ಜೂನ್ 1ರಿಂದ ರಾಜ್ಯದ ದೇವಸ್ಥಾನ ಓಪನ್,  ಮಸೀದಿ, ಚರ್ಚ್ ತೆರೆಯುವ ಬಗ್ಗೆ ನಿರ್ಧಾರ ಮಾಡಿಲ್ಲ – ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Spread the love

ಜೂನ್ 1ರಿಂದ ರಾಜ್ಯದ ದೇವಸ್ಥಾನ ಓಪನ್,  ಮಸೀದಿ, ಚರ್ಚ್ ತೆರೆಯುವ ಬಗ್ಗೆ ನಿರ್ಧಾರ ಮಾಡಿಲ್ಲ – ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿ ಮಾಡಲಾಗಿದ್ದ ಲಾಕ್‍ ಡೌನ್‍ನಿಂದ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ಬರೋಬ್ಬರಿ 63 ದಿನಗಳ ಬಳಿಕ ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.

ದೇವಾಲಯಗಳನ್ನು ತೆರೆಯುವ ಕುರಿತ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭಾಗಿದ್ದರು. ಸಭೆಯಲ್ಲಿ ಜೂನ್ ತಿಂಗಳಲ್ಲಿ ದೇವಸ್ಥಾನಗಳಿಗೆ ಅವಕಾಶ ಕೊಡುವ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಜೂನ್ 1 ರಿಂದ ದೇವಸ್ಥಾನ ತೆರೆಯುವ ನಿರ್ಧಾರ ಮಾಡಲಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳನ್ನು ತೆರೆದು ಪೂಜಾ ಕೈಂಕರ್ಯಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯ ಮಾಡಲಾಗಿದೆ. ಮಸೀದಿ, ಚರ್ಚ್‍ಗಳನ್ನು ತೆರೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.

ದೇವಾಲಯಗಳನ್ನು ತೆರೆಯಲು ಮಾರ್ಚ್ 31ರ ವೇಳೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಧಾರ್ಮಿಕ ಸಭೆ, ಜಾತ್ರೆ ಹಾಗೂ ದೇವರ ಉತ್ಸವಗಳನ್ನು ನಡೆಸಲು ಅನುಮತಿ ಇಲ್ಲ. ನಾಳೆಯಿಂದ ಆಯ್ದ 52 ದೇವಸ್ಥಾನಗಳಲ್ಲಿ ಆನ್‍ಲೈನ್ ಮೂಲಕ ದೇವರ ಸೇವೆಗಳ ಕಾರ್ಯಗಳ ಬುಕಿಂಗ್ ಆರಂಭ ಮಾಡಲಾಗುತ್ತದೆ. ಮೈಸೂರು ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮುಕಾಂಭಿಕಾ, ಧರ್ಮಸ್ಥಳ ಸೇರಿದಂತೆ ಪ್ರಮುಖ 52 ದೇವಾಲಯಗಳು ಜೂನ್ 1ರಿಂದ ತೆರೆಯಲಿವೆ.


Spread the love