೋರ್ಡ್ ಹೈಸ್ಕೂಲು ಮೈದಾನದಲ್ಲಿ ಜು.20 ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.

ಬುಧವಾರ ಕಲಾಕ್ಷೇತ್ರ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಇತ್ತೀಚಿನ ಹಲವು ವರ್ಷಗಳಿಂದ ಪ್ರತಿ ವರ್ಷ ನಡೆಯುವ ಕರ್ಕಾಟಕ ಅಮವಾಸ್ಯೆ ದಿನದಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಬೇಕೆಂಬ ಇಂಗಿತವನ್ನು ಕುಂದಾಪ್ರ ಕನ್ನಡದ ಭಾಷಾಭಿಮಾನಿಗಳು ವ್ಯಕ್ತಪಡಿಸಿದ್ದರು. ಅಂದಿನಿಂದ ಜಗತ್ತಿನಾದ್ಯಂತ ಕುಂದಾಪುರ ಭಾಷಿಕರು ಆ ದಿನವನ್ನು ಆಚರಣೆ ಮಾಡಲಾರಂಭಿಸಿ ಕುಂದಾಪುರ ಕನ್ನಡದ ಭಾಷಾಭಿಮಾನ ಗಮನಾರ್ಹವಾಗಿ ಹೆಚ್ಚಾಗಿದೆ. ಕಲಾಕ್ಷೇತ್ರ ಈ ಹಿನ್ನೆಲೆಯಲ್ಲಿ, ಇಂದಿನ ಜನಾಂಗ ನೋಡದ ಮತ್ತು ಆಡದ ಆಟಗಳನ್ನು ಭಾಷಾ ಪ್ರೇಮಿಗಳನ್ನು ಒಗ್ಗೂಡಿಸಿ ಆಡಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೇರಿದಂತೆ ಉಡುಪಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಇತರ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದರು.

ಕ್ರೀಡೆಗಳು
12 ವರ್ಷದೊಳಗಿನವರಿಗೆ ಗುರಿ ಇಟ್ಟು ಹೊಡೆಯುವುದು, ಚಕ್ರವ್ಯೂಹ, ಗೋಣಿಚೀಲ ಓಟ, ಸೈಕಲ್ ಟಯರ್ ಓಟ, ನಿಮ್ಮ್ ಕಾಲ್ಗುಣ, 17 ವರ್ಷ ಮೇಲ್ಪಟ್ಟವರಿಗೆ ಉಪ್ಪುಮುಡಿ, ಗೋಣಿಚೀಲ ಓಟ, ಗೂಟ ಸುತ್ತಿ ಓಟ, ಸೈಕಲ್ ಟಯರ್ ಓಟ, ಕಂಬಳ, 65 ವರ್ಷದೊಳಗಿನ ಮುಕ್ತ ವಿಭಾಗದಲ್ಲಿ ಗೋಣಿಚೀಲ ಓಟ, ಕಂಬಳ, ಸೈಕಲ್ ಟಯರ್ ಓಟ, ಗೂಟ ಸುತ್ತಿ ಓಟ, ಉಪ್ಪಮುಡಿ, ಕಣ್ಣುಕಟ್ಟಿ ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಲಿವೆ. ಅಲ್ಲದೇ ಮುಕ್ತ ವಿಭಾಗದಲ್ಲಿ ಗುಂಪು ಆಟದ ಸ್ಪರ್ಧೆಗಳು ನಡೆಯಲಿದ್ದು, ಪುರುಷರಿಗೆ ಲಗೋರಿ, ಚೆಂಡಾನ್ ಚೆಂಡು, ಹಗ್ಗ ಜಗ್ಗಾಟ (9 ಮಂದಿ), ಮಹಿಳೆಯರಿಗೆ ಬೆನ್ಚೆಂಡು, ಡೊಂಕಾಲು, ಥ್ರೋ ಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳಿರುತ್ತದೆ. ಜೊತೆಗೆ ಚೆನ್ನೆಮಣೆ, ಗುಡ್ನ, ಗೋಲಿ ಆಟಗಳ ಪ್ರದರ್ಶನ ನಡೆಯಲಿದೆ ಎಂದರು.

ಭಾಷೆಯ ಹೆಸರಲ್ಲಿ ಕ್ರೀಡಾಕೂಟ:
ಇತ್ತೀಚೆಗೆ ಜಾತಿ ಧರ್ಮದ ಹೆಸರಿನಲ್ಲಿ ಕ್ರೀಡಾಕೂಟಗಳು ನಡೆಯುವುದು ಹೆಚ್ಚಾಗಿದೆ. ಆದರೆ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಭಾಷೆಯ ಹೆಸರಿನಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಈ ಮೂಲಕ ತೆರೆಯ ಮರೆಗೆ ಸರಿಯುತ್ತಿರುವ ಗ್ರಾಮೀಣ ಆಟಗಳನ್ನು ಮತ್ತೆ ಮುನ್ನೆಲೆಗೆ ತರುವುದು ಈ ಕೂಟದ ಉದ್ದೇಶವಾಗಿದೆ ಎಂದು ಕಿಶೋರ್ ಕುಮಾರ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಕಲಾಕ್ಷೇತ್ರ ಸಂಸ್ಥೆಯ ಕೆ.ಆರ್.ನಾಯ್ಕ್, ದಾಮೋದರ ಪೈ, ಗೋಪಾಲ್ ಪೂಜಾರಿ, ಡಾ| ರಾಜಾರಾಮ ಶೆಟ್ಟಿ, ಪ್ರವೀಣ್ಚಂದ್ರ ಶೆಟ್ಟಿ, ಜಾಯ್ ಕರ್ವಾಲೊ, ಕಮಲ್ ಕಿಶೋರ್, ರಾಜೇಶ್ ಕಾವೇರಿ, ರಾಮಚಂದ್ರ, ಸಾಯಿನಾಥ ಶೇಟ್, ಪ್ರವೀಣ್ ಕುಮಾರ್, ಶ್ರೀಧರ ಸುವರ್ಣ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments