ಝುಬೈರ್ ಮನೆ ಭೇಟಿ ವೇಳೆ ಕಾರಿನ ಮೇಲೆ ಕಲ್ಲು ತೂರಾಟ ನಡೆದಿಲ್ಲ; ಖಾದರ್ ಸ್ಪಷ್ಟನೆ

Spread the love

ಝುಬೈರ್ ಮನೆ ಭೇಟಿ ವೇಳೆ ಕಾರಿನ ಮೇಲೆ ಕಲ್ಲು ತೂರಾಟ ನಡೆದಿಲ್ಲ; ಖಾದರ್ ಸ್ಪಷ್ಟನೆ

ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮುಕ್ಕಚೇರಿ ನಿವಾಸಿ ಝಬೈರ್ ಮನೆಗೆ ಭೇಟಿಗೆ ತೆರಳಿದ ವೇಳೆ ನನ್ನ ಕಾರಿನ ಮೇಲೆ ಯಾವುದೇ ಕಲ್ಲು ತೂರಾಟ ನಡೆದಿಲ್ಲ ಎಂದು ರಾಜ್ಯದ ಆಹಾರ ಸಚಿವ ಹಾಗೂ ಉಳ್ಳಾಲದ ಶಾಸಕರಾಗಿರುವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.

ಕೆಲವೊಂದು ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬಗ್ಗೆ ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಅವರು ನಾನು ಝಬೈರ್ ಮನೆಗೆ ಭೇಟಿಯನ್ನು ಮಾಡಲು ತೆರಳುತ್ತಿದ್ದ ವೇಳೆ ಡಿವೈಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಪರಿಣಾಮ ರಸ್ತೆ ಸಂಪೂರ್ಣ ಬ್ಲಾಕ್ ಆಗಿದ್ದು, ನಾನು ನಡೆದುಕೊಂಡೇ ತೆರಳಿದ್ದೆ. ಈ ವೇಳೆ ಕೆಲವೊಂದು ವ್ಯಕ್ತಿಗಳು ಝುಬೈರ್ ಮನೆ ಬಳಿ ಕೂಗಲು ಆರಂಭಿಸಿದ ವೇಳೆ ಜನರು ಗುಂಪು ಸೇರಿದರು ಆದ್ದರಿಂದ ಅಲ್ಲಿ ಪುನಃ ಯಾವುದೇ ಘರ್ಷಣೆಗೆ ಕಾರಣವಾಗಬಾರದು ಎಂಬ ಉದ್ದೇಶದಿಂದ ನಾನು ಅಲ್ಲಿಂದ ವಾಪಾಸು ಬಂದಿದ್ದು ನನ್ನ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಮಾದಕ ಪದಾರ್ಥಗಳ ತಡೆಗೆ ಮತ್ತು ರೌಡಿ ನಿಗ್ರಹ ಉದ್ದೇಶದಿಂದ ಉಳ್ಳಾಲ, ಕೊಣಾಝೆ, ನಾಗುರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚನೆ ಮಾಡಲಾಗುವದು. ಈ ಕುರಿತಾಗಿ ಹಿರಿಯ ಪೋಲಿಸ್ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡಸಿದ್ದು ಮುಕ್ಕಚೇರಿಯ ಕೊಲೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಗುವುದು. ರೌಡಿಸಂ ಮತ್ತು ಮಾದಕ ವಸ್ತುಗಳ ಬಗ್ಗೆ ನಿಗಾ ವಹಿಸಿ ಅದನ್ನು ಮಟ್ಟ ಹಾಕಲಾಗುವುದು ಎಂದರು.


Spread the love