ಜೂನ್ 7: ಪುತ್ತೂರಿನಲ್ಲಿ ತುಳು ಭಾಷಾ ವಿದ್ಯಾರ್ಥಿಗಳಿಗೆ ಅಭಿನಂದನೆ

Spread the love

ಜೂನ್ 7: ಪುತ್ತೂರಿನಲ್ಲಿ ತುಳು ಭಾಷಾ ವಿದ್ಯಾರ್ಥಿಗಳಿಗೆ ಅಭಿನಂದನೆ

ಮಂಗಳೂರು : 2018ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತುಳು ಭಾಷೆಯ ಪಠ್ಯದಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳು ಹಾಗೂ ಶಾಲೆಗಳ ಮುಖ್ಯಸ್ಥರನ್ನು ಅಭಿನಂದಿಸುವ ಕಾರ್ಯಕ್ರಮ ಜೂನ್ 7 ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಆಯೋಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ 22 ಶಾಲೆಗಳಲ್ಲಿ 417 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. ಹೆಚ್ಚಿನ ಶಾಲೆಗಳು ಹಾಗೂ ವಿದ್ಯಾರ್ಥಿಗಳು ಪುತ್ತೂರು ತಾಲೂಕಿನವರಾಗಿರುವುದರಿಂದ ಪುತ್ತೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿರುತ್ತದೆ.

ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ. ನಾಗೇಂದ್ರ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದ.ಕ ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅಭಿನಂದನಾ ಭಾಷಣ ಮಾಡಲಿದ್ದಾರೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ.ಸೀತಾರಾಮ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ ಮತ್ತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಪಠ್ಯ ಅನುಷ್ಠಾನ ಬಗ್ಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಈ ಶೈಕ್ಷಣಿಕ ವರ್ಷದಲ್ಲಿ 100 ಶಾಲೆಗಳಲ್ಲಿ ಅನುಷ್ಠಾನದ ಗುರಿ ಇರಿಸಲಾಗಿದೆ. ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಸ್ಥಳೀಯ ಸಂಸ್ಕøತಿ ಆಧಾರಿತ ಶಿಕ್ಷಣ ದೊರಕಲಿದ್ದು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುತ್ತಿರುವುದರಿಂದ ಶಾಲೆಗಳ ಶೇಕಡಾವಾರು ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗಿದೆ. ತುಳು ಪಠ್ಯ ಯೋಜನೆಯ ಯಶಸ್ಸಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲೆಗಳ ಮುಖ್ಯಸ್ಥರು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಮತ್ತು ಈ ಕಾರ್ಯಕ್ರಮದಲ್ಲಿ ತುಳು ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಅಧ್ಯಕ್ಷ ಎ.ಸಿ ಭಂಡಾರಿ ಇವರ ಪ್ರಕಟಣೆ ತಿಳಿಸಿದೆ.


Spread the love